ರಾಯಚೂರು

ಮಾನವಿ ಬಂದ್ ಯಶಸ್ವಿ

Published On :

ಕ.ಪ್ರ. ವಾರ್ತೆ, ರಾಯಚೂರು, ಜೂ. 16
ಮಾನವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಇತ್ತೀಚೆಗೆ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಘಟನೆ ಖಂಡಿಸಿ ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ನಡೆಸಿದ ಮಾನವಿ ಪಟ್ಟಣ ಬಂದ್ ಯಶಸ್ವಿಯಾಯಿತು.
ಮಾನವಿ ಪಟ್ಟಣದಲ್ಲಿ ಬಂದ್ ಹಿನ್ನೆಲೆಯಲ್ಲಿ ಎಲ್ಲ ಅಂಗಡಿ, ಬಸ್ ಸಂಚಾರ, ಶಾಲಾ-ಕಾಲೇಜು ಬಂದ್ ಮಾಡಲಾಗಿತ್ತು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಆದರೆ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಎಂದಿನಂತೆಯೇ ಕಾರ್ಯನಿರ್ವಹಿಸಿದವು.
ಇದು ಎರಡನೇ ಬಾರಿ: ಪಟ್ಟಣದಲ್ಲಿ ಬೆಳಗ್ಗೆ ಬಸವ ವೃತ್ತದಲ್ಲಿ ಜಮಾಯಿಸಿದ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿದ ಕಿಡಿಗೇಡಿಗಳನ್ನು ಬಂಧಿಸಬೇಕು. ಅರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರ ವಿಳಂಬ ಸಹಿಸಲಾಗದು ಎಂದು ಟೈರ್‌ಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಜಾನೇಕಲ್ ಗ್ರಾಮದಲ್ಲಿನ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡುತ್ತಿರುವ ಘಟನೆ ಇದು ಎರಡನೇ ಬಾರಿ ನಡೆದಿದೆ. ಕೆಲ ವರ್ಷಗಳ ಹಿಂದೆಯೂ ಇಂಥದ್ದೇ ಘಟನೆ ನಡೆದಿತ್ತು. ಇಂಥ ಘಟನೆಗಳು ದೇಶದ ಜನತೆಗೆ ಮಾಡಿದ ಮಹಾನ್ ಅಪಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ: ಸರ್ಕಾರ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು. 2001ರಲ್ಲಿ ಇದೇ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ವೇಳೆ ಆಗಿನ ಸರ್ಕಾರ ಘಟನೆಯ ತನಿಖೆಯನ್ನು ಸಿಒಡಿ ತನಿಖೆಗೊಪ್ಪಿಸಿತ್ತು. ಆ ತನಿಖೆ ಯಾವ ಹಂತದಲ್ಲಿದೆ ಎಂಬುದು ಗೊತ್ತಾಗುವ ಮೊದಲೇ ಮತ್ತೊಂದು ಅಂಥದ್ದೇ ಘಟನೆ ಮರುಕಳಿಸಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ಇಂಥ ಕೃತ್ಯ ತಡೆಯಲು ಸಾಧ್ಯ ಎಂದು ಎಚ್ಚರಿಸಿದರು.
ಒತ್ತಾಯ: ಮಾನವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿನ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರನ್ನು ತಕ್ಷಣ ಬಂಧಿಸಿ ಶಿಕ್ಷೆಗೊಳಪಡಿಸಬೇಕು. 2001ರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಸಿಒಡಿ ತನಿಖೆ ವರದಿ ಬಹಿರಂಗಪಡಿಸಬೇಕು.
ಮಾನವಿ ತಾಲೂಕಿನ ಜಾನೇಕಲ್‌ನಲ್ಲಿ ಅಂಬೇಡ್ಕರ್ ಭಾವಚಿತ್ರದ ಸ್ಥಳದಲ್ಲಿ ಅಂಬೇಡ್ಕರ್ ಕಂಚಿನ ಪುತ್ಥಳಿ ಸ್ಥಾಪಿಸಿ ಸುತ್ತಲೂ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಸಿಸಿಟಿವಿ ಕ್ಯಾಮೆರಾ, ವಿದ್ಯುತ್ ದೀಪದ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಆಯುಕ್ತರಿಗೆ ಮನವಿ: ರಾಜ್ಯ ಸೇರಿ ದೇಶಾದ್ಯಂತ ಅಂಬೇಡ್ಕರ್ ಪುತ್ಥಳಿ ಹಾಗೂ ಭಾವಚಿತ್ರಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ರಾಷ್ಟ್ರ ನಾಯಕರಿಗೆ ಅವಮಾನ ಮಾಡುವವರಿಗೆ ಶಿಕ್ಷೆ ವಿಧಿಸಲು ಕಠಿಣ ಕಾನೂನು ಜಾರಿಗೊಳಿಸುವಂತೆ ಸಂಘಟನೆಗಳ ಪ್ರಮುಖರು ಒತ್ತಾಯಿಸಿ ಸಹಾಯಕ ಆಯುಕ್ತ ಮಾರುತಿ ಅವರಿಗೆ ಮನವಿ ಸಲ್ಲಿಸಿದರು.
ಹೋರಾಟದಲ್ಲಿ ದಲಿತ ಸಂಘಟನೆಗಳ ಪ್ರಮುಖರಾದ ಶಾಂತಪ್ಪ ಕಪಗಲ್, ಚಿನ್ನಪ್ಪ ಪಟ್ಟದಕಲ್, ಕೆ. ನಾಗಲಿಂಗಸ್ವಾಮಿ, ಪ್ರಭುರಾಜ್ ಕೊಡ್ಲಿ, ನರಸಪ್ಪ ಜೂಕೂರು, ಪಿ. ರವಿಕುಮಾರ್, ಲಕ್ಷ್ಮಣ ಜಾನೇಕಲ್, ನಾಗರಾಜ ನೀರಮಾನ್ವಿ, ರವೀಂದ್ರ, ಶಿವರಾಜ್ ಜಾನೇಕಲ್, ಮಾರೇಶ ಭಂಡಾರಿ ಸೇರಿದಂತೆ ಅನೇಕರಿದ್ದರು.

