ಹದಿಹರೆಯದವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ
ಕ.ಪ್ರ. ವಾರ್ತೆ ಸಿಂಧನೂರು ಜ.28
ಹದಿಹರೆಯದವರಲ್ಲಿ ಕಂಡುಬರುವ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಆರೈಕೆ ಪಡೆದರೆ ಮುಂದಿನ ಹಂತದಲ್ಲಿ ಆರೋಗ್ಯ ತೊಡಕುಗಳನ್ನು ನಿವಾರಿಸಬಹುದೆಂದು ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ತಜ್ಞ ಡಾ. ಪ್ರಶಾಂತ ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ತಾಲೂಕು ಆರೋಗ್ಯಾಧಿಕಾರಿಗಳ ಆಶ್ರಯದಲ್ಲಿ ಅದಿತ್ಯ ಸ್ವತಂತ್ರ ಪಪೂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಹದಿಹರೆಯದವರ ಆರೋಗ್ಯ ಸಂರಕ್ಷಣೆ ಕುರಿತು ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೂಕ್ತ ಮಾರ್ಗದರ್ಶನ ಅವಶ್ಯ: ದೇಶದ ಜನಸಂಖ್ಯೆಯ ಶೇ. 22ರಷ್ಟಿರುವ ಹದಿಹರೆಯದವರಿಗೆ ಸೂಕ್ತ ಮಾರ್ಗದರ್ಶನ ಸಿಗಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಸಕಾಲದಲ್ಲಿ ಪೌಷ್ಟಿಕ ಆಹಾರ ಸೇವಿಸಬೇಕು. ಹಾಗೆಯೇ ಪ್ರತಿಯೊಂದು ಸರ್ಕಾರಿ ಸಂಸ್ಥೆಯಲ್ಲಿ ಪ್ರತಿ ಗುರುವಾರ ಮ.3ರಿಂದ 5ರವರೆಗೆ ಸ್ನೇಹಾ ಕ್ಲಿನಿಕ್‌ನಲ್ಲಿ ಹದಿಹರೆಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ ಎಂದು ತಿಳಿಸಿದರು.
ವೈದ್ಯಾಧಿಕಾರಿಗಳಾದ ಡಾ. ರಮ್ಯ ದೀಪಿಕಾ ಹಾಗೂ ಈಶ್ವರ ದಾಸಪ್ಪನವರ್ ಮಾತನಾಡಿ, ಮಾನಸಿಕವಾಗಿ ದೈಹಿಕವಾಗಿ ಬದಲಾವಣೆಯ ಸೂಕ್ಷ್ಮ ಕಾಲ ಘಟ್ಟವಿದು. ಹೆಣ್ಣು- ಗಂಡಿನ ಹಾರ್ಮೋನುಗಳು ತೀವ್ರಗತಿಯಲ್ಲಿ ಬೆಳವಣಿಗೆಯಾಗುತ್ತವೆ. ಪಾಲಕರು, ಸಹಪಾಠಿಗಳು, ಗುರುಗಳು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕರಿಸಬೇಕೆಂದು ತಿಳಿಸಿದರು.
ಮಹಿಳಾ ಕ್ಲಬ್ ನೆರವು ಪಡೆಯಿರಿ: ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚಕ್ರವರ್ತಿ ಮಾತನಾಡಿ, ಹೆಣ್ಣುಮಕ್ಕಳು ಶಿಕ್ಷಣವನ್ನು ಮುಂದುವರಿಸಬೇಕು. ಹದಿಹರೆಯದಲ್ಲಿ ಕಂಡುಬರುವ ಸಮಸ್ಯೆಗಳಿಗೆ ತಕ್ಷಣವೇ ಗಮನ ನೀಡಬೇಕು. ಕಾಲೇಜಿನ ಮಹಿಳಾ ಕ್ಲಬ್ ಮೂಲಕ ವೈದ್ಯರ ಸಲಹೆ ಪಡೆಯಲು ಹಾಗೂ ಬಾಲ್ಯ ವಿವಾಹಗಳು ಕಂಡುಬಂದಲ್ಲಿ ತಡೆಗಟ್ಟಲು ಮುಂದಾಗಬೇಕೆಂದು ತಿಳಿಸಿದರು.
ವಿವಿಧ ಕಾಲೇಜುಗಳ ಸ್ಪರ್ಧಾಳುಗಳು ಮಾತನಾಡಿದರು. ಪ್ರಥಮ ಸ್ಥಾನವನ್ನು ಆದಿತ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಿಂಧೂಜಾ, ದ್ವಿತೀಯ ಸ್ಥಾನವನ್ನು ಕರ್ನಾಟಕ ಕಾಲೇಜಿನ ಮಂಜುಳಾ ಹಾಗೂ ತೃತೀಯ ಸ್ಥಾನವನ್ನು ಆದಿತ್ಯ ಸ್ವತಂತ್ರ ಪಪೂ ಕಾಲೇಜಿನ ಕು. ಲಾವಣ್ಯ ಪಡೆದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಶೋಕ ಬೆಣ್ಣೂರ, ದೊಡ್ಡಬಸವ ಮಸ್ಕಿ, ಹನುಮೇಶ ಟಿ, ಸತ್ಯಪ್ರಕಾಶ ಈ, ಮಂಜುಳಾ, ಲಕ್ಷ್ಮೀ ಶಂಕ್ರಪ್ಪ ಹಾಜರಿದ್ದರು. ಉಪನ್ಯಾಸಕ ಎಂ.ಎಂ. ವಾಲಿಕಾರ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

