ತೊಗರಿ ಖರೀದಿ ಕೇಂದ್ರ ಪುನಾರಂಭಿಸಿ
ಕ.ಪ್ರ. ವಾರ್ತೆ ರಾಯಚೂರು ಮಾ.4
ಜಿಲ್ಲೆಯಲ್ಲಿ ತೊಗರಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ತೆರೆದಿದ್ದ ತೊಗರಿ ಖರೀದಿ ಕೇಂದ್ರ ದಿಢೀರ್ ಮುಚ್ಚಿರುವ ಸರ್ಕಾರದ ಕ್ರಮವನ್ನು ಖಂಡಿಸಿರುವ ಜಾಗೋ ರಾಯಚೂರು ಜಾಗೋ ಸಂಘಟನೆಯು, ಕೂಡಲೇ ಖರೀದಿ ಕೇಂದ್ರ ತೆರೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದೆ.
ನಗರದಲ್ಲಿ ಮಂಗಳವಾರ ಸಂಘಟನೆಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆ ಅಧ್ಯಕ್ಷ ಕಿರಣ್ ಕುಮಾರ ಸೋಲಂಕಿ, ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲಿ ತೊಗರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅದರಿಂದಾಗಿ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆಂದು ಆರೋಪಿಸಿದರು.
2 ಸಾವಿರ ರೈತರ ನೋಂದಣಿ: ತೊಗರಿ ಬೆಳೆಗಾರರ ಒತ್ತಾಯ ಹಿನ್ನೆಲೆಯಲ್ಲಿ ಕಳೆದ ತಿಂಗಳಷ್ಟೇ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರದ ಮೂಲಕ ರೈತರು ಬೆಳೆದ ತೊಗರಿ ಬೆಳೆ ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ತೊಗರಿ ಬೆಳೆ ಮಾರಾಟಕ್ಕೆ ಜಿಲ್ಲೆಯಲ್ಲಿ 2 ಸಾವಿರ ರೈತರು ಮುಂಚಿತವಾಗಿಯೇ ನೋಂದಾಯಿಸಿಕೊಂಡಿದ್ದರು. ಆದರೆ ಕಳೆದೊಂದು ತಿಂಗಳಿನಲ್ಲಿ ಖರೀದಿ ಕೇಂದ್ರದ ಸಿಬ್ಬಂದಿ ಕೇವಲ 400 ರೈತರಿಂದ ಮಾತ್ರ ತೊಗರಿ ಬೆಳೆ ಖರೀದಿಸಿದ್ದಾರೆಂದು ದೂರಿದರು.
ನಿಧಾನ ಗತಿಯ ಖರೀದಿಯಿಂದಾಗಿ ಜಿಲ್ಲೆಯಲ್ಲಿ ಈಗಲೂ ಅನೇಕ ತೊಗರಿ ಬೆಳೆಗಾರರು ಖರೀದಿ ಕೇಂದ್ರಕ್ಕೆ ತಾವು ಬೆಳೆದ ಬೆಳೆ ಸಾಗಿಸಲು ಸಾಧ್ಯವಾಗಿಲ್ಲ. ರೈತರಿಗೆ ವಂಚಿಸುವ ಉದ್ದೇಶದಿಂದಲೇ ನಿಧಾನಗತಿಯ ಖರೀದಿ ಪದ್ಧತಿ ಅನುಸರಿಸಲಾಗಿದೆ ಎಂದು ಅವರು ಆರೋಪಿಸಿದರು.
ಅಧಿಕಾರಿಗಳ ಮೌನ: ಖರೀದಿ ಕೇಂದ್ರದ ಕಾರ್ಯನಿರ್ವಹಣೆಯ ಬಗ್ಗೆ ಕೃಷಿ ಸಚಿವ ಕೃಷ್ಣ ಬೈರೇಗೌಡರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲಧಿಕಾರಿಗಳೂ ಸಹ ಈ ನಿಟ್ಟಿನಲ್ಲಿ ಮೌನ ವಹಿಸಿದ್ದಾರೆ. ದಿನವೊಂದಕ್ಕೆ ಕೇವಲ 20 ಜನ ರೈತರಿಂದ ಖರೀದಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಟೀಕಿಸಿದರು.
ತೊಗರಿ ಖರೀದಿ ಕೇಂದ್ರವನ್ನು ಸೋಮವಾರ ದಿಢೀರ್ ಆಗಿ ಮುಚ್ಚಲಾಗಿದೆ. ಇದರಿಂದ ಜಿಲ್ಲೆಯಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಮಾರುಕಟ್ಟೆಯಲ್ಲಿಯೂ ಸೂಕ್ತ ದರವಿಲ್ಲದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆಂದು ದೂರಿದರು.
ಖರೀದಿ ಕೇಂದ್ರ ಮುಚ್ಚುವ ಬಗ್ಗೆ ಜಿಲ್ಲಾಡಳಿತ ಯಾವುದೇ ರೀತಿಯ ಮಾಹಿತಿಯನ್ನೂ ರೈತರಿಗೆ ನೀಡಿಲ್ಲ. ಅದರಿಂದಾಗಿ ಅನೇಕ ರೈತರು ತಾವು ಬೆಳೆದ ತೊಗರಿ ಬೆಳೆಯನ್ನು ಖರೀದಿ ಕೇಂದ್ರಕ್ಕೆ ಸಾಗಿಸುತ್ತಿದ್ದು, ಕೇಂದ್ರ ಮುಚ್ಚಿದ್ದರಿಂದ ಖರೀದಿ ನಡೆಯದೇ ಸಾಗಣೆ ವೆಚ್ಚದ ಮತ್ತಷ್ಟು ಹೊರೆ ಹೊರುವಂಥ ಸ್ಥಿತಿಯಲ್ಲಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ನೆರವಿಗೆ ಧಾವಿಸಿ: ರಾಜ್ಯ ಸರ್ಕಾರದಿಂದ ಜಿಲ್ಲೆಯ ತೊಗರಿ ಬೆಳೆಗಾರರಿಗೆ ಅನ್ಯಾಯವಾಗಿದ್ದು, ಕೂಡಲೇ ಮುಚ್ಚಿರುವ ಖರೀದಿ ಕೇಂದ್ರ ಪುನಾ ತೆರೆಯಬೇಕು. ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿ ಆರಂಭಿಸಬೇಕು. ದಿನಕ್ಕೆ 100 ರೈತರಿಂದ ಖರೀದಿಸುವ ನಿಟ್ಟಿನಲ್ಲಿ ಆಡಳಿತ ಕ್ರಮ ಕೈಗೊಂಡು ರೈತರ ನೆರವಿಗೆ ಧಾವಿಸಬೇಕು. ತಪ್ಪಿದಲ್ಲಿ ಸಂಘಟನೆಯಿಂದ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ರಾಕೇಶ್ ರಾಜಲಬಂಡಿ, ಜಂಬುನಾಥ್ ಯಾದವ್, ಸಿರಾಜ್, ಸೋಮನಾಥ್, ಪ್ರಭಾಕರ, ರಾಜೇಂದ್ರಕುಮಾರ್, ಶ್ರೀಕಾಂತ್, ಮೋಹನಲಾಲ್, ಶಿವಮೂರ್ತಿ, ಶಬ್ಬೀರ್ ಅಹ್ಮದ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

