ತಪ್ಪದ ಜನರ ಪೀಕಲಾಟ
ಜಗನ್ನಾಥ ಆರ್. ದೇಸಾಯಿ
ರಾಯಚೂರು: ಸ್ಥಳೀಯ ನಗರಸಭೆ ಒಂದಿಲ್ಲೊಂದು ಕಾರಣಕ್ಕೆ ಗಮನಸೆಳೆಯುತ್ತಲೇ ಇರುತ್ತದೆ. ಒಮ್ಮೆ ಅಧಿಕಾರಿಗಳು ನಡೆಸುವ ಅಕ್ರಮ, ಮತ್ತೊಮ್ಮೆ ರಾಜಕೀಯ ಮೇಲಾಟ. ನಗರದ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗಿಂತ ನಗರಸಭೆಯಲ್ಲಿ ಅಧಿಕಾರದ ಮೇಲಾಟಕ್ಕೆ ಆದ್ಯತೆ ದೊರೆತಿದ್ದೇ ಹೆಚ್ಚು. ಸದ್ಯ ಅಧ್ಯಕ್ಷರ ಕಾರ್ಯವೈಖರಿಗೆ ಬೇಸತ್ತ ಸದಸ್ಯರೆಲ್ಲರೂ ಅವರನ್ನು ಕೆಳಗಿಳಿಸಲು ಯತ್ನ ಆರಂಭಿಸಿದ್ದು, ಜನತೆ ಎದುರಿಸುತ್ತಿರುವ ಸಮಸ್ಯೆಗಳು ಕೊನೆಗಾಣುವ ಸಾಧ್ಯತೆ ಕ್ಷೀಣಿಸಿದೆ.
ನಗರವನ್ನು ಸದ್ಯ ಘನತ್ಯಾಜ್ಯ ವಿಲೇವಾರಿ, ಕುಡಿಯುವ ನೀರು, ಬೀದಿ ದೀಪದ ಕೊರತೆಯ ಸಮಸ್ಯೆ ಕಾಡುತ್ತಿವೆ. ಆದರೆ ಇವುಗಳ ಬಗ್ಗೆ ನಗರಸಭೆಗೆ ಆಸಕ್ತಿಯೂ ಇದ್ದಂತಿಲ್ಲ. ಕಳೆದ ಜನವರಿಯಿಂದಲೇ ನಗರದಲ್ಲಿ ದಿನ ಬಿಟ್ಟು ದಿನಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.
ಕಳೆದೊಂದು ತಿಂಗಳಿನಿಂದ ನಗರದ ಬಹುತೇಕ ಕಡೆ ಎರಡು ದಿನಕ್ಕೊಮ್ಮೆ ನೀರೊದಗಿಸಲಾಗುತ್ತಿದೆ. ನೀರೆತ್ತುವ ಯಂತ್ರಗಳು ಮೇಲಿಂದ ಮೇಲೆ ದುರಸ್ತಿಗೀಡಾಗುತ್ತಿವೆ. ಹಾಗೆಯೇ ಸಮರ್ಪಕ ನೀರೊದಗಿಸುವ ಉದ್ದೇಶದಿಂದ ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗ ಅಳವಡಿಕೆಗೆ ನಗರಸಭೆ ಮುಂದಾಗಿತ್ತು. ಆದರೆ ಅದರಲ್ಲಿಯೂ ಅಕ್ರಮ ನಡೆದು ವಿದ್ಯುತ್ ಮಾರ್ಗ ಅಳವಡಿಕೆ ಸ್ಥಗಿತಗೊಂಡಿದೆ.
ನೀರು ಪೂರೈಕೆಗೆ ಅಡಚಣೆ: ಪರಿಣಾಮ ವಿದ್ಯುತ್ ಕಡಿತ ನಿರಂತರವಾಗಿ ನಗರಕ್ಕೆ ನೀರು ಪೂರೈಕೆ ಕಾರ್ಯದಲ್ಲಿಯೂ ಅಡಚಣೆಗಳಾಗುತ್ತಿವೆ. ಎರಡು ದಿನಕ್ಕೊಮ್ಮೆ ನೀರು ದೊರೆಯುತ್ತಿದೆ. ಅಕ್ರಮ ನಳಗಳ ಸಂಪರ್ಕ, ಮುಖ್ಯ ಕೊಳವೆಗೆ ಪ್ರತಿಷ್ಠಿತರ ಮನೆಗಳ ನಳಗಳ ಸಂಪರ್ಕ ನೀಡಿರುವುದು ಬಡವರ ಮನೆಗಳಿಗೆ ನೀರಿಲ್ಲದಂತೆ ಮಾಡಿದೆ ಎಂಬ ಆರೋಪವೂ ವ್ಯಾಪಕವಾಗಿದೆ.
