ನಿರಾಶ್ರಿತರಿಗೆ ಹಕ್ಕು ಪತ್ರ ವಿತರಿಸುವಂತೆ ಮನವಿ
ಗುಲ್ಬರ್ಗ: ಇಲ್ಲಿನ ಕೆಸರಟಗಿ ಗ್ರಾಮದ ಸರ್ವೆ ನಂ27 ಮತ್ತು 28ರಲ್ಲಿನ ಆಶ್ರಯ ಮನೆಗಳಲ್ಲಿ ನಿರಾಶ್ರಿತ ಕಡುಬಡವರು ಅನಧಿಕೃತವಾಗಿ ವಾಸಮಾಡಿರುತ್ತಾರೆ. ಅವರಿಗೆ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಗುಲ್ಬರ್ಗ ಜಿಲ್ಲಾ ಮಹಿಳಾ ಘಟಕ ಶುಕ್ರವಾರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ. ನಗರದಲ್ಲಿ ಮಹಾನಗರ ಪಾಲಿಕೆವತಿಯಿಂದ ನಿರ್ಮಿಸಿರುವ ಕೆಸರಟಗಿ ಗ್ರಾಮ ಸರ್ವೆ ನಂ27 ಮತ್ತು 28ರಲ್ಲಿನ ಆಶ್ರಯ ಮನೆಗಳಲ್ಲಿ ಅಂದಾಜು 500 ಕ್ಕೂ ಹೆಚ್ಚು ದಲಿತ, ಹಿಂದೂಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನಿರಾಶ್ರಿತ ಕಡುಬಡವರು ಅನಧಿಕೃತವಾಗಿ ವಾಸವಾಗಿದ್ದಾರೆ. ದಶಕಗಳ ಹಿಂದೆ ಅರ್ಜಿ ಕರೆದಿದ್ದ ಮಹಾನಗರ ಪಾಲಿಕೆಯ ಉಳ್ಳವರಿಗೆ, ಶ್ರೀಮಂತರಿಗೆ ಬಹುತೇಕ ಮನೆಗಳನ್ನು ಆಶ್ರಯ ಸಮಿತಿಯನ್ನು ರಚಿಸದೆ ಮನ ಬಂದಂತೆ ಹಂಚಿಕೆ ಮಾಡಿದೆ. ಇದರಿಂದಾಗಿ ಬಡ ನಿರಾಶ್ರಿತ ಕುಟುಂಬಗಳಿಗೆ ಅನ್ಯಾಯವಾಗಿದೆ. ಅರ್ಜಿ ಹಾಕಿದರೂ ಮನೆ ಸಿಗದೆ ನಿರಾಶ್ರಿತರು ಗುಲ್ಬರ್ಗ ನಗರದಲ್ಲಿ ವಾಸವಾಗಿರುವ ಎಲ್ಲಾ ದಾಖಲಾತಿಗಳನ್ನು ಹೊಂದಿದ್ದರಿಂದ ಅನಿವಾರ್ಯವಾಗಿ ಅವರು ಸದರಿ ಮನೆಗಳಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆ. ಆದ್ದರಿಂದ ಮಹಾನಗರ ಪಾಲಿಕೆ ಇಂಜಿನಿಯರಗಳಿಂದ ಸರ್ವೆ ಮಾಡಿಸಿ ಅನಧಿಕೃತ ವಾಸವಾಗಿರುವ ಕಡುಬಡವರಿಗೆ ಮನೆ ಹಂಚಿಕೆ ಮಾಡಿ ಹಕ್ಕು ಪತ್ರ ನೀಡುವಂತೆ ಕ್ರಮಕೈಗೊಳ್ಳುವಂತೆ ಜಿಲ್ಲಾಧ್ಯಕ್ಷ ಗುಂಡಮ್ಮ ಎಂ.ದೊಡ್ಡಮನಿ ಕೋರಿದ್ದಾರೆ.
ಡಿಪ್ಲೊಮಾ ಎಂಜಿನಿಯರಿಂಗ್; ಉತ್ತಮ ಫಲಿತಾಂಶ
ಗುಲ್ಬರ್ಗ: ಹೈದ್ರಾಬಾದ್ ನೂತನ ವಿದ್ಯಾಲಯ ಕರ್ನಾಟಕ ಶಿಕ್ಷಣ ಸಂಸ್ಥೆ ಪಾಲಿಟೆಕ್ನಿಕ್ ಅಂತಿಮ ವರ್ಷದ ಡಿಪ್ಲೊಮಾ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಮೇ 2014ರಲ್ಲಿ ನಡೆದ ಅಂತಿಮ ವರ್ಷದ ಡಿಪ್ಲೋಮಾ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಒಟ್ಟು 97 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 44 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 35 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮಹಮ್ಮದ್ ಯೂಸುಫ್ ಪಟೇಲ್ ಮೇ 91, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮಲ್ಲಿಕಾರ್ಜುನ ಶೇ. 89.52, ಆಟೋಮೊಬೈಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ನೀತಿಶ ಡಿ., ಶೇ.89.06, ಸಿವ್ಹಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವಿಶಾಲ ಆರ್., ಶೇ.88.80, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಅಮಿತ್‌ಕುಮಾರ ದೇಸಾಯಿ ಶೇ.79 ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ರಾಕೇಶ ಶೇ.78 ಫಲಿತಾಂಶ ಪಡೆದಿದ್ದಾರೆ. ವಿದ್ಯಾಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಜಯರಾಜ ಬಿ. ಪಾಟೀಲ ಓಕಳಿ ಹಾಗು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಹದಗೆಟ್ಟ ಪಂಚಾಯತಿ ಆಡಳಿತ
ಜೇವರ್ಗಿ: ತಾಲೂಕಿನ ಬಿರಾಳ (ಬಿ) ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ವಿಶ್ವ ಹಿಂದು ಪರಿಷತ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಬಿರಾಳ ಗುರುವಾರ ತಾಲೂಕು ಪಂಚಾಯಿತಿ ಕಾರ್ಯನಿವಾರ್ಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಬಿರಾಳ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 7 ಹಳ್ಳಿಗಳು ಬರುತ್ತವೆ. ಬಿರಾಳ (ಕೆ), ಬಿರಾಳ (ಬಿ), ಮಲ್ಲಾ (ಕೆ), ಮಲ್ಲಾ (ಬಿ), ರಾಮಪೂರ, ಹೋತಿನಮಡು, ಹೊನ್ನಾಳ ಸೇರಿವೆ. ಈ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದೆ. ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮನೆಗಳ ವರ್ಗಾವಣೆ ಹಾಗೂ ನೋಂದಣಿ ಮಾಡಲು ರಾಜ್ಯ ಸರ್ಕಾರದ ಆದೇಶದಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ 1500 ಶುಲ್ಕ ಪಡೆಯಲಾಗುತ್ತಿದೆ. ಆದರೆ ಬಿರಾಳ (ಬಿ) ಪಂಚಾಯಿತಿಯಲ್ಲಿ 8000 ಶುಲ್ಕ ನಿಗದಿಪಡಿಸಲಾಗಿದೆ. ಇದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

