ರಾಯಚೂರು

ಧಾರ್ಮಿಕ ಭಾವನೆಗೆ ಧಕ್ಕೆ ಸಲ್ಲದು

Published On :

ದೇವದುರ್ಗ: ಪಶುಪ್ರಾಣಿಗಳಿಗೆ ಜ್ಞಾನದ ಅರಿವಿಲ್ಲದೇ ಮನಬಂದಲ್ಲಿ ಮಲಮೂತ್ರ ವಿಸರ್ಜಿಸುವುದು ಸಹಜ. ಆದರೆ ಪ್ರೊ. ಕಲ್ಬುರ್ಗಿ ಮತ್ತು ಅನಂತಮೂರ್ತಿಯಂಥ ಜ್ಞಾನವಂತರು ದೇವರ ವಿಗ್ರಹಗಳ ಮೇಲೆ ಮೂತ್ರ ವಿಸರ್ಜಿಸಿದರೆ ಏನೂ ಆಗದು ಎಂದು ಹೇಳುವುದು ಸರಿಯಲ್ಲ ಎಂದು ಕಾಶಿ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ತಾಲೂಕಿನ ಮಸರಕಲ್ ಗ್ರಾಮದಲ್ಲಿ ಆಯೋಜಿಸಿದ್ದ ಅಡ್ಡಪಲ್ಲಕ್ಕಿ ಮಹೋತ್ಸವದ ನಂತರದ ಕಾಶಿ ಜಗದ್ಗುರು ಪೀಠಾರೋಹಣದ ರಜತ ಮಹೋತ್ಸವ ಮತ್ತು ಪ್ರಚಾರ ಅಭಿಯಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಧರ್ಮ ಸಭೆಯ ಅಧ್ಯಕ್ಷತೆಯನ್ನು ಸಾವಿರ ದೇವರ ಸಂಸ್ಥಾನ ಮಠ ಬಿಚ್ಚಾಲಿಯ ವೀರತಪಸ್ವಿ ವೀರಭದ್ರ ಶಿವಾಚಾರ್ಯ ವಹಿಸಿದ್ದರು. ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಸ್ವಾಮಿ, ಮುರುಗೇಂದ್ರ ಸ್ವಾಮಿ ಮಸರಕಲ್, ಅಭಿನವ ರಾಚೋಟಿ ವೀರ ಶಿವಾಚಾರ್ಯ, ಶಾಂತಮಲ್ಲ ಶಿವಾಚಾರ್ಯ, ಚನ್ನಬಸವ ಶಿವಾಚಾರ್ಯ ಗೆಜ್ಜೆಭಾವಿ, ಬೂದಿ ಬಸವ ಶಿವಾಚಾರ್ಯ ಸ್ವಾಮಿಗಳು ಗಬ್ಬೂರು ಸೇರಿ ಹಲವು ಮಠಾಧೀಶರು ಇದ್ದರು.
ಎ. ರಾಜಶೇಖರ ನಾಯಕ್, ಚೊಕ್ಕ ಬಸ್ಸನಗೌಡ, ವಿರುಪಾಕ್ಷಿ ಬಳೆ, ಚಂದ್ರ ಕಾಂತ ಸ್ವಾಮಿ, ಚನ್ನಪ್ಪ ಬಳೆ ಇದ್ದರು.
ಪ್ರತಿಭಟನೆ ಇಂದು
ರಾಯಚೂರು: ಪ್ರೊ. ಎಂ.ಎಂ. ಕಲ್ಬುರ್ಗಿ ಹಾಗೂ ಅನಂತಮೂರ್ತಿ ಅವರು ಹಿಂದೂ ದೇವರಗಳ ಮೇಲೆ ಮೂತ್ರ ವಿಸರ್ಜಿಸಿದರೆ ಏನೂ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿ ಜೂ.12ರಂದು ನಗರದಲ್ಲಿ ವಿಶ್ವಮಧ್ವ ಮಹಾ ಪರಿಷತ್ತಿನ ರಾಯಚೂರು ಘಟಕದಿಂದ ಪ್ರತಿಭಟನೆ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಪರಿಷತ್ತಿನ ಶ್ರೀಹರಿ ಆಚಾರ್ಯ ಅವರು, ಜೂ.12ರಂದು ಬೆಳಗ್ಗೆ 10ಕ್ಕೆ ನಗರದ ಗಾಜಗಾರಪೇಟೆಯ ಉತ್ತರಾದಿ ಮಠದಿಂದ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಅಲ್ಲಿ ಹೇಳಿಕೆ ಖಂಡಿಸಿ ಹಾಗೂ ಕುಚೋದ್ಯದ ಹೇಳಿಕೆ ನೀಡಿರುವವರ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದು, ಬ್ರಾಹ್ಮಣ ಸಮಾಜದ ಎಲ್ಲರೂ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬ್ರಾಹ್ಮಣ ಸಮಾಜದ ಆಕ್ರೋಶ ವ್ಯಕ್ತ
ರಾಯಚೂರು: ನಗರದ ಗಾಜಗಾರಪೇಟೆಯ ಉತ್ತರಾದಿ ಮಠದಲ್ಲಿ ಬುಧವಾರ ನಡೆದ ಬ್ರಾಹ್ಮಣ ಸಮಾಜ ಹಾಗೂ ವಿಶ್ವಮಧ್ವ ಮಹಾಪರಿಷತ್ತಿನ ರಾಯಚೂರು ಘಟಕದ ಸಭೆಯಲ್ಲಿ ಪ್ರೊ. ಎಂ.ಎಂ. ಕಲ್ಬುರ್ಗಿ ಅವರು ಅನಂತಮೂರ್ತಿ ಅವರ ಕೃತಿ ಉಲ್ಲೇಖಿಸಿ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಲಾಯಿತು. ಸಭೆಯಲ್ಲಿ ಮಾತನಾಡಿದ ಪ್ರಮುಖರಾದ ಪ್ರಹ್ಲಾದಾಚಾರ್ಯ ಗಲಗಲಿ, ಹಿಂದೂಗಳು ಭಕ್ತಿಯಿಂದ ಪೂಜಿಸುವ ದೇವರ ಮೂರ್ತಿಗಳ ಮೇಲೆ ಮೂತ್ರ ಮಾಡಿ ಅಪಮಾನ ಮಾಡಿದ್ದಾರೆ. ಹಾಗೆಯೇ ಪ್ರೊ. ಎಂ.ಎಂ. ಕಲ್ಬುರ್ಗಿ ಅವರು ಕೃತಿಯನ್ನು ಉಲ್ಲೇಖಿಸಿ ಹಿಂದೂಗಳ ಪವಿತ್ರ ಭಾವನೆಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿದರು. ಪಂ. ಗೋಪಾಲಾಚಾರ್ಯ ಸಿರವಾರ, ಜಯತೀರ್ಥಾಚಾರ್ಯ ಬಜ್ಜಿ ಸಭೆಯಲ್ಲಿ ಮಾತನಾಡಿ, ಇಂತಹ ಅವಮಾನಕರ ಹೇಳಿಕೆ ನೀಡುವುದು ಸರಿಯಲ್ಲ ಎಂದರು. ನರಸಿಂಗರಾವ್ ದೇಶಪಾಂಡೆ ವಹಿಸಿದ್ದರು. ವಕೀಲ ಶ್ರೀಪಾದ, ರವೀಂದ್ರನಾಥ ಗುತ್ತಲ್, ವೆಂಕಟಾಚಾರ್ಯ, ಶ್ರೀನಾಥಾಚಾರ್ಯ ಕೊಪ್ಪರ, ನಾಗರಾಜ್, ಮುರಳೀಧರ ಕುಲಕರ್ಣಿ, ವೆಂಕಟೇಶ್ ನವಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.