ಇನ್ನು ಘನ ತ್ಯಾಜ್ಯ ವಿಲೇವಾರಿಗೆ ನಗರಸಭೆಯ ವಾಹನಗಳು ನಗರದಾದ್ಯಂತ ಸುತ್ತು ಹೊಡೆಯುತ್ತಿದ್ದರೂ ಉಸ್ತುವಾರಿಯ ಕೊರತೆಯಿಂದ ತ್ಯಾಜ್ಯದ ಸಂಪೂರ್ಣ ವಿಲೇವಾರಿಯಾಗುತ್ತಿಲ್ಲ. ತ್ಯಾಜ್ಯ ಚರಂಡಿ ಸೇರುತ್ತಿದ್ದು ಅಲ್ಪ ಮಳೆಯಾದರೂ ಚರಂಡಿಯಲ್ಲಿನ ಕೊಳೆ ಸೇರಿದಂತೆ ರಸ್ತೆಗೆ ನುಗ್ಗುತ್ತದೆ. ಜನರ ಬದುಕು ಕಲುಷಿತಗೊಳ್ಳುತ್ತದೆ. ಅನಾರೋಗ್ಯಕರ ಪರಿಸರ ನಗರದಲ್ಲಿ ತೀರಾ ಸಾಮಾನ್ಯವಾಗಿದೆ. ಬೀದಿ ದೀಪದ ಅವ್ಯವಸ್ಥೆಯೂ ಸಾಕಷ್ಟಿದೆ. ಇನ್ನೂ ಹತ್ತಾರು ಸಮಸ್ಯೆಗಳನ್ನು ಹೊದ್ದು ನಗರದ ಜನತೆ ಬದುಕು ಕಳೆಯುತ್ತಿದ್ದಾರೆ. ಅನುದಾನಕ್ಕೆ ಕೊರತೆಯಿಲ್ಲ ಎಂದು ಆಡಳಿತ ಹೇಳುತ್ತಿದೆ. ಆದರೆ ಅಭಿವೃದ್ಧಿಯೆಡೆಗೆ ಇಚ್ಛಾಶಕ್ತಿಯ ಕೊರತೆಯಿದ್ದರೆ, ರಾಜಕೀಯ ಮೇಲಾಟದತ್ತ ಅತ್ಯಾಸಕ್ತಿ ಕಂಡುಬರುತ್ತಿದ್ದು, ನಗರದ ಜನತೆಗೆ ಸೌಲಭ್ಯಗಳು ಮರೀಚಿಕೆಯಾಗಿವೆ.
ಆಡಳಿತ ಯಂತ್ರ ಕುಸಿತ: ಒಂದೆಡೆ ರಾಜಕೀಯ ಜಿದ್ದಾಜಿದ್ದಿ ಜಾರಿಯಲ್ಲಿದೆ. ಸರ್ಕಾರ ನಿಗದಿಪಡಿಸಿದ ಮೀಸಲಾತಿಯಂತೆ ನಗರಸಭೆ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ಮಹಾದೇವಿ ಅವರು ಅಧ್ಯಕ್ಷರಾಗಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಅವರ ಕಾರ್ಯವೈಖರಿಯ ಬಗ್ಗೆ ಅಪಸ್ವರ ಕೇಳಿಬಂದಿತ್ತು.
ಘಟಾನುಘಟಿಗಳು ನಗರಸಭೆಯಲ್ಲಿದ್ದರೂ ಸರ್ಕಾರದ ಮೀಸಲಾತಿಯ ಪರಿಣಾಮ ಅಧ್ಯಕ್ಷ ಸ್ಥಾನ ಕೈತಪ್ಪಿದ್ದು ಅಸಮಾಧಾನಕ್ಕೂ ದಾರಿ ಮಾಡಿತ್ತು. ಅಂತೆಯೇ ಅಧ್ಯಕ್ಷರನ್ನೂ ಎರಡು ತಿಂಗಳ ಅವಧಿಗೆ ರಜೆ ಮೇಲೆ ಕಳಿಸುವಲ್ಲಿ ಸದಸ್ಯರು ಯಶಸ್ವಿಯಾಗಿದ್ದರು.
ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ದೂರು: ಆದರೆ ಲೋಕಸಭೆ ಚುನಾವಣೆಯ ಅಬ್ಬರದಲ್ಲಿ ಎರಡು ತಿಂಗಳು ಕಳೆದು ಮತ್ತೆ ಅಧ್ಯಕ್ಷರು ಕರ್ತವ್ಯಕ್ಕೆ ಮರಳಿದರು. ಚುನಾವಣೆ ಮುಗಿದಿದ್ದು ಮತ್ತೆ ಅಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ಅಪಸ್ವರ ಕೇಳಿಬಂದಿದೆ. ಅಂತೆಯೇ ನಗರಸಭೆಯ 35 ಸದಸ್ಯರ ಪೈಕಿ 33 ಸದಸ್ಯರು ಅಧ್ಯಕ್ಷೆ ಮಹಾದೇವಿ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದಾರೆ.
ಅಧ್ಯಕ್ಷೆ ಮಹಾದೇವಿ ಅವರು ತಾವು ಸರ್ಕಾರದ ಮೀಸಲಾತಿಯಂತೆ ಆಯ್ಕೆಯಾಗಿದ್ದು, ಸದಸ್ಯರು ಸಹಕರಿಸುವುದು ಒಳಿತು ಎಂಬರ್ಥದ ಹೇಳಿಕೆ ನೀಡಿದ್ದಾರೆ. ಆದರೆ ಸದ್ಯಕ್ಕೆ ರಾಜಕೀಯ ಮೇಲಾಟ ಬಗೆಹರಿಯುವ ಲಕ್ಷಣಗಳಿಲ್ಲ. ನಗರಸಭೆಯ ಸಿಬ್ಬಂದಿ ರಾಜಕೀಯ ಕಿತ್ತಾಟ ನೋಡುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದು, ಜನತೆಯ ಕೆಲಸ ಕಾರ್ಯಗಳು ಬಹುತೇಕ ನಿಂತೇ ಹೋಗಿವೆ. ಜನತೆ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸುವವರು ಯಾರೆಂಬುದೇ ಸದ್ಯದ ಪ್ರಶ್ನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

