ಮನೆ ಹಕ್ಕುಪತ್ರ ವಿತರಣೆಗೆ ಆಗ್ರಹ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜೂ.2
ಬಡವರಿಗೆ ನಿವೇಶನ ಸಹಿತ ಮನೆ ನೀಡಿಕೆ, ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಕ್ಕೆ ಆಗ್ರಹ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಅನಿರ್ದಿಷ್ಟ ಧರಣಿ ಸೋಮವಾರ ಆರಂಭಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಹಾಗೂ ಬಡವರನ್ನು ನಿರಂತರವಾಗಿ ಶೋಷಣೆಗೊಳಪಡಿಸುತ್ತಿವೆ. ರೈತರ ಜಮೀನನ್ನು ಒತ್ತಾಯಪೂರ್ವಕವಾಗಿ ಕಿತ್ತುಕೊಂಡು ಖಾಸಗಿ ಕಂಪನಿಗಳಿಗೆ ಕೃಷಿ ನಡೆಸಲು ಒದಗಿಸುವ ಹುನ್ನಾರ ನಡೆದಿದೆ. ಆದರೆ ರೈತರ ಹಾಗೂ ಬಡವರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಒಕ್ಕಲೆಬ್ಬಿಸುವ ಕಾರ್ಯ: ರಾಜ್ಯ ಸರ್ಕಾರದ ಯಾವುದೇ ರೀತಿಯ ನೆರವು ಪಡೆಯದೇ ರೈತರು ರಾಜ್ಯದ ವಿವಿಧೆಡೆ ಹಳ್ಳ, ನಾಲೆ, ಬೆಟ್ಟ, ನದಿಗಳ ಪಕ್ಕದ ಹಾಳು ಜಮೀನಿನಲ್ಲಿ ಕಳೆದ ಅನೇಕ ವರ್ಷಗಳಿಂದ ಕೃಷಿ ಕೈಗೊಳ್ಳುತ್ತಿದ್ದಾರೆ. ಅಂಥ ರೈತರಿಗೆ ವಾಸ್ತವದಲ್ಲಿ ಸರ್ಕಾರಗಳು ಆಯಾ ಜಮೀನಿನ ಹಕ್ಕುಪತ್ರ ನೀಡಬೇಕು. ಆದರೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡುತ್ತಿವೆ ಎಂದು ಆರೋಪಿಸಿದರು.
ಸರ್ಕಾರ ರಾಜ್ಯದಲ್ಲಿ ಕಳೆದ ಐದಾರು ವರ್ಷಗಳಿಂದ ಗುಡಿಸಲು ಮುಕ್ತ ರಾಜ್ಯದ ಭರವಸೆ ನೀಡುತ್ತಿದೆ. ಆದರೆ ಬಡವರಿಗೆ ಇದುವರೆಗೆ ಸರ್ಕಾರ ನಿವೇಶನ ನೀಡುವ ಕಾರ್ಯ ಮಾಡಿಲ್ಲ. ಸರ್ಕಾರದ ವಿವಿಧ ವಸತಿ ಯೋಜನೆಗಳ ನಿವೇಶನ ಮತ್ತು ಮನೆಗಳು ಹಣವಂತರ ಹಾಗೂ ರಾಜಕೀಯ ಪ್ರಭಾವಿ ನಾಯಕರ ಪಾಲಾಗುತ್ತಿವೆ ಎಂದು ದೂರಿದರು.
ಹಕ್ಕುಪತ್ರ ನೀಡಿ: ಜಿಲ್ಲೆಯಲ್ಲಿ ಇದುವರೆಗೆ ನಿವೇಶನ ಮತ್ತು ಮನೆಗಳಿಗೆ ಕೋರಿ 10ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು. ಗುಡಿಸಲು ಹಾಗೂ ಟಿನ್ ಶೆಡ್ಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬಗರ್ಹುಕುಂ ಸಾಗುವಳಿದಾರರನ್ನು ಅವರು ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ನಿಟ್ಟಿನಲ್ಲಿ ರೈತರಿಗೆ ಅರಣ್ಯ ಇಲಾಖೆ ಸೇರಿದಂತೆ ಸರ್ಕಾರದಿಂದ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಕೂಡಲೇ ತೆರವು ಕಾರ್ಯಕ್ಕೆ ತಡೆಹಾಕಬೇಕು. ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಜಾರಿಗೆ ಆಗ್ರಹ: ಭೂ ಕಾಯಿದೆ 1894 ರದ್ದುಪಡಿಸಿ 2007ರ ಕಾಯಿದೆ ಜಾರಿಗೆ ತರಬೇಕು. ಅರಣ್ಯ ಭೂಮಿ ಹಕ್ಕಿಗಾಗಿ 70 ವರ್ಷಗಳ ಅನುಭವ ದಾರರಿರಬೇಕು ಎಂದು ಷರತ್ತು ತಿದ್ದುಪಡಿ ಮಾಡಬೇಕು. ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಡಾ. ಪರಮಶಿವಯ್ಯ ವರದಿ ಯಥಾವತ್ತು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಉದ್ಯೋಗ ಖಾತ್ರಿ ಯೋಜನೆ ಅಡಿ ಮಾನವ ದಿನಗಳಲ್ಲಿ 200 ದಿನಕ್ಕೆ ಹಾಗೂ ಕೂಲಿ ದರವನ್ನು ರು. 300ಕ್ಕೆ ಹೆಚ್ಚಿಸಬೇಕು. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕೂಲಿಕಾರ್ಮಿಕರ ಗುಳೆ ತಡೆಯಬೇಕು. ಕೆಲಸ ನೀಡಲು ನಿರಾಕರಿಸುವ ಹಾಗೂ ಕೂಲಿ ಪಾವತಿಗೆ ವಿಳಂಬ ಮಾಡುವ ಅಧಿಕಾರಿಗಳಿಗೆ ದಂಡ ವಿಧಿಸಬೇಕೆಂದು ಒತ್ತಾಯಿಸಿದ್ದು, ಈ ಎಲ್ಲ ಬೇಡಿಕೆಗಳ ಈಡೇರಿಕೆ ಮಾಡುವವರೆಗೆ ಧರಣಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಯ್ಯ ಜಾಲಹಳ್ಳಿ, ನರಸಣ್ಣ ನಾಯಕ, ಕೆ.ಜಿ. ವೀರೇಶ್, ಡಿ.ಎಸ್. ಶರಣಬಸವ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

