ಸ್ಥಳ ಪರಿಶೀಲನೆಗೆ ಇಂದು ಆಹ್ವಾನ
ರಾಯಚೂರು: ನಗರದಲ್ಲಿ ಮುಸ್ಲಿಂ ಸಮಾಜದವರು ಹಬ್ಬದ ಆಚರಣೆ ವೇಳೆ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆಗೆ ವಿಶಾಲ ಪ್ರದೇಶದಲ್ಲಿ ಹೊಸದಾಗಿ ಈದ್ಗಾ ಮೈದಾನ ಸ್ಥಾಪಿಸಲು ಯೋಜಿಸಿದ್ದು, ನಗರದ ಮನ್ಸಲಾಪುರ ರಸ್ತೆಯಲ್ಲಿ ಸ್ಥಳ ಗುರುತಿಸಲಾಗಿದೆ. ಈ ಸ್ಥಳ ಪರಿಶೀಲನೆಗೆ ಮುಸ್ಲಿಂ ಬಾಂಧವರಿಗೆ ಮಾ.2ರಂದು ಆಹ್ವಾನಿಸಲಾಗಿದೆ ಎಂದು ಜೆಡಿಯು ಮುಖಂಡ ಹಾಗೂ ಮುಸ್ಲಿಂ ಸಮಾಜದ ನಾಯಕ ನೂರ್ ಮಹ್ಮದ್ ತಿಳಿಸಿದ್ದಾರೆ. ಈ ಕುರಿತು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನ್ಸಲಾಪುರ ರಸ್ತೆಯ ಸರ್ವೇ ನಂ. 119ರಲ್ಲಿ ಒಟ್ಟು ಆರು ಎಕರೆಯನ್ನು ಈದ್ಗಾ ಮೈದಾನಕ್ಕೆ ಗುರುತಿಸಿ ಒಟ್ಟು 2.52 ಕೋಟಿ ವೆಚ್ಚದಲ್ಲಿ ಜಾಗ ಖರೀದಿಸಲಾಗಿದೆ. ಇನ್ನುಳಿದಂತೆ ಮುಸ್ಲಿಂ ಸಮಾಜದವರ ವಂತಿಗೆಯಿಂದ ಈದ್ಗಾ ಮೈದಾನದ ಅಭಿವೃದ್ಧಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮಾ. 2ರಂದು ಸ್ಥಳ ಪರಿಶೀಲಿಸಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದ್ದು, ಸಮಾಜದವರ ಒಪ್ಪಿಗೆ ನಂತರವೇ ಮೈದಾನದ ಅಭಿವೃದ್ಧಿಗೆ ಮುಂದಾಗುವುದಾಗಿ ತಿಳಿಸಿರುವ ಅವರು, ಜನತೆ ಸಮ್ಮತಿ ಸೂಚಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಸೈಯದ್ ಶಾಲಂ, ಶಾಹೀನ್ ರಜಾ, ಮಹ್ಮದ್ ಹಸನ್, ಸೈಯದ್ ಶಾಹ್ ಇನಾಯತುಲ್ಲಾ ಹುಸೇನಿ ಮತ್ತಿತರರಿದ್ದರು.
ವಿಜ್ಞಾನ ದಿನಾಚರಣೆ ಯಶಸ್ವಿ
ರಾಯಚೂರು: ತಾಲೂಕಿನ ಬಾಯಿದೊಡ್ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಗರದ ಜನಮಿತ್ರ ಸಂಸ್ಥೆಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನುದ್ದೇಶಿಸಿ ಸಂಸ್ಥೆಯ ಕಾರ್ಯದರ್ಶಿ ಕೆ. ಈರಣ್ಣ ವಿಜ್ಞಾನ ವಿಷಯಗಳ ಬಗ್ಗೆ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಗೆ ಈ ವೇಳೆ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ ಬೆಳೆಸುವಂಥ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿ, ಸಂಸ್ಥೆಯ ಸದಸ್ಯೆ ರಾಜೇಶ್ವರಿ, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳಿದ್ದರು.
ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ
ರಾಯಚೂರು: ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ವತಿಯಿಂದ ಮಾ.5ರಂದು ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅಂದು ಬೆಳಗ್ಗೆ 11ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆ ಜಿಲ್ಲಾಧಿಕಾರಿ ಎಸ್. ಎನ್. ನಾಗರಾಜು ವಹಿಸಲಿದ್ದಾರೆ. ಜಿಪಂ ಸಿಇಒ ವಿಜಯ ಜ್ಯೋತ್ಸ್ನಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಡಿಪಿಐ ರಾಮಾಂಜನೆಯ, ಡಯಟ್ ಪ್ರಾಂಶುಪಾಲ ಕೆಂಚನಗೌಡ, ಬಳ್ಳಾರಿ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಗೋಪಾಲ ಕೃಷ್ಣ, ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪ್ರೊ.ಸಿ.ಡಿ. ಪಾಟೀಲ್, ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧಕ್ಷ ಹಫೀಜುಲ್ಲಾ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಇಂದು ಬೆಂಗಳೂರಿನಲ್ಲಿ ಛಲವಾದಿಗಳ ಸಮಾವೇಶ
ರಾಯಚೂರು: ಬೆಂಗಳೂರಿನಲ್ಲಿ ಮಾ.2ರಂದು ರಾಜ್ಯಮಟ್ಟದ ಛಲವಾದಿ ಮಹಾಸಭಾದಿಂದ ಸಮಾವೇಶ ಆಯೋಜಿಸಲಾಗಿದೆ ಎಂದು ಮಹಾಸಭಾದ ಪ್ರಕಟಣೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಮಹಾಸಭಾದ ಜಿಲ್ಲಾಧ್ಯಕ್ಷ ಜಗನ್ನಾಥ ಸುಂಕಾರಿ ಮತ್ತು ಪ್ರಧಾನ ಕಾರ್ಯದರ್ಶಿ ಆರ್. ಬಸವರಾಜ್ ಅವರು ಮಾ.2ರಂದು ಬೆಳಗ್ಗೆ 10ಕ್ಕೆ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶ ದಲ್ಲಿ 4 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. ಸಮಾವೇಶದಲ್ಲಿ ಜಿಲ್ಲೆಯಿಂದ 25ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಛಲವಾದಿ ನೌಕರರು, ಸಮಾಜ ಬಾಂಧವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿರುವ ಅವರು, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್, ಸಚಿವ ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ.ಮಹದೇವಪ್ಪ, ಮೋಟಮ್ಮ ಮತ್ತಿತರರು ಪಾಲ್ಗೊಳ್ಳುವರೆಂದು ತಿಳಿಸಿದ್ದಾರೆ.
ಮೀಸಲಾತಿ ನಿಯಮ ಅನುಷ್ಠಾನಕ್ಕೆ ಒತ್ತಾಯ
ಲಿಂಗಸ್ಗೂರು: ಹೈ.ಕ.ಪ್ರದೇಶಕ್ಕೆ 371ನೇ ಕಲಂ ಅಡಿ ನಿಗದಿಪಡಿಸಿದಂತೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ನಿಯಮಗಳ ಪಾಲನೆಗೆ ಸರ್ಕಾರ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೀಮಪ್ಪ ನಾಯಕ ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಎಲ್ಲ ಇಲಾಖೆಗಳಲ್ಲಿ ನಿಯಮದಂತೆ 2013 ಜ.1ರ ನಂತರ ಹೊರಡಿಸಿದ ಎಲ್ಲ ನೇಮಕಾತಿ ಅಧಿಸೂಚನೆ ರದ್ಧುಗೊಳಿಸಬೇಕು. ಅನೇಕ ಇಲಾಖೆಗಳಲ್ಲಿ ಸಂವಿಧಾನ 371ನೇ ಕಲಂ(ಜೆ) ಅಡಿ ಉದ್ಯೋಗ ಮತ್ತು ಶಿಕ್ಷಣ ನೇಮಕಾತಿಯಲ್ಲಿ ನಿಗದಿ ಪಡಿಸಿದ ಮೀಸಲಾತಿ ನಿಯಮಗಳು ವಿವಿಧ ಇಲಾಖೆಗಳಲ್ಲಿ ಪಾಲನೆಯಾಗುತ್ತಿಲ್ಲ. ಸುಮಾರು 1700 ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ರದ್ದುಗೊಳಿಸಿ ಹೊಸದಾಗಿ ಹೈ.ಕ. ಭಾಗದವರಿಗೆ ಮೀಸಲಾತಿ ಒದಗಿಸುವ ಕಾರ್ಯ ಸರ್ಕಾರ ಮಾಡುವಂತೆ ಅವರು ಆಗ್ರಹಿಸಿದ್ದಾರೆ.
