ರಾಯಚೂರು

ಕಳಪೆ ಬೀಜವೋ, ಮಳೆ ಕೊರತೆ ಕಾರಣವೋ...

Published On :

ವಿಶೇಷ ವರದಿ
ಗುಲ್ಬರ್ಗ: ಸಾವಿರಾರು ಹೆಕ್ಟೇರ್ ಬಿತ್ತನೆಯಾದರೂ ಮೊಳಕೆಯೊಡೆಯದೆ ಜಿಲ್ಲೆಯ ರೈತರನ್ನು ಕಂಗೆಡಿಸಿರುವ ಸೋಯಾಬಿನ್ ಸಂಕಟಕ್ಕೇನು ಕಾರಣ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ಸರಬರಾಜಾಗಿರುವ ಬೀಜ ಕಳಪೆಯಾಗಿದೆಯೋ? ಮಳೆ ಕೊರತೆ, ಭೂಮಿಯಲ್ಲಿನ ತೇವಾಂಶ ಕೊರತೆ ಸೋಯಾ ಸಂಕಟಕ್ಕೆ ಕಾರಣವೋ ಎಂಬ ಜಿಜ್ಞಾಸೆ ಬಿಸಿಲೂರು ರೈತ ಸಮೂಹದಲ್ಲಿ ಶುರುವಾಗಿದೆ.
ಏಕೆಂದರೆ ಮೊದಲೇ ಮಳೆಯ ಕೊರತೆಯಿಂದಾಗಿ ಪರೇಶಾನ್ ಆಗಿದ್ದ ಗುಲ್ಬರ್ಗ ರೈತ ಅಲ್ಪ ಮಳೆಯಾಯ್ತು ಎಂದು ಇದ್ದಬದ್ದ ಹಣವನ್ನೆಲ್ಲ ಹೂಡಿ ಉತ್ತಮ ಧಾರಣೆ ಮೇಲೆ ಕಣ್ಣಿಟ್ಟು ಸೋಯಾಬಿನ್ ಬಿತ್ತಿ ಲಾಭ ಪಡೆಯಬಹುದು ಎಂದು ಕಂಡಿದ್ದ ಕನಸು ಇದೀಗ ನುಚ್ಚುನೂರಾಗಿದೆ. ರೈತ ಬಿತ್ತಿರುವ ಸೋಯಾ ಭೂಮಿಯಲ್ಲೇ ಮುಳುಗಿಬಿಟ್ಟಿದೆ.
'ಫಾರ್ ಎ ಚೆಂಜ್': ಮಳೆ ಕೊರತೆ, ಭೂಮಿಯಲ್ಲಿ ತೇವಾಂಶ ಹುಡುಕುವಂತಹ ಸಂದರ್ಭ, ಇಂತಹ ಪ್ರತಿಕೂಲ ವಾತಾವರಣದಲ್ಲೂ 'ಫಾರ್ ಎ ಚೆಂಜ್' ಎಂದು ತೊಗರಿ ಬಿತ್ತನೆ ಬದಿಗೊತ್ತಿ ಸೋಯಾಬಿನ್ ಮೊರೆ ಹೊಕ್ಕ ಬಿಸಿಲೂರು ರೈತರೀಗ ತಮಗೊದಗಿರುವ ದುರವಸ್ಥೆಗೆ ಕಣ್ಣೀರಿಡುವಂತಾಗಿದೆ.
ಜಿಲ್ಲೆಯ 7 ತಾಲೂಕುಗಳಲ್ಲಿ ಹರಡಿರುವ 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವ ಸೋಯಾಬಿನ್ ಪೈಕಿ ಶೇ.80ರಷ್ಟು ಕಡೆ ಅದು ಮೊಳಕೆಯೊಡೆದೇ ಇಲ್ಲ. ಇದರಿಂದಾಗಿ ರೈತರು ಕಂಗೆಟ್ಟಿದ್ದಾರೆ.
