ರಾಯಚೂರು

ಗುವಿವಿಯಲ್ಲಿ ಪಿಎಚ್.ಡಿ ಹಗರಣ: ಸಂಶೋಧನಾ ಪ್ರಬಂಧಗಳ ನಕಲು

Published On :

ಕ.ಪ್ರ. ವಾರ್ತೆ ಗುಲ್ಬರ್ಗ ಮಾ.10
ಒಂದಿಲ್ಲೊಂದು ವಿಧದಲ್ಲಿ ಸದಾ ಸುದ್ದಿಯಲ್ಲಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಈ ಬಾರಿ ಸಂಶೋಧನಾ ಪ್ರಬಂಧ ನಕಲು ಮಾಡಿರುವ ಪ್ರಕರಣದೊಂದಿಗೆ ಕುಖ್ಯಾತಿಗೆ ಒಳಗಾಗಿದೆ. ಇಬ್ಬರು ಸಂಶೋಧನಾರ್ಥಿಗಳು ಪರಸ್ಪರ ಪ್ರಬಂಧಗಳನ್ನು ಕದ್ದು ನಕಲು ಮಾಡಿ ಡಾಕ್ಟರೇಟ್ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ತನ್ನ ಸಂಶೋಧನಾ ವಿಷಯವಲ್ಲದಿದ್ದರೂ ಪತ್ನಿಯ ಪಿಎಚ್.ಡಿ ಪ್ರಬಂಧದ ಕೆಲ ಅಧ್ಯಾಯಗಳನ್ನು ಪತಿ ನಕಲು ಮಾಡಿದರೆ, ಮಾರ್ಗದರ್ಶಕಿ ಪತಿಯ ಪಿಎಚ್.ಡಿ ಪ್ರಬಂಧದ ಕೆಲ ಅಧ್ಯಾಯಗಳನ್ನು ನಕಲು ಮಾಡಿ ಅಧ್ಯಾಪಕರಾಗಿರುವ ಪ್ರಕರಣಗಳನ್ನು ಆರ್.ಕೆ. ಹುಡಗಿ ಮತ್ತವರ ಸಮಾನ ಮನಸ್ಕ ಸ್ವಾಭಿಮಾನಿ ಜನತಾ ಸಂಘ ಹಾಗೂ ವಿಶ್ವವಿದ್ಯಾಲಯ ಶುದ್ಧೀಕರಣ ಹೋರಾಟ ಸಮಿತಿಯ ಗೆಳೆಯರು ಬಯಲಿಗೆಳೆದಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ದಾಖಲೆ ಸಮೇತ ಮಾತನಾಡಿದ ವಿಶ್ವವಿದ್ಯಾಲಯ ಶುದ್ಧೀಕರಣ ಹೋರಾಟ ಸಮಿತಿ ಅಧ್ಯಕ್ಷ ಆರ್.ಕೆ. ಹುಡಗಿ, ಸ್ವಾಭಿಮಾನ ಜನತಾ ಸಂಘದ ಜಿಲ್ಲಾಧ್ಯಕ್ಷ ರೂಪಂದಾಸ್ ಅವರು, ಡಾಕ್ಟರೇಟ್ ಪಡೆಯಲು ವಿಶ್ವವಿದ್ಯಾಲಯಗಳಿಗೆ ವಂಚಿಸಿರುವ ಪ್ರಾಧ್ಯಾಪಕರನ್ನು ಹಾಗೂ ಇವರಿಗೆ ಸಹಕರಿಸಿದ ಮಾರ್ಗದರ್ಶಕರನ್ನು ಕೂಡಲೇ ಅಮಾನತು ಮಾಡಿ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಅಮಾನತಿಗೆ ಒತ್ತಾಯ: ನಗರದ ವಿ.ಜಿ. ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ. ವೀಣಾ ಪಿ.ಎಚ್.,  ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಪ್ರಾದೇಶಿಕ ಕಚೇರಿಯ ಸಂಯೋಜಕ ಡಾ. ಪ್ರವೀಣಕುಮಾರ ಹೊನಗುಂಟಿಕರ್, ಬಿ.ಬಿ. ರೋಜಾ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಶಹಾಜಾಹನ್ ಅವರು ಯುಜಿಸಿ ನಿಯಮಗಳನ್ನು ಪಾಲಿಸದೆ ಪಿಎಚ್‌ಡಿ ಪದವಿ ಪಡೆದಿದ್ದು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ವೀಣಾ ಹೊನಗುಂಟಿ ಅವರು 1997ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ವಿಬಾಗದಿಂದ ಪ್ರೊ. ಎಂ.ಸುಭಾಷ್ ಅಬೆಲ್‌ರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪಡೆದಿದ್ದಾರೆ. ಇವರ ಪತಿ ಪ್ರವೀಣ ಹೊನಗುಂಟಿ  2005ರಲ್ಲಿ ಹೈದ್ರಾಬಾದಿನ ಜವಾಹರಲಾಲ್ ನೆಹರು ಟೆಕ್ನೊಲಜಿ ವಿವಿಯಿಂದ ಡಾ. ಕೆ.