ನಾಗಡದಿನ್ನಿ ಗ್ರಾಮದಲ್ಲಿ ಜನಸ್ಪಂದನ ಸಭೆಗೆ ಚಾಲನೆ
ದೇವದುರ್ಗ: ಸಾಮಾನ್ಯರು ಸರ್ಕಾರಿ ಕಚೇರಿಯಲ್ಲಿನ ಕೆಲಸಗಳಿಗೆ ದೂರದ ತಾಲೂಕು ಕೇಂದ್ರಕ್ಕೆ ಅಲೆದಾಡುವುದನ್ನು ತಪ್ಪಿಸಲು ಜನಸ್ಪಂದನ ಸಭೆ ಆಯೋಜಿಸುತ್ತಿದ್ದು, ಪ್ರಯೋಜನ ಪಡೆಯಲು ಶಾಸಕ ಎ.ವೆಂಕಟೇಶ ನಾಯಕ ಹೇಳಿದರು. ಅವರು ಈಚೆಗೆ ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸುವಂತೆ ಸೂಚಿಸಿದರು. ಈ ವೇಳೆ ಶಾಸಕರು ಸಂಧ್ಯಾಸುರಕ್ಷಾ, ವಿಧವಾ ವೇತನ, ಮಾಸಾಶನ ಪ್ರಮಾಣ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ನಾಗಡದಿನ್ನಿ ಗ್ರಾ.ಪಂ. ಅಧ್ಯಕ್ಷೆ ಬೂದೆಮ್ಮ ಹೆಗ್ಗಡದಿನ್ನಿ, ತಹಸೀಲ್ದಾರ ಬಸವಲಿಂಗಪ್ಪ ನೈಯ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಡಿ. ಹುನಗುಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಮಲಾ, ಚನ್ನಮ್ಮ, ಗ್ರಾಪಂ ಪಿಡಿಒ ಚನ್ನಾರೆಡ್ಡಿ, ಕಂದಾಯ ನಿರೀಕ್ಷಕ ಶ್ರೀಧರ್ ಸೇರಿ ಅನೇಕರಿದ್ದರು.
ಕಚೇರಿ ದುರಸ್ತಿಯಲ್ಲಿ ಅಕ್ರಮ-ಕರವೇ ಆರೋಪ
ದೇವದುರ್ಗ: ಇಲ್ಲಿನ ಪುರಸಭೆಯ ಅಧೀನದಲ್ಲಿರುವ ಸಮುದಾಯ ಅಭಿವೃದ್ಧಿ ಕಚೇರಿ ದುರಸ್ತಿ ಹೆಸರಿನಲ್ಲಿ ರು. 1ಲಕ್ಷ ಅಕ್ರಮ ನಡೆದಿದ್ದು, ಈ ಬಗ್ಗೆ ತನಿಖೆಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಸಮಿತಿ ಒತ್ತಾಯಿಸಿದೆ. ಪಟ್ಟಣದ ಸ್ವರ್ಣಜಯಂತಿ ಶಹರಿ ರೋಜಗಾರ ಯೋಜನೆ ಅಡಿ ಸಮುದಾಯ ಅಭಿವೃದ್ಧಿ ಕಾರ್ಯಾಲಯ ದುರಸ್ತಿ ಕಾಮಗಾರಿಗೆ ರು. 4ಲಕ್ಷ ಅನುದಾನ ಮೀಸಲಿರಿಸಿದ್ದು, ಕಾಮಗಾರಿಯ ಮುಂಗಡ ಹಣವಾಗಿ ಪುರಸಭೆಯ ಕಿರಿಯ ಅಭಿಯಂತರರಿಗೆ ನೇರವಾಗಿ 1ಲಕ್ಷ ರು. ಮೊತ್ತದ ಚೆಕ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಸ್ವರ್ಣಜಯಂತಿ ಶಹರಿ ರೋಜಗಾರ ಕಚೇರಿಯ ದುರಸ್ತಿ ಕಾರ್ಯ ಮಾಡದೇ ಹಣ ಪಾವತಿಯಾದ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು. ಅಕ್ರಮಕ್ಕೆ ನೆರವಾದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು ಕರ್ನಾಟಕ ರಕ್ಷಣ ವೇದಿಕೆಯ ಜಿಲ್ಲಾ ಅಧ್ಯಕ್ಷ ಅಶೋಕಕುಮಾರ ಸಿ.ಕೆ. ಜೈನ್, ಪ್ರಧಾನ ಕಾರ್ಯದರ್ಶಿ ರಘುವೀರ ನಾಯಕ, ತಾಲೂಕು ಅಧ್ಯಕ್ಷ ಡಿ.ಶ್ರೀನಿವಾಸ ಜಿಲ್ಲಾಧಿಕಾರಿಗಳಿಗೆ ದೂರಿತ್ತಿದ್ದಾರೆ.