ರೈತರು ಆತಂಕದಲ್ಲಿ: ಮೂಲಗಳ ಪ್ರಕಾರ, 10 ಸಾವಿರ ಕ್ವಿಂಟಾಲ್ ಬೀಜ ಕೃಷಿ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಬರುವ ರೈತ ಸಂಪರ್ಕ ಕೇಂದ್ರಗಳ ಮೂಲಕವೇ ಜಿಲ್ಲೆಯ ರೈತರಿಗೆ ತಲುಪಿಸಿದೆ. ರಾಜ್ಯ ಬೀಜ ನಿಗಮ ಅಭಿವೃದ್ಧಿಪಡಿಸಿರುವ 385 ಬ್ರ್ಯಾಂಡಿನ ಸೋಯಾಬಿನ್ ಬೀಜವನ್ನೇ ಸರಬರಾಜು ಮಾಡಲಾಗಿದ್ದರೂ ಅದು ನಾಟಿಯಾಗದೆ ರೈತರನ್ನು ಆತಂಕಕ್ಕೆ ತಳ್ಳಿದೆ.
ರೈತರು ಅನೇಕರು ದೇಸೀಯವಾಗಿಯೂ ಸೋಯಾ ಬೀಜ ಬಿತ್ತಿದ್ದಾರೆ. ಇದೇ ಮಳೆ ಪ್ರಮಾಣ, ತೇವಾಂಶದಲ್ಲೇ ಸೋಯಾಬಿನ್ ಮೊಳಕೆಯೊಡೆದು ಬೆಳೆ ವೈನಾಗಿದೆ. ಆದರೆ ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿ ಬಿತ್ತಿರುವ ಸೋಯಾಬಿನ್ ಬೀಜವೇ ಮೊಳಕೆಯೊಡೆದಿಲ್ಲ. ಹೀಗಾಗಿ ರೈತರು ಈ ಬೀಜ ಕಳಪೆ ಎಂದು ಶಂಕಿಸುವಂತಾಗಿದೆ. ಆದರೆ ಕೃಷಿ ಇಲಾಖೆ ಕಳೆದ 2 ವಾರದಿಂದ ಮಳೆಯೇ ಆಗಿಲ್ಲ, ತೇವಾಂಶ ಕೊರತೆ ಕಾಡುತ್ತಿದೆ. ಸೋಯಾ ಮೊದಲೇ ಸೂಕ್ಷ್ಮ ಬೆಳೆ. ವಾತಾವರಣದಲ್ಲಿ ಚೂರು ಆಚೀಚೆ ಆದರೂ ಸರಿ, ಸೋಯಾಬಿನ್ ಕೈಕೊಡುತ್ತದೆ ಎಂದು ಹೇಳುತ್ತ ಸೋಯಾ ಸಂಕಟಕ್ಕೆ ಭೂಮಿಯಲ್ಲಿನ ತೇವಾಂಶ ಕೊರತೆಯೇ ಕಾರಣ ಎಂದು ಹೇಳುತ್ತಿದೆ.
ವಿಜ್ಞಾನಿಗಳ ಮೌನ, ರೈತರ ಆತಂಕ ದ್ವಿಗುಣ: ಬೀದರ್ ಹಾಗೂ ಗುಲ್ಬರ್ಗ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಈಗಾಗಲೇ ಸೋಯಾಬಿನ್ ಅಧಿಕ ಬಿತ್ತನೆಯಾಗಿರುವ ಆಳಂದ, ಚಿಂಚೋಳಿ ತಾಲೂಕಿನ ಹಳ್ಳಿಗಳಲ್ಲಿ ಸಂಚರಿಸಿ ರೈತರೊಂದಿಗೆ ಚರ್ಚಿಸಿದ್ದಾರೆ. ಹೊಲಗದ್ದೆಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿಜ್ಞಾನಿಗಳ ತಂಡಕ್ಕೆ ರೈತರು ಪ್ರಶ್ನೆಗಳ ಸುರಿಮಳೆಗರೆದರೂ ಅವರ್ಯಾರು ಸೋಯಾ ಸಂಕಟಕ್ಕೇನು ಕಾರಣ ಎಂಬುದರ ಬಗ್ಗೆ ಎಲ್ಲಿಯೂ ಸೂಚನೆ ನೀಡಿಲ್ಲ. ವಿಜ್ಞಾನಿಗಳೇ ಮೌನವಾದರೆ ಮುಂದೇನು ಗತಿ ಎಂದು ಸೋಯಾ ರೈತರು ಇನ್ನೂ ಆತಂಕಕ್ಕೊಳಗಾಗಿದ್ದಾರೆ.
