ದೇವರು ಕೊಟ್ರೂ ಪೂಜಾರಿ ಕೊಡ್ಲಿಲ್ಲ
ಜಗನ್ನಾಥ ಆರ್. ದೇಸಾಯಿ
ರಾಯಚೂರು: 'ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ'. ಈ ಗಾದೆ ಮಾತು ಜಿಲ್ಲೆಯ ಮೂರು ತಾಲೂಕುಗಳ ತಹಸೀಲ್ದಾರರಿಗೆ ಅಕ್ಷರಶಃ ಅನ್ವಯವಾಗುತ್ತದೆ.
ಮಳೆ ಒಮ್ಮೆ ಕೈಕೊಟ್ಟರೆ, ಮತ್ತೆ ಅಕಾಲಿಕ ಅಬ್ಬರ. ಇದರಿಂದ ರೈತರು ಸಂಕಷ್ಟಗಳನ್ನೇ ಹೊದ್ದು ಮಲಗಿದ್ದಾರೆ. ಇದನ್ನು ಗಮನಿಸಿದ ಸರ್ಕಾರವೇನೋ ಜಿಲ್ಲೆಗೆ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಈ ತಹಸೀಲ್ದಾರರ ಉದಾಸೀನದಿಂದ ಹಣ ರೈತರಿಗೆ ಇನ್ನೂ ತಲುಪಿಲ್ಲ.
ವಿಚಿತ್ರ ಸಂಗತಿ ಎಂದರೆ ಸರ್ಕಾರ ಜಿಲ್ಲೆಗೆ ಬೆಳೆ ಪರಿಹಾರದ ಹಣ ಬಿಡುಗಡೆಯಾದ ವಿಚಾರ ಹಾನಿಗೀಡಾದ ರೈತರಿಗೆ ಗೊತ್ತೇ ಇಲ್ಲ. ಅವರು ಇಂದು, ನಾಳೆ ಪರಿಹಾರ ದೊರೆಯುವುದೆಂದು ಕಾದು ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ. ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಈಚೆಗೆ ಜಿಲ್ಲೆಗೆ ಭೇಟಿ ನೀಡಿದ ವೇಳೆ ಅಕಾಲಿಕ ಮಳೆಯಿಂದಾದ ಹಾನಿಗೆ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತಗಳು ಈ ನಿಟ್ಟಿನಲ್ಲಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕಿದೆ ಎಂದಷ್ಟೇ ಹೇಳಿದ್ದರು.
ಅನುದಾನ ಬಿಡುಗಡೆ: ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಕೋಟ್ಯಂತರ ರು. ಬೆಳೆ, ಆಸ್ತಿಗೆ ಹಾನಿಯಾಗಿದೆ. ಆದರೆ ರಾಜ್ಯ ಸರ್ಕಾರ ಕೊಡುವುದು ಮಾತ್ರ 'ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ'ಯಂತೆ ಅಲ್ಪ ಪರಿಹಾರ. ಆದರೆ ರೈತರಿಗೆ ಅದು ಕನಿಷ್ಠ ನೆರವಾಗುವುದು ಎಂಬುದರಲ್ಲಿ ಅನುಮಾನವಿಲ್ಲ.
ಜಿಲ್ಲೆಗೆ ರಾಜ್ಯ ಸರ್ಕಾರ ಅಕಾಲಿಕ ಮಳೆ ಸುರಿದು ಬೆಳೆ ಹಾನಿಯಾಗಿದ್ದರಿಂದ ಪರಿಹಾರವಾಗಿ ಜೂ.12ರಂದು ಸುಮಾರು 4.50 ಕೋಟಿ ಒದಗಿಸಿದೆ. ಜಿಲ್ಲಾಡಳಿತ ಸಹ ಸರ್ಕಾರದಿಂದ ಪರಿಹಾರದ ಮೊತ್ತ ಕೈಸೇರುತ್ತಿದ್ದಂತೆಯೇ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಪರಿಹಾರದ ಹಣ ವರ್ಗಾಯಿಸಿದೆ.
