ವ್ಯಾಪಾರಸ್ಥರಿಗೆ ತಪ್ಪದ ಧೂಳಿನ ಗೋಳಾಟ
ಮುದಗಲ್: ಮುದಗಲ್ ಪಟ್ಟಣವು ಐತಿಹಾಸಿಕತೆಗೆ ಹಾಗೂ ಮೊಹರಂ ಹಬ್ಬಕ್ಕೆ ಪ್ರಸಿದ್ಧಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಮಾತ್ರ ಧೂಳುಮಯ ನಗರಿ ಎಂದು ಪ್ರಯಾಣಿಕರು ದೂರುತ್ತಿದ್ದಾರೆ. ಪಟ್ಟಣದ ಮಸ್ಕಿ ಕ್ರಾಸ್ನಿಂದ ನಿರ್ಮಾಣ ಹಂತದಲ್ಲಿರುವ ಮುಖ್ಯ ರಸ್ತೆಯೆಲ್ಲಾ ಧೂಳುಮಯ. ಇದಲ್ಲದೇ ಛಾವಡಿಕಟ್ಟೆ ರಸ್ತೆ, ತರಕಾರಿ ಮಾರುಕಟ್ಟೆ ಮುಖ್ಯ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳೆಲ್ಲಾ ಡಾಂಬರ್ ರಸ್ತೆ ಹೋಗಿ ಮಣ್ಣಿನ ರಸ್ತೆಗಳಾಗಿ ಮಾರ್ಪಟ್ಟಿವೆ. ವಾಹನಗಳ ದಟ್ಟಣೆಯಿಂದಾಗಿ ಎತ್ತ ನೋಡಿದರೂ ಧೂಳೇ ಧೂಳು.
ಈ ರಸ್ತೆ ಎಡಬದಿಗಳಲ್ಲಿನ ವ್ಯಾಪಾರಸ್ಥರು ಪ.ಪಂ.ಗೆ ಮನವಿ ಮಾಡಿ, ಟ್ಯಾಂಕರ್ ಮೂಲಕ ನೀರನ್ನು ಹಾಯಿಸುವಂತೆ ಮನವಿ ಮಾಡಿತ್ತು. ಕೆಲ ದಿನಗಳ ಮಟ್ಟಿಗೆ ಪ.ಪಂ. ಕಾರ್ಯ ಪ್ರವೃತ್ತಗೊಂಡು ತದ ನಂತರದಲ್ಲಿ ನೀರನ್ನು ಹಾಯಿಸುವುದನ್ನು ಮೊಟಕುಗೊಳಿಸಿತ್ತು. ಇದರಿಂದಾಗಿ ರಸ್ತೆ ಧೂಳೆಲ್ಲಾ ಅಂಗಡಿಗಳಿಗೆ ಪ್ರವೇಶ ಮಾಡುವುದಲ್ಲದೇ ವ್ಯಾಪಾರಸ್ಥರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪ.ಪಂ.ಗೆ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.
ಕಾಮಗಾರಿ ಪ್ರಗತಿಯಿಲ್ಲ: ಪಟ್ಟಣದಲ್ಲಿ ನಾನಾ ಅನುದಾನಗಳ ಮೂಲಕ ನಿರ್ಮಾಣ ಹಂತದಲ್ಲಿರುವ ಪ್ರಮುಖ ರಸ್ತೆಗಳು ಪ್ರಗತಿಯಲ್ಲಿಲ್ಲ. ಇದರಿಂದಾಗಿ ಧೂಳು ಹೆಚ್ಚಲು ಕಾರಣವಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಿದ್ದು, ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸದೇ ಕಾಲಹರಣ ಮಾಡುತ್ತಿದ್ದಾರೆ. ಪ.ಪಂ.ನ ಆಂತರಿಕ ಭಿನ್ನಾಭಿಪ್ರಾಯದಲ್ಲಿ ಕೂಸು ಬಡವ ಎಂಬಂತೆ ಮುದಗಲ್ ಪಟ್ಟಣವು ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆ ಸಾಧಿಸಿದೆ. ಕೂಡಲೇ ಧೂಳುಮುಕ್ತ ಮುದಗಲ್ ಎಂದು ಪರಿವರ್ತಿಸಲು ನೆನಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇಲ್ಲವೇ ಟ್ಯಾಂಕರ್ ಮೂಲಕ ನೀರನ್ನು ನಿತ್ಯವೂ ಹಾಯಿಸಲೇಬೇಕು. ಇಲ್ಲವಾದರೆ ಬೇಸಿಗೆ, ಧೂಳು ಇಲ್ಲಿನ ನಾಗರಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದ್ದು, ಅದಕ್ಕೆ ಪಟ್ಟಣ ಪಂಚಾಯ್ತಿ ಹೊಣೆಯಾಗುತ್ತದೆಂದು ಸ್ಥಳೀಯರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

