ರಾಯಚೂರು

ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ

Published On :

ಕ.ಪ್ರ. ವಾರ್ತೆ ್ಣ ಲಿಂಗಸ್ಗೂರು ್ಣ ಜು.10
ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡುಗಳ ನಾಗರಿಕರ ಸಮಸ್ಯೆ ಅರಿತು ಆಯಾ ವಾರ್ಡುಗಳ ಅಭಿವೃದ್ಧಿಗೆ ಸರ್ವ ಸದಸ್ಯರು ಸಹಕಾರ ನೀಡಬೇಕೆಂದು ಶಾಸಕ ಮಾನಪ್ಪ ವಜ್ಜಲ್ ಸಲಹೆ ನೀಡಿದರು.
ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಬಿಆರ್‌ಜಿಎಫ್ ಹಾಗೂ ಇತರೆ ಯೋಜನೆಗಳಡಿ ಬಿಡುಗಡೆಯಾದ ಅನುದಾನವನ್ನು ಸದಸ್ಯರಿಗೆ ಹಂಚಿಕೆ ಮಾಡದೆ ನಾಗರಿಕರು ನೀಡಿದ ದೂರನ್ನಾಧರಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದರು.
ಆಡಳಿತ ಮಂಡಳಿ ರಚನೆಯಾಗಿ ಕೆಲವೇ ತಿಂಗಳು ಕಳೆದಿವೆ. ವಾರ್ಡುಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಕೆಲಸವಾಗಿಲ್ಲ. ನಾಗರಿಕರು ಸದಸ್ಯರಿಗೆ ದೂರು ನೀಡುತ್ತಿದ್ದಾರೆ. ಬಿಡುಗಡೆಯಾದ ಹಣ ಹಂಚಿಕೆ ಮಾಡಿ ಕಾಮಗಾರಿ ಕೈಗೊಂಡು ಉಳಿದ ಹೆಚ್ಚುವರಿ ಹಣದಲ್ಲಿ ಸಾರ್ವಜನಿಕರ ಕೋರಿಕೆ ಮೇರೆಗೆ ಕಾಮಗಾರಿ ಕೈಗೊಳ್ಳಬೇಕೆಂದು ಸರ್ವ ಸದಸ್ಯರು ಮನವಿ ಮಾಡಿದರು.
ಕರಡಕಲ್ ಕೆರೆ ಅಭಿವೃದ್ಧಿ: ಪಟ್ಟಣದ ಕರಡಕಲ್ ಕೆರೆ ಅಭಿವೃದ್ಧಿಪಡಿಸಲು ಜಾಲಿ ಮರ ಸ್ವಚ್ಛಗೊಳಿಸಿದ್ದು ಬಿಟ್ಟರೆ ಬಾಕಿ ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಸದಸ್ಯ ಖಾದರ್ ಪಾಶಾ ಆರೋಪಿಸಿದರು. ಇದಕ್ಕೆ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಕೆರೆ ಅಭಿವೃದ್ಧಿಗೆ ಮೀಸಲಿಟ್ಟ 72 ಲಕ್ಷ ಅನುದಾನದಲ್ಲಿ ಜಾಲಿ ಮರಗಳ ಸ್ವಚ್ಛತೆ ಕೈಗೊಳ್ಳಲಾಗಿದೆ. 10 ಲಕ್ಷ ವೆಚ್ಚದಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ಟೆಂಡರ್ ಕರೆಯಲಾಗಿದೆ. ಇನ್ನುಳಿದ ಕಾಮಗಾರಿಗೆ ಅನುಮತಿ ದೊರೆತ ನಂತರ ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಪುರಸಭೆ ವ್ಯಾಪ್ತಿಯ ಬಹುತೇಕ ವಾರ್ಡುಗಳಲ್ಲಿ ವಿದ್ಯುತ್ ಕಂಬ ಹಾಗೂ ಬೀದಿ ದೀಪವಿಲ್ಲದೆ ನಾಗರಿಕರು ಕತ್ತಲೆಯಲ್ಲಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಪಟ್ಟಣದ ಮುಖ್ಯ ರಸ್ತೆ ತೆರವು ಕಾರ್ಯ ಕೈಗೊಂಡ ನಂತರ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸದೆ ಹಾಗೆಯೇ ಬಿಡಲಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೆಲ ಸದಸ್ಯರು ಒತ್ತಾಯಿಸಿದರು.