ಮೂಲಗಳ ಪ್ರಕಾರ, ಗುಲ್ಬರ್ಗ ಹಾಗೂ ಬೀದರ್ ಜಿಲ್ಲೆಗಳಲ್ಲಿ ಬೀಜ ನಿಗಮದ ಒಂದೇ ದಾಸ್ತಾನು ಪೂರೈಕೆಯಾಗಿದೆ. ಹೀಗಾಗಿ ಗುಲ್ಬರ್ಗ ಸಂಚಾರ ಪೂರೈಸಿರುವ ವಿಜ್ಞಾನಿಗಳ ತಂಡ ಬೀದರ್ ಜಿಲ್ಲೆಯಲ್ಲೂ ಸೋಯಾ ವಿಚಾರದಲ್ಲಿ ಮಾಹಿತಿ ಹೊಂದಲು ಮುಂದಾಗಿದೆ. ಉಭಯ ಜಿಲ್ಲೆಗಳ ಮಾಹಿತಿ ಕಲೆ ಹಾಕಿದ ನಂತರವೇ ಸೋಯಾ ಸಂಕಟಕ್ಕೇನು ಕಾರಣ ಎಂಬುದರ ಬಗ್ಗೆ ನಿಖರ ಅಭಿಪ್ರಾಯಕ್ಕೆ ಬರಲು ಸಾಧ್ಯ, ಅಲ್ಲಿಯವರೆಗೂ ಯಾವುದನ್ನೂ ಹೇಳಲಾಗದು ಎಂದು ವಿಜ್ಞಾನಿಗಳು ರೈತರಿಗೆ ಹೇಳಿದ್ದಾರೆ.
 


ನನಗೇ ಎಲ್ಲಾ ಕೇಳಿದ್ರೆ ಹ್ಯಾಂಗೆ: ಸಚಿವರ ಸಂಕಟ
ಸೋಯಾಬಿನ್ ರೈತರ ಸಂಕಟದ ಬಗ್ಗೆ ಸಚಿವರಿಗೆ ಮಾಹಿತಿಯೇ ಇಲ್ಲದ್ದು ದುರಂತ. ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವರು ಉದ್ಧಟತನದ ಉತ್ತರ ನೀಡಿದರಲ್ಲದೆ ಸಂಕಟದಲ್ಲಿರುವ ರೈತರ ಬಳಿಗೆ ಹೋಗಿ ಸಮಸ್ಯೆ ಆಲಿಸುವ ಬಗ್ಗೆಯೂ ಆಸಕ್ತಿ ತೋರಲಿಲ್ಲ. ಕೃಷಿ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದು ಸಮಸ್ಯೆ ಬಗ್ಗೆ ಅರಿಯುವ ಆಸಕ್ತಿಯೂ ಅವರ ಮಾತುಗಳಲ್ಲಿ ಕಂಡು ಬರಲಿಲ್ಲ. ಹೀಗಾಗಿ ಜಿಲ್ಲೆಯ ಸಮಸ್ಯೆಗಳನ್ನೆಲ್ಲ ನನಗೇ ಕೇಳಿದರೆ ಹೇಗೆ ಎಂದು ಸುದ್ದಿಗಾರರಿಗೆ ಪಾಟೀ ಸವಾಲು ಹಾಕಿದ ಇಸ್ಲಾಂ ಧೋರಣೆಯೇ ರೈತರ ಸಮಸ್ಯೆಗೆ ಅದೆಷ್ಟರ ಮಟ್ಟಿಗೆ ಜಿಲ್ಲಾಡಳಿತ ಸ್ಪಂದಿಸುವುದು ಎಂದಕ್ಕೆ ಹಿಡಿದ ಕನ್ನಡಿ ಎಂದು ಸಚಿವರ ಹೇಳಿಕೆಗೆ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.