ಈ ಪೈಕಿ ಲಿಂಗಸ್ಗೂರು ತಾಲೂಕಿಗೆ 1.65 ಕೋಟಿ, ದೇವದುರ್ಗಕ್ಕೆ 40 ಲಕ್ಷ, ಮಾನವಿ ತಾಲೂಕಿಗೆ 2 ಕೋಟಿ ಮೊತ್ತವನ್ನು ಆಯಾ ತಾಲೂಕುಗಳ ತಹಸೀಲ್ದಾರರ ಖಾತೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಎಷ್ಟು ಪರಿಹಾರ?: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಅನುಭವಿಸಿದ ಎಲ್ಲ ಹಾನಿಯನ್ನು ತುಂಬಿಕೊಡುವ ಕಾರ್ಯ ಮಾಡುವುದಿಲ್ಲ ನಿಜ. ಆದರೆ ಸರ್ಕಾರದ ಸಚಿವ ಸಂಪುಟದ ತೀರ್ಮಾನದಂತೆ ಪರಿಷ್ಕೃತ ದರದಲ್ಲಿಯೇ ಪರಿಹಾರ ನಿಗದಿ ಮಾಡಿ ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
5 ಎಕರೆಗೆ ಮಾತ್ರ ಪರಿಹಾರ ಸೀಮಿತಗೊಳಿಸಿದ್ದು, ಮಳೆಯಾಧಾರಿತ ಪ್ರದೇಶದಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ ಬೆಳೆಗೆ 15 ಸಾವಿರ, ನೀರಾವರಿ ಪ್ರದೇಶದಲ್ಲಿನ ಬೆಳೆಗೆ ಪ್ರತಿ ಹೆಕ್ಟೇರ್ಗೆ 25 ಸಾವಿರ ಹಾಗೂ ತೋಟಗಾರಿಕೆ ಬೆಳೆಯ ಹಾನಿಗೆ 40 ಸಾವಿರ ನಿಗದಿ ಮಾಡಿ ಪರಿಹಾರ ನೀಡಲು ಸರ್ಕಾರ ಸೂಚಿಸಿದೆ.
ಹಣ ಜಮಾ, ವಿತರಣೆಯಿಲ್ಲ
ಜಿಲ್ಲಾಡಳಿತವು ಸರ್ಕಾರದಿಂದ ದೊರೆತ ಹಣವನ್ನು ತಾಲೂಕು ಆಡಳಿತಗಳಿಗೆ ಹಂಚಿಕೆ ಮಾಡಿ ಮುಗಿಸಿದೆ. ಆದರೆ ತಹಸೀಲ್ದಾರರು ಈ ನಿಟ್ಟಿನಲ್ಲಿ ಸಂಪೂರ್ಣ ಹೊಣೆಗಾರಿಕೆ ಮರೆತಿದ್ದಾರೆ. ಪರಿಹಾರದ ಮೊತ್ತ ಕೈಸೇರಿ ತಿಂಗಳಾಗುತ್ತ ಬಂದರೂ ರೈತರಿಗೆ ಬಿಡಿಗಾಸು ಪರಿಹಾರ ವಿತರಿಸಿಲ್ಲ. ಪರಿಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಂದಾಯ ಇಲಾಖೆ ರೈತರಿಗೆ ನೀಡುವಲ್ಲಿಯೂ ಅಸಡ್ಡೆ ಮೆರೆದಿದೆ. ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಇದುವರೆಗೆ ರೈತರಿಗೆ ಆಲಿಕಲ್ಲು ಅಕಾಲಿಕ ಮಳೆಯಿಂದಾದ ಹಾನಿಗೆ ಪರಿಹಾರ ವಿತರಿಸಿಲ್ಲ. ಕಂದಾಯ ಇಲಾಖೆಗೆ ಅಲೆದಾಡಿ ರೈತರು ಬೇಸರಗೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಳಂಬಕ್ಕೆ ಪ್ರತಿಕ್ರಿಯಿಸಿರುವ ಸಹಾಯಕ ಆಯುಕ್ತ ಎಂ.ಪಿ.ಮಾರುತಿ, 'ಜಿಲ್ಲೆಯಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾದ ಬೆಳೆ ಹಾನಿಗೆ ಪ್ರತಿಯಾಗಿ ಸರ್ಕಾರ ಜಿಲ್ಲೆಗೆ 4.50 ಕೋಟಿ ಬಿಡುಗಡೆಗೊಳಿಸಿದೆ. ಆ ಹಣವನ್ನು ತಾಲೂಕು ಆಡಳಿತಗಳಿಗೆ ಹಾನಿ ಅನುಸಾರ ಹಂಚಿಕೆ ಮಾಡಲಾಗಿದೆ. ಪರಿಹಾರ ವಿತರಿಸಿದ ಬಗ್ಗೆ ಮಾಹಿತಿ ಇಲ್ಲ' ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

