ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳೂ 'ಫುಲ್ ಬ್ಯುಸಿ'
ಜಗನ್ನಾಥ ಆರ್.ದೇಸಾಯಿ
ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.13
ಲೋಕಸಭೆ ಚುನಾವಣೆಯ ಘೋಷಣೆ ರಾಜಕಾರಣಿಗಳಿಗೆ ಫುಲ್ ಬ್ಯುಸಿಯಾಗಿಸಿದರೆ, ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಎಲ್ಲ ಕೆಲಸಕ್ಕೂ ನೀತಿ ಸಂಹಿತೆಯಿದೆ. ತಾವೂ ತುಂಬಾ ಬ್ಯುಸಿ ಎಂದು ನೆಪವೊಡ್ಡಲು ಅನುಕೂಲ ಕಲ್ಪಿಸಿದೆ. ನನೆಗುದಿಗೆ ಬಿದ್ದ ಎಲ್ಲ ಕೆಲಸಗಳಿಗೀಗ ನೀತಿ ಸಂಹಿತೆ ಕಾರಣ ಎಂದು ಬಿಂಬಿಸುವುದು ಜಾರಿಯಲ್ಲಿದೆ. ಪರಿಣಾಮ ಕಚೇರಿಗಳಿಗೆ ಅಲೆದಾಡುವುದು ಜನತೆಗೆ ನಿತ್ಯ ಕರ್ಮವಾಗಿದೆ.
- ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅಧಿಕಾರಿಗಳು ನಿರ್ಮಿಸಿರುವ ಸದ್ಯದ ಸ್ಥಿತಿಯಿದು.
ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದಾಗಿನಿಂದಲೇ ಕೆಲ ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ. ಪ್ರಶ್ನಿಸಿದರೆ ಸಾಹೇಬರು ಚುನಾವಣೆ ಕಾರ್ಯಕ್ಕೆ ಹೊರಹೋಗಿದ್ದಾರೆಂಬ ಸಿದ್ಧ ಉತ್ತರ ದೊರೆಯುತ್ತಿದ್ದು, ಸಾರ್ವಜನಿಕರು ಬೇಸರಗೊಂಡು ಮರಳುವಂಥ ಸ್ಥಿತಿಯಿದೆ.
ಕಚೇರಿಗೆ ಬರಬೇಡಿ: ಸಂಧ್ಯಾಸುರಕ್ಷಾ ಸೇರಿದಂತೆ ವಿವಿಧ ಮಾಸಾಶನಗಳಿಗೆ ಸಂಬಂಧಿಸಿ ವಯೋವೃದ್ಧರು, ಮಹಿಳೆಯರು ಮಾಸಾಶನ ಬಾರದೇ ಪರದಾಡಿ ಕೊನೆಗೆ ನಗರದ ತಹಸೀಲ್ದಾರ್ ಕಚೇರಿಗೆ ತೆರಳಿ ವಿಚಾರಿಸಿದರೆ ಅಲ್ಲಿ ನೀತಿ ಸಂಹಿತೆಯಿದೆ. ಚುನಾವಣೆ ಮುಗಿದ ನಂತರವೇ ವಿಚಾರಣೆ ಎಂಬ ಸಿದ್ಧ ಉತ್ತರ ದೊರೆಯುತ್ತಿದೆ.
ಅಷ್ಟೇ ಅಲ್ಲ ನೀತಿ ಸಂಹಿತೆಯ ನೆಪ ಹೇಳಿ ಸುಸ್ತಾಗಿರುವ ಸಿಬ್ಬಂದಿ ಕೊನೆಗೆ ಕಚೇರಿಯ ವಿವಿಧೆಡೆ ಗೋಡೆ ಮೇಲೆಲ್ಲಾ ನೀತಿ ಸಂಹಿತೆಯಿದೆ. ಚುನಾವಣೆ ನಂತರವೇ ವಿಚಾರಿಸಲು ಬರುವಂತೆ ಸೂಚಿಸುವ ಮಾಹಿತಿ ಅಂಟಿಸಿದ್ದಾರೆ.
