ರಾಯಚೂರು

ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರಕ್ಕೆ ರೈತ ಸಂಘ ಒತ್ತಾಯ

Published On :

ಲಿಂಗಸ್ಗೂರು: ತಾಲೂಕಿನ ಗುರುಗುಂಟಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸಂಭವಿಸಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ರೈತರು ತೀವ್ರ ಸಂಕಷ್ಟಕೀಡಾಗಿದ್ದಾರೆ. ಕೂಡಲೇ ಪ್ರಕೃತಿ ವಿಕೋಪ ಯೋಜನೆಯಡಿ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತಸಂಘದಿಂದ ರೈತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಗುರುಗುಂಟಾ ಹೋಬಳಿಯ ದೇವರಭೂಪುರ, ಅಮರೇಶ್ವರ, ಗುಂತಗೋಳ, ಯರಗೋಡಿ, ಯಳಗುಂದಿ, ಗುರುಗುಂಟಾ, ಗೌಡೂರು ಸೇರಿದಂತೆ 20-25 ಗ್ರಾಮಗಳ ವ್ಯಾಪ್ತಿಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಪಪ್ಪಾಯಿ, ದಾಳಿಂಬೆ, ದ್ರಾಕ್ಷಿ, ಉಳ್ಳಾಗಡ್ಡಿ, ಟೋಮೆಟೋ, ಬತ್ತ, ಜೋಳ, ಶೇಂಗಾ, ಮೆಣಸಿನಕಾಯಿ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಮುಂಗಾರು ಮತ್ತು ಹಿಂಗಾರು ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಸಹಾಯಕ ಆಯುಕ್ತರು ಖುದ್ದಾಗಿ ಪರಿಶೀಲನೆ ಮಾಡಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಕೃಷಿ, ತೋಟಗಾರಿಕೆ ಅಧಿಕಾರಿಗಳು ವರದಿ ನೀಡಲು ಸೂಚಿಸಿದ್ದರೂ ಬೇಕಾಬಿಟ್ಟಿಯಾಗಿ 3 ದಿನಗಳಿಂದ ಭೂಮಿಗಳನ್ನು ಸಂಪೂರ್ಣ ಸಮೀಕ್ಷೆ ನಡೆಸಿಲ್ಲವೆಂದು ದೂರಿದರು. ಎಲ್ಲ ಗ್ರಾಮಗಳಲ್ಲಿ ತೋಟಗಾರಿಕೆ ಬೆಳೆಗಳು 10-15 ಕೋಟಿ ನಷ್ಟವಾಗಿದೆ ಹಾಗೂ ಮಸ್ಕಿ, ಲಿಂಗಸ್ಗೂರು, ಮುದಗಲ್ ಹೋಬಳಿಗಳ ಎಲ್ಲ ಗ್ರಾಮಗಳಲ್ಲಿ ಬಿಳಿಜೋಳ, ಶೇಂಗಾ, ಮೆಕ್ಕೆಜೋಳ ಮಳೆಯಿಂದ ನಷ್ಟವಾಗಿದ್ದು, ಈ ಬಗ್ಗೆ ಸಮಗ್ರ ವರದಿ ತಯಾರಿಸಿ ರೈತರಿಗೆ ಪರಿಹಾರ ಕೊಡಬೇಕು. ಕುರಿ, ಮೇಕೆ ಸೇರಿ ಜಾನುವಾರುಗಳು ಸಾವನ್ನಪ್ಪಿದ್ದು, ಕೂಡಲೇ ಪರಿಹಾರ ಒದಗಿಸಬೇಕು. ವರುಣನ ಅವಕೃಪೆಗೆ ತುತ್ತಾಗಿ ಅಂದಾಜು 50 ಕೋಟಿ ನಷ್ಟವಾಗಿದ್ದು, ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ರೈತಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ತಾಲೂಕು ಅಧ್ಯಕ್ಷ ಸಿದ್ಧೇಶ ಗೌಡೂರು, ಮುಖಂಡರಾದ ಗ್ಯಾನಪ್ಪ ಕಾಚಾಪುರ, ಶಿವಣ್ಣ ಭೂಪೂರ, ಗಂಗಪ್ಪ ಯರಗೋಡಿ, ಅಮರಯ್ಯಸ್ವಾಮಿ ಹುಲಿಗುಡ್ಡ, ಅಮರೇಶ ಬೆಣ್ಣಿ ಗೌಡೂರು, ಪ್ರಭುಲಿಂಗ ಮೇಗಳಮನಿ, ನಿಂಗಪ್ಪ ಪರಂಗಿ, ಶಿವಪ್ಪ ಮಾಚನೂರ, ಹುಸೇನಪ್ಪ ಗುಂತಗೋಳ, ಶರಣಗೌಡ ಕೋಠಾ, ಸಂಜೀವಪ್ಪ ಇತರರು ಇದ್ದರು.
ಪರಿಹಾರಕ್ಕೆ ಕೆಆರ್‌ಎಸ್ ಆಗ್ರಹ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ರೈತರ ಮನೆ- ಬೆಳೆ ಹಾನಿಗೀಡಾಗಿದ್ದು, ಕೂಡಲೇ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತಸಂಘದಿಂದ ಸಹಾಯಕ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗುಡಿಸಲು ವಾಸಿಗಳಿಗೆ ಕೂಡಲೇ ಮನೆ ಮಂಜೂರು ಮಾಡಿ ಗುಡಿಸಲು ಮುಕ್ತ ತಾಲೂಕನ್ನಾಗಿಸಬೇಕು. ಜಾನುವಾರುಗಳಿಗೆ ಮೇವು ಒದಗಿಸಿ ರಕ್ಷಿಸಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ. ಬಸವರಾಜ ನಗನೂರು, ಚಿನ್ನಪ್ಪ ಕೊಟ್ರಿಕಿ, ರೇವಣಸಿದ್ದಪ್ಪ, ಗೌಸಸಾಬ ಗುಂತಗೋಳ, ಲಕ್ಷ್ಮೀನಾರಾಯಣ, ಮೇಘಪ್ಪ, ದೇವಣ್ಣ, ರಾಜಾಸಾಬ, ಮೀಯಾಖಾನ್, ಅಮರಪ್ಪ ಗುಂತಗೋಳ, ಗೌಡಪ್ಪ ಐದಬಾವಿ, ದ್ಯಾವಪ್ಪ ರಾಮಲೂಟಿ ಇದ್ದರು.

