ರಾಯಚೂರು

ವಿವಿಧ ಗ್ರಾಮಗಳ ಸೌಲಭ್ಯಕ್ಕೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಮಾ.7
ರಾಯಚೂರು ಹಾಗೂ ಮಾನವಿ ತಾಲೂಕುಗಳ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಜನರಿಗೆ ಮೂಲ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಕರ್ನಾಟಕ ಯುವಜನ ರಂಗ ಸಂಘಟನೆಯ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಪಂ ಸಿಇಒಗೆ ಮನವಿ ಸಲ್ಲಿಸಿ, ಮಾನವಿ ತಾಲೂಕಿನ ಗಣದಿನ್ನಿ ಗ್ರಾಪಂನಲ್ಲಿ 2010ರಿಂದ 2013ರ ವರೆಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೈಗೆತ್ತಿಕೊಂಡ ವಿವಿಧ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.
ಖೊಟ್ಟಿ ಸಹಿ ಮಾಡಿ ದೂರು ಹಿಂದಕ್ಕೆ: ಕಾಮಗಾರಿ ಪೂರ್ಣಗೊಳ್ಳದಿದ್ದರೂ ಗಣದಿನ್ನಿ ಗ್ರಾಪಂನಲ್ಲಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಮಾನವಿ ತಾಪಂಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ದೂರು ಸಲ್ಲಿಸಿದ್ದ ನಾಗೇಂದ್ರ ಎಂಬುವವರ ಖೊಟ್ಟಿ ಸಹಿ ಮಾಡಿ ದೂರು ಹಿಂಪಡೆದ ಬಗ್ಗೆ ದಾಖಲೆ ಸೃಷ್ಟಿಸಲಾಗಿದೆ ಎಂದು ಟೀಕಿಸಿದರು.
ಕಾಮಗಾರಿಯಲ್ಲಿನ ಅಕ್ರಮದ ಬಗ್ಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಘಟನೆಯ ಅಧ್ಯಕ್ಷ ನಾಗೇಂದ್ರ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಇದೇ ಗ್ರಾಪಂ ವ್ಯಾಪ್ತಿಯ ಸಿಂಗಡದಿನ್ನಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವವಿದ್ದು, ಜನತೆ ಎರಡು ಕಿಮೀ ದೂರದಿಂದ ನೀರು ತರುವಂಥ ಸ್ಥಿತಿಯಿದೆ ಎಂದು ಆರೋಪಿಸಿದರು.
ಮೂಲ ಸೌಕರ್ಯವಿಲ್ಲದೆ ತೊಂದರೆ: ಮಾಚನೂರು ಗ್ರಾಮದಲ್ಲಿಯೂ ನೀರಿನ ಅಭಾವವಿದೆ. ಅದೇ ರೀತಿ ಮಹಿಳಾ ಶೌಚಾಲಗಳು ಅನೇಕ ಕಡೆಯಿಲ್ಲದ್ದರಿಂದ ತೊಂದರೆಯಾಗಿದೆ. ಸಮರ್ಪಕ ಕುಡಿಯುವ ನೀರು, ಸಂಪರ್ಕ ರಸ್ತೆ, ಬೀದಿದೀಪಗಳಿಲ್ಲದೇ ಗ್ರಾಮೀಣ ಪ್ರದೇಶದ ಜನತೆ ತೊಂದರೆಗೆ ಸಿಲುಕಿದ್ದಾರೆಂದು ದೂರಿದರು.
ಮಾನವಿ ಹೊಕ್ರಾಣಿ ಗ್ರಾಮದ ಕೆರೆಯಿಂದ ಪೈಪ್‌ಲೈನ್ ಅಳವಡಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಗ್ರಾಮದ ಎಲ್ಲ ಪ್ರದೇಶದಲ್ಲಿ ರಸ್ತೆ, ಚರಂಡಿ ನಿರ್ಮಿಸಬೇಕು. ಸಿಂಗಡದಿನ್ನಿ, ಮಾಚನೂರು, ಬೇವಿನೂರು, ತುಪ್ಪದೂರು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಬಿಸಬೇಕೆಂದು ಆಗ್ರಹಿಸಿದರು.
ಕಾನೂನು ಕ್ರಮಕ್ಕೆ ಆಗ್ರಹ: ಮಾಡಗಿರಿ ಗ್ರಾಮದಲ್ಲಿ ಮಹಿಳೆಯರ ಸರ್ಕಾರಿ ಜಾಗವನ್ನು ಶೌಚಾಲಯಕ್ಕೆ ಬಳಸುತ್ತಿದ್ದು, ಆ ಜಾಗಕ್ಕೆ ರಕ್ಷಣಾ ಗೋಡೆ ನಿರ್ಮಿಸಬೇಕು. ಜಿಲ್ಲೆಯ ವಿವಿಧ ಗ್ರಾಪಂ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಶಿಷ್ಟ ಜಾತಿಯ ಕರ ಸಂಗ್ರಹಕಾರರಿಗೆ ಜೇಷ್ಠತಾ ಪಟ್ಟಿಯಂತೆ ಬಡ್ತಿ ನೀಡಬೇಕು. ಸಂಘಟನೆಯ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹೋರಾಟಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಹುರಕಡ್ಲಿ, ಉಪಾಧ್ಯಕ್ಷ ಎಸ್.ಲಿಂಗಣ್ಣ, ಜಿಲ್ಲಾ ಕಾರ್ಯದರ್ಶಿ ಅಬ್ರಾಹಂ ಪನ್ನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕೊಪ್ಪರ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.