ರೇಷನ್ ಗೋಳು: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗಿನಿಂದ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡುಗಳಿಗೆ ಎಲ್ಲಿಲ್ಲದ ಬೇಡಿಕೆ. ಪರಿಣಾಮ ಸಾವಿರಾರು ಸಂಖ್ಯೆಯ ಜನತೆ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದ್ದರು. ಬಿಪಿಎಲ್ ಕಾರ್ಡುಗಳ ಪರಿಶೀಲನೆ ಇತ್ತೀಚೆಗೆ ಮುಗಿಸಿದ್ದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇನ್ನೇನು ಕಾರ್ಡು ವಿತರಣೆಗೆ ಮುಂದಾಗಬೇಕು ನೀತಿ ಸಂಹಿತೆ ಜಾರಿಯಾಗಿದೆ. ಆಹಾರ ಇಲಾಖೆಯ ಮೂಲಗಳ ಪ್ರಕಾರ ಒಟ್ಟು 90 ಸಾವಿರ ವಿವಿಧ ಪಡಿತರ ಚೀಟಿಗಳಿಗೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರ ಅರ್ಧದಷ್ಟು ಕಾರ್ಡುಗಳನ್ನು ಮಾತ್ರ ವಿತರಿಸಲಾಗಿದೆ.
ನೀತಿ ಸಂಹಿತೆ ಜಾರಿಯಾಗಿದ್ದರಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂತರ್ಜಾಲದಲ್ಲಿ ಲಾಕ್ ಮಾಡಲಾಗಿದೆ. ಅದಕ್ಕೆ ಸದ್ಯ ಯಾರಿಗೂ ಪಡಿತರ ಚೀಟಿ ವಿತರಣೆಯಿಲ್ಲ ಎಂಬ ಮಾತು ಆಹಾರ ಇಲಾಖೆಯಿಂದ ಕೇಳಿಬರುತ್ತಿದೆ. ಹಾಗಾಗಿ ತಿಂಗಳುಗಟ್ಟಲೇ ಇಲಾಖೆಗೆ ಅಲೆದು ಸುಸ್ತಾಗಿರುವ ಬಡವರು ಮತ್ತೆರಡು ತಿಂಗಳು ಚುನಾವಣೆ ಮುಗಿಯುವವರೆಗೆ ಕಾಯುವಂಥ ಸ್ಥಿತಿ.
ಮೈಗಳ್ಳ ಅಧಿಕಾರಿಗಳಿಗೆ ಖುಷಿ!: ಒಂದೆಡೆ ಅಧಿಕಾರಿಗಳಿಗೆ ನೀತಿ ಸಂಹಿತೆಯ ಕಟ್ಟುನಿಟ್ಟಿನ ಪಾಲನೆ ಭೀತಿಯಾದರೆ, ಮತ್ತೆ ಕೆಲವರಿಗೆ ಕೆಲಸದಿಂದ ಪಾರಾಗಲು ನೀತಿ ಸಂಹಿತೆ ಒಳ್ಳೆಯ ಅವಕಾಶ ಕಲ್ಪಿಸಿದೆ. ಚುನಾವಣೆ ವಿಭಾಗದ ಸಿಬ್ಬಂದಿ ಹೊರತುಪಡಿಸಿ ಇನ್ನುಳಿದಂತೆ ಹಿರಿಯ ಅಧಿಕಾರಿಗಳು ಮಾತ್ರ ಚುನಾವಣೆ ಕಾರ್ಯದಲ್ಲಿದ್ದಾರೆ.
ಆದರೆ ನೀತಿ ಸಂಹಿತೆಯ ಹೆಸರಿನಲ್ಲಿ ಆಡಳಿತದ ಎಲ್ಲರೂ ಕೆಲಸದಿಂದ ದೂರವುಳಿಯುತ್ತಿರುವುದಂತೂ ಸ್ಪಷ್ಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