ರಾಜಗೋಪಾಲ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. ಮತ್ತೊಬ್ಬರಾದ ಸೈಯದ್ ಶಹಾಜಾಹನ್ ಗುವಿವಿ ಗಣಿತ ವಿಭಾಗದಲ್ಲಿ ಡಾ. ವೀಣಾ ಪಿ. ಹೊನಗುಂಟಿ ಅವರ ಮಾರ್ಗದರ್ಶನದಲ್ಲಿ 2006ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರಲ್ಲಿ ಪ್ರವೀಣ ಹಾಗೂ ಶಹಾಜಹಾನ್‌ರು ಡಾ. ವೀಣಾ ಅವರ ಪ್ರಬಂಧದಲ್ಲಿ ಕೆಲ ಅಧ್ಯಾಯಗಳನ್ನು ಇದ್ದಕಿದ್ದಂತೆ ನಕಲು ಮಾಡಿದ್ದಾರೆ, ಅದಕ್ಕೆ ವೀಣಾ ಸಹಕರಿಸಿದ್ದಾರೆ ಎಂದು ದಾಖಲೆಗಳ ಸಮೇತ ವಿವರಿಸಿದರು.
ಪ್ರವೀಣ ನಕಲು: ವೀಣಾ ಹಾಗೂ ಪ್ರವೀಣರ ಅಧ್ಯಾಯದ ವಿಷಯಗಳು ಬೇರೆ ಬೇರೆಯಾಗಿ ಸಂಬಂಧವಿಲ್ಲದಿದ್ದರೂ ಪ್ರವೀಣ ಅವರು ಪತ್ನಿ ವೀಣಾಳ ಪ್ರಬಂಧದಲ್ಲಿನ ಕೆಲ ಅಧ್ಯಾಯಗಳನ್ನು ಇದ್ದಕ್ಕಿದ್ದಂತೆ ನಕಲು ಮಾಡಿದ್ದಾರೆ. ವೀಣಾರ ಪಿಎಚ್.ಡಿ ಮೊದಲ ಅಧ್ಯಾಯವನ್ನು ಪ್ರವೀಣ ತಮ್ಮ ಮೊದಲ ಅಧ್ಯಾಯಕ್ಕೆ, 4ನೇ ಅಧ್ಯಾಯವನ್ನು 6ನೇ ಅಧ್ಯಾಯಕ್ಕೆ, 9ನೇ ಅಧ್ಯಾಯವನ್ನು 5ನೇ ಅಧ್ಯಾಯಕ್ಕೆ ಹಾಗೂ 3ನೇ ಅಧ್ಯಾಯವನ್ನು 4ನೇ ಅಧ್ಯಾಯಕ್ಕೆ ಯಥಾವತ್ತಾಗಿ ನಕಲು ಮಾಡಿದ್ದಾರೆ.
ಶಹಜಹಾನ್ ನಕಲು: ಡಾ. ಸಯ್ಯದ್ ಶಹಾಜಾಹನ್‌ರು ಪ್ರವೀಣರ 9ನೇ ಅಧ್ಯಾಯವನ್ನು 6ನೇ ಅಧ್ಯಾಯಕ್ಕೆ, 8ನೇ ಅಧ್ಯಾಯವನ್ನು 4ನೇ ಅಧ್ಯಾಯಕ್ಕೆ ಮತ್ತು 7ನೇ ಅಧ್ಯಾಯವನ್ನು 2ನೇ ಅಧ್ಯಾಯಕ್ಕೆ ಯಥಾವತ್ತಾಗಿ ನಕಲು ಮಾಡಿದ್ದಾರೆ. ಪತ್ನಿ ವೀಣಾಳ ಪಿಎಚ್.ಡಿ ಅಧ್ಯಾಯಗಳನ್ನು ಪತಿ ಪ್ರವೀಣ ನಕಲು ಮಾಡಿದರೆ, ಪ್ರವೀಣವರ  ಪಿಎಚ್‌ಡಿ ಅಧ್ಯಾಯಗಳನ್ನು ಶಹಾಜಹಾನ್ ನಕಲು ಮಾಡಿದ್ದಾರೆ. ಪತಿ ಪ್ರವೀಣ ಹಾಗೂ ಶಹಾಜಹಾನ್‌ಗೆ  ಸರಿಯಾಗಿ ಮಾರ್ಗದರ್ಶನ ನೀಡದೆ ನಕಲು ಮಾಡಲು ಡಾ. ವೀಣಾ ಸಹಕರಿಸಿದ್ದಾರೆ. ಈ ಮೂವರು ಸೇರಿ ಕ್ರಿಮಿನಲ್ ಅಪರಾಧ ಮಾಡಿದ್ದಾರೆ ಎಂದು ಹುಡಗಿ ಮತ್ತವರ ಸಮಿತಿ ಗೆಳೆಯರು ಆರೋಪಿಸಿದರು.
ಯುಜಿಸಿ ನಿಯಮಗಳ ಪ್ರಕಾರ- ಶೇ.5ಕ್ಕಿಂತ ಹೆಚ್ಚು ಹೊಂದಾಣಿಕೆ ಆಗಬಾರದೆಂದಿದೆ. ಆದರೆ ಇವರು ಅಧ್ಯಾಯಗಳನ್ನೇ ನಕಲು ಮಾಡಿದ್ದಾರೆ. ಇವರ ವಿರುದ್ಧ 48 ಗಂಟೆಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಎಲ್ಲ ಕಾಲೇಜುಗಳನ್ನು ಬಂದ್ ಮಾಡಿ ಹೋರಾಟ ಮಾಡಲಾಗುತ್ತದೆ ಎಂದು ಆರ್.ಕೆ.ಹುಡಗಿ ತಿಳಿಸಿದರು.
ಸ್ವಾಭಿಮಾನ ಜನತಾ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ ಹಳ್ಳಿಗಿಡ, ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಸಿಂಗಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.