ನಿರಾಶ್ರಿತರಿಗೆ ಪ್ರಮಾಣ ಪತ್ರ: ಡಿಸಿ
ಸಿಂಧನೂರು: ತಾಲೂಕಿನ ಆರ್.ಎಚ್.ಕ್ಯಾಂಪ್(ಪುನರ್ವಸತಿ)ಗಳ ಬಂಗಾಲಿ ನಿರಾಶ್ರಿತ ಕುಟುಂಬಗಳ ಸಮೀಕ್ಷೆ ನಡೆಸಿ ಎಸ್ಸಿ ಪ್ರಮಾಣ ಪತ್ರ ನೀಡಲು ಸಿಎಂ ಸೂಚಿಸಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಆದಷ್ಟು ಶೀಘ್ರದಲ್ಲಿ ಪ್ರಮಾಣ ಪತ್ರ ನೀಡುವುದಾಗಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಭರವಸೆ ನೀಡಿದರು.
ಆರ್.ಎಚ್.ನಂ. 4ರಲ್ಲಿ ಸೋಮವಾರ ಜನಕಲ್ಯಾಣ ಸಂಸ್ಥೆ ಹಾಗೂ ಗಿವ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪಾಠೋಪಕರಣ ಹಾಗೂ ಶೌಚಾಲಯ ಸ್ವಚ್ಛತಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಈ ಕ್ಯಾಂಪುಗಳ ನಿರಾಶ್ರಿತರ ಎಲ್ಲ ಸಮಸ್ಯೆಗಳ ಕುರಿತು ಸಿಎಂ ಎರಡು ಬಾರಿ ಸಭೆ ನಡೆಸಿದ್ದಾರೆ. ನಾಗರಿಕ ಪ್ರಮಾಣ ಪತ್ರ, ಗಡಿ ಪ್ರಮಾಣ ಪತ್ರದ ಕುರಿತಾಗಿಯೂ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವುದಾಗಿ ಹೇಳಿದ ಅವರು, ಆದಷ್ಟು ಶೀಘ್ರದಲ್ಲಿ ಬಂಗಾಲಿ ನಿರಾಶ್ರಿತರನ್ನು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆ ಮಾಡುವ ಪ್ರಯತ್ನ ಮಾಡುವುದಾಗಿ ಹೇಳಿದರು.
15 ದಿನಗಳಲ್ಲಿ ವರದಿ ಸಲ್ಲಿಕೆ: ತಹಸೀಲ್ದಾರ್ ವೆಂಕನಗೌಡ ಪಾಟೀಲ್ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದ ಅನ್ವಯ 15 ದಿನಗಳಲ್ಲಿ ಬಂಗಾಲಿ ನಿರಾಶ್ರಿತರ ಜೀವನದ ಸ್ಥಿತಿಗತಿಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.
ಜನಕಲ್ಯಾಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸೇನ್ ರಪ್ತಾನ ಮಾತನಾಡಿ, ಕಳೆದ 43 ವರ್ಷಗಳಿಂದ ಬಂಗಾಲಿ ಕುಟುಂಬಗಳು ಇಲ್ಲಿ ವಾಸವಾಗಿದ್ದು, ಅನಕ್ಷರಸ್ಥರಾದ ಕಾರಣ ಪೌರತ್ವ ಹಾಗೂ ಗಡಿ ಪ್ರದೇಶದ ಪ್ರಮಾಣ ಪತ್ರಗಳನ್ನು ಕಳೆದುಕೊಂಡಿದ್ದಾರೆ. ಈಗ ಪುನಃ ಆ ಪತ್ರ ಹಾಗೂ ಎಸ್ಸಿಗೆ ಸೇರಿಸುವ ವಿನಂತಿಯನ್ನು ಅನೇಕ ಜಿಲ್ಲಾಧಿಕಾರಿಗಳಿಗೆ, ಮಂತ್ರಿಗಳಿಗೆ ನೀಡಿದ್ದಾರೆ. ಇಂದು ಜಿಲ್ಲಾಧಿಕಾರಿಗಳು ನೀಡಿರುವ ಆಶ್ವಾಸನೆ ನಂಬಿದ್ದಾರೆ. ಅಧಿಕಾರಿಗಳು ಜನರಿಗೆ ನೀಡಿದ ಆಶ್ವಾಸನೆಯನ್ನು ಉಳಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಅಖಿಲ ಭಾರತ ಬಂಗಾಲಿ ಉದ್ಬಸ್ತು ಸಮನ್ವಯ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ಮೇಸ್ತ್ರಿ ಮಾತನಾಡಿದರು. ಜನಕಲ್ಯಾಣ ಸಂಸ್ಥೆಯ ಉಪಾಧ್ಯಕ್ಷ ಕಲ್ಪನಾರಾಯ್ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ವಿವಿಧ ಕುಶಲಕರ್ಮಿಗಳಿಗೆ ಇಸ್ತ್ರಿಪೆಟ್ಟಿಗೆ, ಹೊಲಿಗೆ ಯಂತ್ರ, ಶೌಚಾಲಯ ಕಟ್ಟಿಸಿಕೊಂಡವರಿಗೆ ಸ್ವಚ್ಛತಾ ಸಾಮಗ್ರಿಗಳನ್ನು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