ಸಂಜೆ ಬಜಾರ್, ಬಸವಸಾಗರ ವೃತ್ತ, ಬಸ್ ನಿಲ್ದಾಣ ವೃತ್ತ, ಗಡಿಯಾರ ಚೌಕ್ ಸೇರಿದಂತೆ ಪ್ರಮುಖ ಕೂಡು ರಸ್ತೆಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ವೇತನ ಹೆಚ್ಚಳಕ್ಕೆ ಆಗ್ರಹ: ಪುರಸಭೆ ಸದಸ್ಯರಿಗೆ ಹಾಗೂ ದಿನಗೂಲಿ ಪೌರಕಾರ್ಮಿಕರಿಗೆ ವೇತನ ಹೆಚ್ಚಿಸಬೇಕು. ಕಾರ್ಮಿಕರಿಗೆ 6ರಿಂದ 7 ಸಾವಿರ ವೇತನ ನೀಡಬೇಕು. ಪೌರ ಕಾರ್ಮಿಕರು ಮೃತಪಟ್ಟಾಗ ಕೇವಲ 5 ಸಾವಿರ ನೀಡಲಾಗುತ್ತಿದೆ. ಇದನ್ನು 10 ಸಾವಿರಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಇನ್ನು ಸದಸ್ಯರಿಗೆ ಸರ್ಕಾರದ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಈರಣ್ಣ ಬಿರಾದಾರ ಸ್ಪಷ್ಟಪಡಿಸಿದರು. 17ನೇ ವಾರ್ಡನಲ್ಲಿ ಮಹಿಳಾ ಶೌಚಾಲಯ ಪೂರ್ಣಗೊಂಡರೂ ಉದ್ಘಾಟನೆಯಾಗದ ಪರಿಣಾಮ ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಉದ್ಘಾಟಿಸಬೇಕೆಂದು ಸದಸ್ಯ ಚೌಧರಿ ಒತ್ತಾಯಿಸಿದರು.
ಪುರಸಭೆ ಆಡಳಿತ ಮಂಡಳಿ ಪ್ರತಿ ತಿಂಗಳು ಸಭೆ ನಡೆಸಿದ ಪ್ರಯುಕ್ತ ವಾರ್ಡುಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ತೊಂದರೆಯಾಗಿದೆ. ಕೂಡಲೇ ಪ್ರತಿ ತಿಂಗಳು ದಿನಾಂಕ ನಿಗದಿಪಡಿಸಿ ಕಡ್ಡಾಯವಾಗಿ ಸಭೆ ನಡೆಸಬೇಕೆಂದು ಸದಸ್ಯರು ಮನವಿ ಮಾಡಿದರು. ಪಟ್ಟಣದಲ್ಲಿ ನಿತ್ಯ ವಿದ್ಯುತ್ ಕಡಿತಗೊಳಿಸುತ್ತಿರುವ ಪ್ರಯುಕ್ತ ಹೊಸ ಜನರೇಟರ್ ಖರೀದಿಸಲು ಸದಸ್ಯರು ಒಪ್ಪಿಗೆ ನೀಡಬೇಕೆಂದು ಮುಖ್ಯಾಧಿಕಾರಿ ಮನವಿ ಮಾಡಿದರು. ಜಲಶುದ್ಧೀಕರಣಕ್ಕೆ ಬಳಸುವ ಬ್ಲೀಚಿಂಗ್ ಪೌಡರ್ ಕಳಪೆಯಾಗಿದೆ. ಈ ಬಗ್ಗೆ ಗಮನ ಹರಿಸುವಂತೆ ಸದಸ್ಯ ಎಂ.ಡಿ. ರಫೀ ಒತ್ತಾಯಿಸಿದರು.
ಮಳಿಗೆ ಬಾಡಿಗೆ- ಪುನಃ ಟೆಂಡರ್: ಪಟ್ಟಣದಲ್ಲಿ ಖಾಸಗಿ ಅಂಗಡಿ ಮಾಲೀಕರು ಅಂಗಡಿ ಬಾಡಿಗೆ 5 ಸಾವಿರವರೆಗೆ ನೀಡಿದ್ದು, ಆದರೆ ಪುರಸಭೆ ಮಳಿಗೆಗಳ ಬಾಡಿಗೆ ಕಡಿಮೆಯಿದೆ. ಕೂಡಲೇ ಅವಧಿ ಮುಗಿದ ಮಳಿಗೆಗಳಿಗೆ ಪುನಃ ಟೆಂಡರ್ ಕರೆಯಬೇಕೆಂದು ಕೆಲ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪುನಃ ಟೆಂಡರ್ ಕರೆಯಲು ಒಪ್ಪಿಗೆ ಸೂಚಿಸಿದರು.
ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ಉಪಾಧ್ಯಕ್ಷೆ ಛೋಟೀಮಾ, ಮುಖ್ಯಾಧಿಕಾರಿ ಈರಣ್ಣ ಬಿರಾದಾರ್, ಸದಸ್ಯರಾದ ರುದ್ರಪ್ಪ, ಪಾರ್ವತಿ ಜೀವನಕುಮಾರ, ಶರಣಗೌಡ ಪಾಟೀಲ್, ಬಾಬಾಖಾಜಿ, ಫಯಾಜ್ ಅಹ್ಮದ್, ಖಾದರಪಾಶಾ, ಅನೀಸ್‌ಪಾಶಾ, ರವಿ ಚೌಧರಿ, ಅನ್ನು ಬೇಗಂ, ಜರೀನಾ ಬೇಗಂ, ಶಾಂತಾಬಾಯಿ, ವಿನಯಕುಮಾರ, ಬಾಬುರೆಡ್ಡಿ, ಗುಂಡೇರಾವ್ ದೇಸಾಯಿ, ಬಸವರಾಜ, ಶಿವಪ್ರಸಾದ ಪಂಚಾಕ್ಷರಿಮಠ, ಗದ್ದೆಮ್ಮ ಮೇಲ್ಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.