ಮರು ಡಾಂಬರೀಕರಣಕ್ಕೆ ಶಾಸಕ ಬಾದರ್ಲಿ ಚಾಲನೆ
ಸಿಂಧನೂರು: ತಾಲೂಕಿನ ಧಡೇಸ್ಗೂರು ಗ್ರಾಮದಿಂದ ಸಿಂಧನೂರುವರೆಗೆ 13ನೇ ಹಣಕಾಸು ಯೋಜನೆ ಅಡಿ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಹಂಪನಗೌಡ ಬಾದರ್ಲಿ ಶನಿವಾರ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಈ ಸಂದರ್ಭ ಜಿಪಂ ಸದಸ್ಯ ಚಂದೂಸಾಬ್ ಮುಳ್ಳೂರು, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ ಹರೇಟನೂರು, ಉಪಾಧ್ಯಕ್ಷ ರಾಮಣ್ಣ ಹುಡಾ, ತಾಪಂ ಅಧ್ಯಕ್ಷೆ ಬಸ್ಸಮ್ಮ ಕೊಟ್ರಪ್ಪ, ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಎಪಿಎಂಸಿ ಸದಸ್ಯ ಬಸವರಾಜ ಉಪ್ಪಳ, ಗ್ರಾಪಂ ಅಧ್ಯಕ್ಷ ಸೈಯದ್ ಯೂನುಸ್ ಪಾಷಾ, ಅಶೋಕ ಭೂಪಾಲ್ ಜಾಗೀರದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್ ವಕೀಲರು, ಎಚ್. ಖಾಜಾಸಾಬ್, ಸಿದ್ದನಗೌಡ, ದಾದಾ ಪೀರ್ ಇದ್ದರು.
ಇಂದು ಉಪ್ಪಾರ ಸಮಾಜದ ಸಮಾವೇಶ
ರಾಯಚೂರು: ರಾಜ್ಯ ಉಪ್ಪಾರ ಸಮಾಜದ ಬೃಹತ್ ಸಮಾವೇಶವನ್ನು ಮಾ. 2ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಉಪ್ಪಾರ ನವಯುವಕ ಸಂಘದ ಅಧ್ಯಕ್ಷ ಜಿ.ಶಿವಮೂರ್ತಿ, ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಮಾ.2ರಂದು ರಾಜ್ಯಮಟ್ಟದ ಉಪ್ಪಾರ ಸಮಾಜದ ಬೃಹತ್ ಸಮಾವೇಶ ಆಯೋಜಿಸಿದ್ದು, ಸಮಾವೇಶದ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಉಪ್ಪಾರ ಜನಾಂಗವನ್ನು ಸಂಘಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಸರ್ಕಾರದ ವತಿಯಿಂದ ಭಗೀರಥ ಜಯಂತಿ ಆಚರಣೆ, ಉಪ್ಪಾರ ಸಮಾಜದ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಬೇಕು. ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ 50 ಕೋಟಿ ಮೀಸಲಿಡಬೇಕೆಂದು ಸಮಾವೇಶದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಸಮಾವೇಶದಲ್ಲಿ ಉಪ್ಪಾರ ಸಮಾಜದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
