ಮೋಡ ಬಿತ್ತನೆಗೆ ಸರ್ಕಾರಕ್ಕೆ ಒತ್ತಾಯ
ರಾಯಚೂರು: ಉತ್ತರ ಕರ್ನಾಟಕದ ನೀರಾವರಿ ಸೇರಿ ರೈತರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಜೂ.26ರಂದು ಸಭೆ ಕರೆದಿದ್ದು, ರಾಯಚೂರು, ಕೊಪ್ಪಳ ಜಿಲ್ಲೆಗಳ ಶಾಸಕ, ಸಚಿವರು, ಸಂಬಂಧಿಸಿದ ಇಲಾಖೆ ಮುಖ್ಯಾಧಿಕಾರಿಗಳು ಹಾಜರಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜೂ.23ರಂದು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗಿತ್ತು. ಚಳವಳಿಗೆ ಸ್ಪಂದಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಜೂ.26ರಂದು ಸಂಜೆ 6ಕ್ಕೆ ಸಿಎಂ ಸಭೆ ನಿಗದಿಗೊಳಿಸಿದ್ದಾರೆಂದರು.
ಸಿಎಂ ಕರೆದಿರುವ ಸಭೆ ಕಾಟಾಚಾರಕ್ಕೆ ಸೀಮಿತಗೊಳ್ಳಬಾರದು ಎಂಬ ಉದ್ದೇಶ ಸಂಘದ್ದಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ, ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಮಗ್ರ ಚರ್ಚೆ ನಡೆಸಬೇಕು. ಸಮಂಜಸ ಪರಿಹಾರ ದೊರಕಿಸುವ ಕಾರ್ಯ ಮಾಡಲು ಅವರು ಮನವಿ ಮಾಡಿದರು.
ಜಿಲ್ಲೆಗಳ ನೀರಾವರಿ ಸಮಸ್ಯೆ, ಬಗರ್ಹುಕುಂ ಸಾಗುವಳಿ, ವಿದ್ಯುತ್ ಮತ್ತು ಕಬ್ಬು ಬೆಳೆಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದ್ದು, ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜತೆ ಎರಡೂ ಜಿಲ್ಲೆಗಳ ಶಾಸಕರು ಹಾಜರಾಗಬೇಕು ಎಂದು ಒತ್ತಾಯಿಸಿದರು.
ಕ್ರಮಕ್ಕೆ ಆಗ್ರಹ: ನೂತನ ಎಂಎಲ್ಸಿ ಎನ್.ಎಸ್. ಬೋಸರಾಜು ಅವರು ಎಡದಂಡೆ ಕಾಲುವೆಗೆ ಅಕ್ರಮವಾಗಿ ಅಳವಡಿಸಿರುವ ಪೈಪ್ಗಳ ತೆರವಿಗೆ ಕೂಡಲೇ ಮುಂದಾಗಬೇಕು. ಇತ್ತೀಚೆಗೆ ಅವರು ಅಕ್ರಮ ಪೈಪ್ ತೆರವಿನ ಬಗ್ಗೆ ಹೇಳಿಕೆ ನೀಡಿದ್ದು, ಹೇಳಿಕೆಯಾಗಿಯೇ ಉಳಿಯದಂತೆ ಹಾಗೂ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮಕ್ಕೆ ಆಗ್ರಹಿಸಿದರು.
ಜೂ.26ರ ಸಭೆಯಲ್ಲಿ ಬೋಸರಾಜು ಭಾಗವಹಿಸಿ ಸಮಾಲೋಚಿಸಿ ಅಚ್ಚುಕಟ್ಟು ಪ್ರದೇಶದ ಜ್ವಲಂತ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಹುಡುಕುವ ಕಾರ್ಯ ಮಾಡಲೆಂದು ಅವರು ಸವಾಲು ಹಾಕಿ, ಕೋಟ್ಯಂತರ ರು. ವೆಚ್ಚದ ಕಾಲುವೆ ಆಧುನೀಕರಣ ಕಾಮಗಾರಿ ಜಾರಿಯಲ್ಲಿದೆ ಎಂದು ಹೇಳಿ ಜಾರಿಕೊಂಡರೆ ಸಾಲದು. ಬೋಸರಾಜು ಅವರು ಮುಖ್ಯ, ಉಪ ಕಾಲುವೆಗಳಿಂದ ಅಚ್ಚುಕಟ್ಟು ಪ್ರದೇಶಕ್ಕೆ ಹೆಚ್ಚು ಪೈಪ್ಲೈನ್ ಅಳವಡಿಸಿದೆ. ಕಾಮಗಾರಿಯಲ್ಲಿ ವೈಜ್ಞಾನಿಕ ಗುಣಮಟ್ಟ ಅಡಗಿದೆಯೇ ಎನ್ನುವುದನ್ನೂ ಪರಿಶೀಲಿಸಬೇಕೆಂದು ಹೇಳಿದರು.
ಗಂಗಾವತಿ ಬಳಿಯ ಪಾಪಯ್ಯ ಸುರಂಗ ಮಾರ್ಗ ಕಾಲುವೆಯಲ್ಲಿ ನೀರು ಪೋಲಾಗುತ್ತಿದ್ದು, ಅದರ ತಡೆಗೆ ಮುಂದಾಗಬೇಕಿದೆ. ತುಂಗಭದ್ರಾ ಎಡದಂಡೆ ಕಾಲುವೆಯ ಮುಖ್ಯ ಕಾಲುವೆಗಳಾದ 47, 69, 90, 104ರಲ್ಲಿ ನಿಗದಿತ ಗೇಜು ಕಾಯ್ದುಕೊಂಡಲ್ಲಿ ರಾಯಚೂರು ಮತ್ತು ಮಾನವಿ ತಾಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಸಾಧ್ಯವಾಗಲಿದೆ. ಈ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದರು.
ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

