ಮುಂಗಾರು ಮುನಿಸು
ಜಗನ್ನಾಥ ಆರ್. ದೇಸಾಯಿ
ರಾಯಚೂರು: ಕಳೆದ ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಬೆಳೆ ಹಾನಿ ಅನುಭವಿಸಿ ಕಂಗಾಲಾಗಿದ್ದ ಜಿಲ್ಲೆಯ ರೈತರಿಗೀಗ ಮುಂಗಾರು ಮಳೆಯ ವಿಳಂಬ ಮತ್ತೆ ಆತಂಕ ತಂದಿದೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ಮುಂಗಾರು ಹಂಗಾಮಿಗೆ ಸಜ್ಜಾಗಿದ್ದ ರೈತರಿಗೀಗ ಮುಂಗಾರು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಜೂನ್ ಅಂತ್ಯ ಸಮೀಪಿಸಿದರೂ ಸಮರ್ಪಕ ಮಳೆಯಾಗದಿರುವುದು ಭೀತಿ ಮೂಡಿಸಿದೆ. ಮುಂಗಾರು ಮಳೆ ನಿರೀಕ್ಷೆಯಂತೆ ಸುರಿಯದಿರುವುದು ಕೃಷಿ ಕಾರ್ಯದಲ್ಲೂ ತೀವ್ರ ಹಿನ್ನಡೆಗೆ ಕಾರಣವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಕೃಷಿ ಇಲಾಖೆ ಹಾಗೂ ರೈತರು ಪ್ರಸಕ್ತ ವರ್ಷದ ಮುಂಗಾರು ಹಂಗಾಮಿಗಾಗಿ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಮಳೆಗಾಗಿ ಕಾದಿದ್ದಾರೆ. ಆದರೆ ಜಿಲ್ಲೆಯಲ್ಲಿ ಮುಂಗಾರು ಮೋಡಗಳು ಮಳೆ ಸುರಿಸದೇ ಸಾಗುತ್ತಿರುವುದು ಆತಂಕಕ್ಕೆ ದಾರಿ ಮಾಡಿದೆ. ಅಷ್ಟೇ ಅಲ್ಲ ಜಿಲ್ಲೆಯಲ್ಲಿ ಕಳೆದ ಬೇಸಿಗೆಯ ಆರಂಭದಿಂದ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲೂ ಕಾರಣವಾಗಿದೆ.
ಮಳೆ ಅಭಾವ: ಜಿಲ್ಲೆಯಲ್ಲಿ ಜೂನ್ ಅಂತ್ಯಕ್ಕೆ ವಾಡಿಕೆಯಂತೆ 75 ಮಿ.ಮೀ. ಮಳೆಯಾಗಬೇಕು. ಆದರೆ ಪ್ರಸಕ್ತ ವರ್ಷ ಇದುವರೆಗೆ ಕೇವಲ 17 ಮಿ.ಮೀ. ಮಳೆ ಸುರಿದಿದೆ.
ಕಳೆದ ವರ್ಷ ಶೇ.152ರಷ್ಟು ಮಳೆಯಾಗಿತ್ತು. ಈ ವರ್ಷ ಶೇ. 22ರಷ್ಟೇ ಸುರಿದಿದೆ. ಪ್ರಸಕ್ತ ವರ್ಷ ಜೂನ್‌ನಲ್ಲಿ ರಾಯಚೂರು ತಾಲೂಕಿನಲ್ಲಿ 22.5 ಮಿಮೀ, ಮಾನವಿ- 8.8 ಮಿಮೀ, ಸಿಂಧನೂರು- 25.3 ಮಿಮೀ, ಲಿಂಗಸ್ಗೂರು- 5.5 ಮಿಮೀ, ದೇವದುರ್ಗ-23.8 ಮಿಮೀ ಮಳೆಯಾಗಿದೆ.
ಬಿತ್ತನೆ ಕುಂಠಿತ: ಪ್ರಸಕ್ತ ಜೂನ್‌ನಲ್ಲಿ 54 ಸಾವಿರ ಹೆಕ್ಟೇರ್ ಹತ್ತಿ ಬಿತ್ತನೆ ಗುರಿಯಿದ್ದು, ಈ ಪೈಕಿ 1,217 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಅದೇ ರೀತಿ ಸೂರ್ಯಕಾಂತಿ, ಶೇಂಗಾ ಮತ್ತಿತರೆ ವಾಣಿಜ್ಯ ಬೆಳೆಗಳ ಪೈಕಿ 54,700 ಹೆಕ್ಟೇರ್ ಪೈಕಿ 1,163 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಒಂದೆಡೆ ಮುಂಗಾರು ಮಳೆ ಸುರಿಯದಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಕೃಷಿ ಕಾರ್ಯಕ್ಕೆ ಸಜ್ಜಾಗಿದ್ದವರು ಬಿತ್ತನೆ ಮಾಡಲೂ ಹಿಂದೇಟು ಹಾಕುವಂತಾಗಿದೆ. ಮುಂದಿನ ವಾರದಲ್ಲಿ ಮಳೆಯಾಗದಿದ್ದರೆ ರೈತರು ಮತ್ತಷ್ಟು ಆತಂಕಕ್ಕೆ ಸಿಲುಕಲಿದ್ದಾರೆ.
ಆತಂಕದಲ್ಲಿ ರೈತರು
ಹವಾಮಾನ ಇಲಾಖೆಯು ಈ ಮೊದಲೇ ತಿಳಿಸಿದಂತೆ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ತೋರುತ್ತಿವೆ. ಅದರಿಂದಾಗಿ ರೈತರು ಮಾತ್ರ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ಮುಂಗಾರು ಯಾವಾಗ ಸುರಿದೀತೋ ಎಂದು ಕಾಯುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