ಮುದಗಲ್ ದಸಂಸ ಘಟಕ
ಮುದಗಲ್: ಮಾನವಿ ತಾಲೂಕಿನ ಜಾನೆಕಲ್ ಗ್ರಾಮದ ಡಾ. ಅಂಬೇಡ್ಕರ್ ಮೂರ್ತಿಗೆ ಅವಮಾನ ಮಾಡಿರುವುದನ್ನು ಸ್ಥಳೀಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುದಗಲ್ ಘಟಕ ತೀವ್ರವಾಗಿ ಖಂಡಿಸಿದೆ. ದಲಿತರು ಒಗ್ಗಟ್ಟಾಗಿ ಪ್ರಜ್ಞಾವಂತರಾದರೆ ತಮ್ಮ ಬೇಳೆ ಬೇಯಿಯುವುದಿಲ್ಲ ಎನ್ನುವುದನ್ನು ತಿಳಿದಿರುವ ಕೆಲವರು ಇಂತಹ ಘಟನೆಗಳನ್ನು ಸೃಷ್ಟಿಸುತ್ತಿದ್ದಾರೆ. ಘಟನೆಗೆ ಕಾರಣರಾದವರನ್ನು ಕೂಡಲೇ ಪತ್ತೆ ಹಚ್ಚಿ ಕಠೀಣ ಶಿಕ್ಷೆಗೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ನೀಡಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ಶರಣಪ್ಪ ಕಟ್ಟಿಮನಿ, ಸಂಚಾಲಕ ಬಸವರಾಜ ಬಂಕದಮನಿ, ವೆಂಕಟೇಶ ಹಿರೇಮನಿ, ಹನುಮಂತ ಬಿಲ್ಲಿ, ಬಸವರಾಜಅವಳಿ, ನಿರುಪದಿ ರೇವಣಿಕೆ, ಶರಣಪ್ಪ, ದಲಿತ ಫ್ಯಾಂಥರನ ಕೃಷ್ಣಾ ಇದ್ದರು.

ಅಂಬೇಡ್ಕರ್ ಜಾಗೃತಿ ಸಂಘ ಪ್ರತಿಭಟನೆ
ರಾಯಚೂರು: ಮಾನವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಅಂಬೇಡ್ಕರ್ ವೃತ್ತದಲ್ಲಿನ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿದ ಘಟನೆಯನ್ನು ಖಂಡಿಸಿ ಸೋಮವಾರ ಡಾ. ಬಿ.ಆರ್. ಅಂಬೇಡ್ಕರ್ ಜಾಗೃತಿ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ಮಾನವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳು ಅಂಬೇಡ್ಕರ್ ವೃತ್ತದಲ್ಲಿನ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದಾರೆಂದು ದೂರಿದರು. ಜಿಲ್ಲೆಯಲ್ಲಿ ಈ ಹಿಂದೆಯೂ ಇದೇ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿತ್ತು. ಈಗ ಮತ್ತೆ ಅಂಥದ್ದೇ ಘಟನೆ ಮರುಕಳಿಸಿದೆ. ಕೂಡಲೇ ಘಟನೆಗೆ ಕಾರಣರಾದವರನ್ನು ಆಡಳಿತ ಬಂಧಿಸಬೇಕು. ಕಾನೂನು ಕ್ರಮ ಕೈಗೊಳ್ಳಬೇಕು. ದುಷ್ಕರ್ಮಿಳಿಗೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಸಂಘದಿಂದ ಉಗ್ರ ಹೋರಾಟ ಆಯೋಜಿಸಲಾ ಗುತ್ತದೆ ಎಂದು ಸಂಘದ ಕಾರ್ಯಕರ್ತರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿ.ಆರ್. ಶಾಂತಕುಮಾರ್, ಉಪಾಧ್ಯಕ್ಷ ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿ ಮಾರೆಪ್ಪ, ಸತ್ಯಕುಮಾರ್, ಮಹೇಶ್, ಶಿವುರಾಜ್, ಕೈಸರ್, ಫ್ರಾಂಕ್ಲಿನ್, ಹನುಮಂತು, ಪ್ರಕಾಶ್, ಬಾಷಾ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.