ತಾಪಂ ಸದಸ್ಯರ ಮನವಿ
ಲಿಂಗಸ್ಗೂರು: ಇತ್ತೀಚಿಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಯಳಗುಂದಿ ಗ್ರಾಮಗಳಲ್ಲಿ ಮನೆ, ಬೆಳೆ ನಾಶವಾಗಿದ್ದು, ಹಾನಿಗೀಡಾದವರಿಗೆ ಕೂಡಲೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ ಯಾದವ್ ನೇತೃತ್ವದಲ್ಲಿ ತಾಪಂ ಸದಸ್ಯರು ಸೋಮವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ವೇಳೆ ತಾಪಂ ಸದಸ್ಯರಾದ ರುದ್ರಗೌಡ ತುರಡಗಿ, ಮಲ್ಲಪ್ಪ ಕಾಚಾಪುರ, ಗುಂಡಮ್ಮ ದುರುಗಪ್ಪ, ದುರುಗಮ್ಮ ಸಂಗಪ್ಪ, ಲಕ್ಷ್ಮೀ ಆದಪ್ಪ, ಸಂಗಮ್ಮ ಸಿದ್ಧನಗೌಡ, ನಾಗವೇಣಿ ಸುರೇಶ, ಬಸಯ್ಯ ಸಾಹುಕಾರ, ಪರಸಪ್ಪ ಹುನಕುಂಟಿ, ನಿರ್ಮಲಾ ಬೈಲಪ್ಪ, ಯಮನವ್ವ ಹನುಮಂತ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.