ಪೈಪ್ಲೈನ್ ಒಡೆದು ಕುಡಿಯುವ ನೀರು ಪೋಲು
ಸಿಂಧನೂರು: ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೊಳವೆ ಮಾರ್ಗದ ಸೋರಿಕೆಯಿಂದಾಗಿ ರಸ್ತೆಗೆ ನೀರು ನುಗ್ಗಿ ಪೋಲಾಗುತ್ತಿರುವುದು ನಗರದಲ್ಲಿ ನಡೆದಿದೆ. ನಗರದ ಕುಷ್ಟಗಿ ರಸ್ತೆಯಲ್ಲಿ ಕೃಷ್ಣಾ ಆಸ್ಪತ್ರೆ ಮುಂಭಾಗದಲ್ಲಿ ಕೊಳವೆ ಮಾರ್ಗ ಒಡೆದು ನೀರು ಅಪಾರ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ನೀರಿನ ಪೋಲು ತಡೆಯುವ ಕಾರ್ಯ ಮಾಡಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ನೀರು ರಸ್ತೆಗೆ ನುಗ್ಗುತ್ತಿರುವುದು ದಾರಿಹೋಕರಿಗೆ ತೊಂದರೆಯುಂಟು ಮಾಡುತ್ತಿದ್ದು, ನಗರಸಭೆ ನಿರ್ಲಕ್ಷ್ಯದ ಬಗ್ಗೆ ಜನತೆ ಅಸಮಾಧಾನ ವ್ಯಕ್ತಪಡಿಸಿ, ನೀರಿನ ಪೋಲು ತಡೆಗೆ ಕ್ರಮ ಕೈಗೊಳ್ಳುವಂತೆ ನಗರಸಭೆಯನ್ನು ಒತ್ತಾಯಿಸಿದ್ದಾರೆ. ಸದ್ಯ ನಗರಕ್ಕೆ ನೀರೊದಗಿಸುವ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ನೀರಿನ ಪೋಲಾಗುವಿಕೆಗೆ ಆಡಳಿತ ತಡೆಯೊಡ್ಡಬೇಕಿದೆ ಎಂಬುದು ಜನರ ಒತ್ತಾಯವಾಗಿದೆ.
ದಿಗ್ಗನಾಯಕನಬಾವಿ; ದೇವರ ಮೂರ್ತಿ ಪ್ರತಿಷ್ಠಾಪನೆ ಯಶಸ್ವಿ
ಲಿಂಗಸ್ಗೂರು: ತಾಲೂಕಿನ ದಿಗ್ಗನಾಯಕನಬಾವಿ ಗ್ರಾಮದಲ್ಲಿ ಈಶ್ವರ ಹಾಗೂ ಬಸವಣ್ಣ ದೇವರ ನೂತನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ನೂತನ ದೇವಾಲಯ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಈಚೆಗೆ ನಡೆಯಿತು. ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಎಂ.ಎಸ್. ಶಶಿಧರ ಶಾಸ್ತ್ರಿ ಹಾಗೂ ಶಿಷ್ಯವೃಂದದಿಂದ ಧಾನ್ಯಾದಿವಾಸದಿಂದ ಗೋಪೂಜೆ, ನವಗ್ರಹ, ಪಂಚಕಲಶ ವಾಸ್ತು ಮತ್ತು ರುದ್ರಹೋಮ ನೆರವೇರಿದವು. ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ತುರವಿಹಾಳ ಪುರವರ ಹಿರೇಮಠ ಅಮರಗುಂಡ ದೇವರು, ಚಿಕ್ಕಕಡಬೂರು ಗುರುಪಾದಯ್ಯ ಸ್ವಾಮಿಗಳು ಪಾಲ್ಗೊಂಡಿದ್ದರು. ನೂರಾರು ಸಂಖ್ಯೆಯ ಭಕ್ತರು ದೇವರ ಮೂರ್ತಿ ಪ್ರತಿಷ್ಠಾಪನೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಮದ್ಯಸಾರ ಘಟಕಕ್ಕೆ ನೀರು: ತೀರ್ಮಾನಕ್ಕೆ ಒತ್ತಾಯ
