ಕೊಲೆ ಘಟನೆ ಖಂಡಿಸಿ 17ರಂದು ಪ್ರತಿಭಟನೆ
ಕ.ಪ್ರ. ವಾರ್ತೆ ರಾಯಚೂರು ಮಾ. 13
ಹೋರಾಟಗಾರ ನಾಗೇಂದ್ರಪ್ಪ ಹೊಕ್ರಾಣಿ ಅವರ ಕೊಲೆಯನ್ನು ಖಂಡಿಸಿ ಮಾ.17ರಂದು ಮಾನವಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕರ್ನಾಟಕ ಯುವಜನ ರಂಗದ ರಾಜ್ಯ ಮುಖಂಡ ಬಿ. ಬಸವಲಿಂಗಪ್ಪ ಹೇಳಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ನಾಗೇಂದ್ರಪ್ಪ ಹೊಕ್ರಾಣಿ ಅವರು ಗಣದಿನ್ನಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದ್ದ ಅನುದಾನದ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಹೋರಾಟ ನಡೆಸಿದ್ದರು.
ಹೋರಾಟ ಸಹಿಸದ ರಾಜಕೀಯ ಶಕ್ತಿಗಳು ನಾಗೇಂದ್ರಪ್ಪ ಹೊಕ್ರಾಣಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ಅವರು ಓಪೆಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆಂದು ತಿಳಿಸಿದರು.
ಅನುದಾನ ದುರ್ಬಳಕೆ: ಗಣದಿನ್ನಿ ಗ್ರಾಪಂನಲ್ಲಿ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಅದನ್ನು ನಾಗೇಂದ್ರಪ್ಪ ಹೊಕ್ರಾಣಿ ವಿರೋಧಿಸಿ ಹೋರಾಟಕ್ಕಿಳಿದಿದ್ದರು.
ಅನುದಾನದ ದುರ್ಬಳಕೆ ಪ್ರಕರಣದಲ್ಲಿ ಶಾಮೀಲಾಗಿರುವ ಗ್ರಾಪಂ ಸದಸ್ಯ ಹನುಮಂತ, ಚಂದ್ರಶೇಖರ್, ಮಾರೆಪ್ಪ, ಗೂಳಪ್ಪ, ಯಲ್ಲೇಶ್ ಎಂಬುವವರು ನಾಗೇಂದ್ರಪ್ಪ ಹೊಕ್ರಾಣಿ ಮೇಲೆ ಕಬ್ಬಿಣದ ಸಲಾಕೆಗಳಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದರು.
ತನಿಖೆಗೆ ಆಗ್ರಹ: ಮಾರಣಾಂತಿಕ ಹಲ್ಲೆಯಿಂದಾಗಿ ನಾಗೇಂದ್ರಪ್ಪ ಹೊಕ್ರಾಣಿ ಸಾವಿಗೀಡಾಗಿದ್ದು, ಈ ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು. ರಾಜಕೀಯ ಶಕ್ತಿಗಳ ಕೈವಾಡವಿರುವ ಹಿನ್ನೆಲೆಯಲ್ಲಿ ಕೊಲೆ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಿ ಕುಟುಂಬದವರಿಗೆ ನ್ಯಾಯ ದೊರಕಿಸುವಂತೆ ಮಾ.17ರಂದು ಮಾನವಿಯಲ್ಲಿ ಹೋರಾಟದ ಮೂಲಕ ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಕೊಲೆ ಘಟನೆಯನ್ನು ಖಂಡಿಸಿ ಮಾ.17ರಂದು ಮಾನವಿಯಲ್ಲಿ ಪ್ರತಿಭಟನೆ ನಡೆಯಲಿದ್ದು, ಅದೇ ವೇಳೆ ಗಣದಿನ್ನಿ ಗ್ರಾಪಂ ನಲ್ಲಿ ನಡೆದ ಎಲ್ಲ ರೀತಿಯ ಅಕ್ರಮಗಳ ಸಮಗ್ರ ತನಿಖೆಗೂ ಒತ್ತಾಯಿಸಲಾಗುತ್ತದೆ. ಆರೋಪಿಗಳ ಬಂಧನ ಮತ್ತು ಶಿಕ್ಷೆಗೆ ಜಿಲ್ಲಾಡಳಿತವನ್ನು ಆಗ್ರಹಿಸುವುದಾಗಿ ಅವರು ತಿಳಿಸಿದರು.
ಸಂಘಟನೆ ಪ್ರಮುಖರಾದ ಬಸವರಾಜ ಹುರಕಡ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕೊಪ್ಪರ್, ಜಿಲ್ಲಾ ಕಾರ್ಯದರ್ಶಿ ಅಬ್ರಹಾಂ ಪನ್ನೂರು, ಬಸವರಾಜ ಎಕ್ಕಿ, ರಂಜಿತ್ ರಾಯಚೂರು ಸೇರಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