ಸಿಂಧನೂರು: ತಾಲೂಕಿನ ಸಿಂಗಾಪುರ ಗ್ರಾಮದಲ್ಲಿರುವ ಮದ್ಯಸಾರ ಘಟಕಕ್ಕೆ ನೀರು ಪೂರೈಕೆ ಸಂಬಂಧ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು ಎಂದು ಸಿಂಗಾಪುರ, ಹುಡಾ ಮತ್ತು ಮುಕ್ಕುಂದಾ ಗ್ರಾಮಗಳ ನಿವಾಸಿಗಳು ಕಾರಟಗಿಯ ನೀರಾವರಿ ಇಲಾಖೆಗೆ ಡಿ-31 ಉಪವಿತರಣಾ ಕಾಲುವೆಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಮನವಿ ಸಲ್ಲಿಸಿದ್ದಾರೆ. ತುಂಗಭದ್ರಾ ನದಿಗೆ ಸಂಪೂರ್ಣವಾಗಿ ನೀರು ಬಿಡುವವರೆಗೆ ಸಿಂಗಾಪುರ ಡಿಸ್ಟಿಲರಿ ಫ್ಯಾಕ್ಟರಿಗೆ ನೀರು ಸರಬರಾಜು ಆಗುವುದನ್ನು ಇಲಾಖೆಯ ಅಧಿಕಾರಿ ಬಿ. ಶಿವಮೂರ್ತಿ ಅವರು ಫೆ. 26ರಂದು ತಡೆ ಹಿಡಿದು ಸೀಜ್ ಮಾಡಿದ್ದಾರೆ. ಆದರೆ ಪುನಃ ಫ್ಯಾಕ್ಟರಿಗೆ ನೀರು ಪಡೆದುಕೊಳ್ಳಲು ಪರವಾನಗಿ ನೀಡುವ ಪೂರ್ವದಲ್ಲಿ ತಾಲೂಕಿನ ಚಿಂತಮಾನದೊಡ್ಡಿ, ಒಳಬಳ್ಳಾರಿ, ಹೆಡಗಿನಾಳ, ಆಯನೂರು, ಉಪ್ಪಳ, ದಢೇಸ್ಗೂರು, ಕೆಂಗಲ್, ಸಾಲಗುಂದಾ, ಹುಡಾ, ಮುಕ್ಕುಂದಾ, ಸಿಂಗಾಪುರ ಗ್ರಾಮಗಳ ಸಾರ್ವಜನಿಕರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ನಿವಾಸಿಗಳಾದ ಬಸನಗೌಡ ಮಾಲಿಪಾಟೀಲ್ ಹುಡಾ, ಡಾ. ನಿರುಪಾದೆಪ್ಪ ಸಿಂಗಾಪುರ, ಪಾಲಾಕ್ಷಗೌಡ ಸಿಂಗಾಪುರ, ಅಮರೇಗೌಡ ಆಗ್ರಹಿಸಿದ್ದಾರೆ.
'ವಸ್ತು ಪ್ರದರ್ಶನದಿಂದ ಮಕ್ಕಳ ಬೌದ್ಧಿಕ ವಿಕಸನ'
ಸಿಂಧನೂರು: ಮಕ್ಕಳು ಓದಿರುವ ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗುತ್ತದೆ ಎಂದು ರಾಜೇಂದ್ರ ಮೆಮೋರಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕನಗೌಡ ಗದ್ರಟಗಿ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ನಗರದ ನಟರಾಜ ಕಾಲೋನಿಯಲ್ಲಿರುವ ರಾಜೇಂದ್ರ ಪ್ರೌಢಶಾಲೆಯಲ್ಲಿ ವಿಜ್ಞಾನಿ ಡಾ.ಸಿ.ವಿ. ರಾಮನ್ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬೆಳಕಿನ ವೇಗ, ಪವನ, ನಿಂಬೆಹಣ್ಣು ಮತ್ತು ಆಮ್ಲದಿಂದ ವಿದ್ಯುತ್ ತಯಾರಿಕೆ, ಪೆರಿಯೋಸ್ಕೋಪ್ ಉಪಯೋಗ, ಹನಿ ನೀರಾವರಿ, ಆಹಾರ ತಯಾರಿಕೆ ಮತ್ತು ಸಂರಕ್ಷಣಾ ವಿಧಾನ, ಔಷಧೀಯ ಸಸ್ಯಗಳ ಬೆಳೆಸುವುದು, ಉಪಗ್ರಹಗಳ ಚಲನೆ, ನ್ಯೂಟನ್ ಚಲನೆಯ ನಿಯಮ, ನೀರು ಶುದ್ಧೀಕರಣ ವಿಧಾನ, ಸಾವಯವ ಕೃಷಿ, ಪರಿಸರ ಸಂರಕ್ಷಣೆ, ವಿಜ್ಞಾನಿಗಳ ಸಾಧನೆ ವಿವರ ಸೇರಿದಂತೆ ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು. ಡಾ. ತಿಮ್ಮನಗೌಡ ಪ್ರೌಢಶಾಲೆ, ಉಪ್ಪಾರವಾಡಿ ಶಾಲೆ, ಆನಂದ ಹೆಗ್ಡೆ ಶಾಲೆ, ಗ್ಲೋರಿ ಶಾಲೆ, ಬಸವೇಶ್ವರ ಪ್ರೌಢಶಾಲೆ, ರೆಡ್ಡಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ 10ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಸ್ಡಿಎಂಸಿ ತರಬೇತಿ ಕಾರ್ಯಕ್ರಮ
ಸಿಂಧನೂರು: ತಾಲೂಕಿನ ಚನ್ನಳ್ಳಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಮ್ಮ ಶಾಲೆ ಪ್ಲಸ್ ಕಾರ್ಯಕ್ರಮದಡಿ ಶಾಲೆಗಳ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ನಮ್ಮ ಶಾಲೆ ಪ್ಲಸ್ ಕಾರ್ಯಕ್ರಮದ ರಾಯಚೂರು ಜಿಲ್ಲೆಯ ನೋಡಲ್ ಅಧಿಕಾರಿ ರಮಾನಂದ ಶಿರ್ವ ಉದ್ಘಾಟಿಸಿ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯರು ಶಾಲೆಗೆ ಬೆನ್ನೆಲುಬಿದ್ದಂತೆ. ಅವರು ಸರ್ಕಾರದ ಸೌಲಭ್ಯಗಳು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪುವಂತೆ ಕಾಳಜಿ ವಹಿಸಬೇಕು. ಶಾಲೆಗಳ ಕುಂದು-ಕೊರತೆಗಳನ್ನು ಅರಿತು ನಿಗಾ ವಹಿಸಬೇಕು. ಮುಖ್ಯಗುರುಗಳಿಗೆ ಶಿಕ್ಷಕರಿಗೆ ಮಾರ್ಗದರ್ಶನ ಮಾಡಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು. ಪಾಲಕರಿಂದ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ದೊರೆತಾಗ ಮಗು ಉತ್ತಮ ನಾಗರಿಕನಾಗುತ್ತಾನೆ ಎಂದರು. ಮಾವಿನಮಡು ಗ್ರಾಮದ ಮಲ್ಲನಗೌಡ, ಸಿಆರ್ಪಿ ಮಲ್ಲಕಾರ್ಜುನ, ಎಂಆರ್ಪಿ ಸುರೇಶ, ಮುಖ್ಯಗುರು ತಿಮ್ಮಾರೆಡ್ಡಿ, ಚನ್ನಳ್ಳಿ ಸರ್ವ ಶಕ್ತಿ ಸಂಘದ ಯುವಕರು ಭಾಗವಹಿಸಿದ್ದರು.
ರಾಸಾಯನಿಕದಿಂದ ಭೂ ಫಲವತ್ತತೆ ನಾಶ: ಅಂಗಡಿ
ಸಿಂಧನೂರು: ಅಧಿಕ ಇಳುವರಿಯ ಕಾರಣ ಭೂಮಿಗೆ ಹೆಚ್ಚು ರಾಸಾಯಿನಿಕ ಸಿಂಪಡಿಸಲಾಗುತ್ತಿದ್ದು, ಇದರಿಂದ ಫಲವತ್ತತೆಯ ನಾಶವಾಗಿ ಬರುವ ದಿನಗಳಲ್ಲಿ ರೈತರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸಾವಯವ ಕೃಷಿಕ ಚಿದಾನಂದಪ್ಪ ಅಂಗಡಿ ಕಳವಳ ವ್ಯಕ್ತಪಡಿಸಿದರು. ಅವರು ತಾಲೂಕಿನ ಮಲ್ಕಾಪುರಕ್ಯಾಂಪ್ನಲ್ಲಿ ಕನಕದಾಸ ಪದವಿ ಕಾಲೇಜ್ನ ಎನ್ಎಸ್ಎಸ್ ಘಟಕ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ವಿಷಪೂರಿತ ರಾಸಾಯಿಕ ವಸ್ತುಗಳನ್ನು ಬಳಸಿ ಪಡೆದ ಆಹಾರ ಬೆಳೆಗಳಲ್ಲಿ ಸತ್ವವೇ ಇಲ್ಲ. ಇದು ಅನಾರೋಗ್ಯದ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಹೊಲದಲ್ಲಿ ಬಂದ ಆದಾಯವನ್ನು ರೈತರು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಕಡಿಮೆ ಖರ್ಚಿನ ನೈಸರ್ಗಿಕ ಗೊಬ್ಬರ ಬಳಸಿ ಕೃಷಿ ಮಾಡಬೇಕಾದ ರೈತ ಸಮೂಹ ಕಂಪನಿಗಳ ಮೋಡಿಗೆ ತನ್ನ ಮೂಲಕ ಕೃಷಿಯನ್ನೇ ಮರೆತಿರುವುದು ಖೇದಕರ ಸಂಗತಿ ಎಂದರು. ಇನ್ನೊಬ್ಬ ಸಾವಯವ ಕೃಷಿಕ ಶಿವರಾಜ ರಾಮರೆಡ್ಡಿ ಮಾತನಾಡಿದರು. ಗ್ಯಾನಪ್ಪ ಮಲ್ಕಾಪುರ, ಬಸಪ್ಪ ಬಾರಿಕೇರ ಮಾತನಾಡಿದರು. ಹನುಮಂತಪ್ಪ ಸ್ವಾಗತಿಸಿದರು. ಕೆಂಚಪ್ಪ ನಿರೂಪಿಸಿದರು. ಅಮರೇಶ ವಂದಿಸಿದರು.
9ರಂದು ರಾಘವೇಂದ್ರ ಸ್ವಾಮಿ ಮಠದ ವಾರ್ಷಿಕೋತ್ಸವ
ಸಿಂಧನೂರು: ತಾಲೂಕಿನ ತುರ್ವಿಹಾಳ ಗ್ರಾಮದಲ್ಲಿ ಮಾ.9ರಂದು ರಾಘವೇಂದ್ರ ಸ್ವಾಮಿಗಳ ಮಠದ 24ನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಗುರುರಾಜ ಸೇವಾ ಸಮಿತಿ ತಿಳಿಸಿದೆ. ಅಂದು ಬೆಳಗ್ಗೆ 6 ರಿಂದ 7 ರವರೆಗೆ ಸುಪ್ರಭಾತ ಹಾಗೂ ಅಷ್ಟೋತ್ತರ, 7 ರಿಂದ 8ರವರೆಗೆ ಪಂಚಾಮೃತ, 8ರಿಂದ 9ಗಂಟೆವರೆಗೆ ರಥೋತ್ಸವ, 10ಗಂಟೆಯಿಂದ 11ರವರೆಗೆ ಕೃಷ್ಣ ಮಲ್ಕಸಮುದ್ರ ಅವರಿಂದ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 12.30 ರಿಂದ ನೈವೇದ್ಯ ಹಸ್ತೋದಕ ಅನ್ನ ಸಂತರ್ಪಣ, ತೀರ್ಥ ಪ್ರಸಾದ, ಸಂಜೆ 6ರಿಂದ 9.30 ರವರೆಗೆ ಕೊಪ್ಪಳ ಭಕ್ತ ವೃಂದದಿಂದ ಭಜನೆ, ಮಹಾಮಂಗಳಾರತಿ ಜರುಗಲಿವೆ. ಗುರುರಾಯರ ಕುರಿತು ಮಾದಿನೂರು ವಸಂತಾಚಾರ್ಯ ಪೂಜಾರ ಉಪನ್ಯಾಸ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

