ರಾಯಚೂರು

ಅಖಾಡ ಕುಸ್ತಿಗೆ ಇಂದಿನಿಂದ ಉಮೇದುವಾರಿಕೆ

Published On :

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರ(ಎಸ್ಟಿ ಮೀಸಲು)ದ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾ.19 ರಿಂದ ಆರಂಭಗೊಳ್ಳಲಿದ್ದು, ಚುನಾವಣೆಗೆ ಭರದ ಸಿದ್ಧತೆ ಜಿಲ್ಲಾಡಳಿತ ನಡೆಸಿದೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸ್ವೀಕಾರಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ದಿನವೂ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದು, ಒಬ್ಬ ಅಭ್ಯರ್ಥಿ ತನ್ನೊಂದಿಗೆ ಐವರನ್ನು ನಾಮಪತ್ರ ಸಲ್ಲಿಕೆ  ಪ್ರಕ್ರಿಯೆ  ಪ್ರದೇಶದಲ್ಲಿ ಪ್ರವೇಶಿಸಬಹುದಾಗಿದೆ.
ನಾಮಪತ್ರಗಳ ಪರಿಶೀಲನೆ: ಮಾ.19 ರಂದು ಲೋಕಸಭೆ ಚುನಾವಣೆಯ ಅಧಿಸೂಚನೆ ಹೊರಬೀಳಲಿದ್ದು, ಮಾ.26 ರವರೆಗೆ ನಾಮಪತ್ರಗಳ ಸಲ್ಲಿಕೆ ಕಾರ್ಯ ನಡೆಯಲಿದೆ. ಮಾ.27 ರಂದು ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆಯಲಿದ್ದು, ಮಾ.29 ನಾಮಪತ್ರ ಹಿಂಪಡೆಯಲು ಕಡೆ ದಿನವಾಗಿದೆ. ಏ.17ರಂದು ಮತದಾನ ನಡೆಯಲಿದ್ದು, ಮೇ 16ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
1610427 ಮತದಾರು: ರಾಯಚೂರು, ಯಾದಗಿರಿ ಜಿಲ್ಲೆ ವ್ಯಾಪ್ತಿಯ ರಾಯಚೂರು ನಗರ, ರಾಯಚೂರು ಗ್ರಾಮೀಣ(ಎಸ್ಟಿ), ಮಾನವಿ(ಎಸ್ಟಿ), ದೇವದುರ್ಗ(ಎಸ್ಟಿ), ಲಿಂಗಸ್ಗೂರು(ಎಸ್ಸಿ) ಹಾಗೂ ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ(ಎಸ್ಟಿ) ಕ್ಷೇತ್ರಗಳನ್ನೊಳಗೊಂಡಿರುವ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 1610427 ಮತದಾರರಿದ್ದಾರೆ. ಈಗಾಗಲೇ ಬಿಜೆಪಿಯಿಂದ ಶಿವನಗೌಡ ನಾಯಕ, ಕಾಂಗ್ರೆಸ್‌ನಿಂದ ಭಗವಂತರಾಯ ನಾಯಕ(ಬಿ.ವಿ.ನಾಯಕ), ಜೆಡಿಎಸ್‌ನಿಂದ ರಾಜಾ ಅಮರೇಶ್ವರ ನಾಯಕ, ಆಮ್ ಆದ್ಮಿ ಪಾರ್ಟಿಯಿಂದ ಭೀಮರಾಯ ಅವರ ಹೆಸರು ಘೋಷಣೆ ಯಾಗಿವೆ. ಇನ್ನುಳಿದಂತೆ ಸಿಪಿಎಂಎಲ್ ಪಕ್ಷವು ಎಂ. ನಾಗರಾಜ್ ಹಾಗೂ ಎಸ್‌ಯುಸಿಐ(ಸಿ) ಪಕ್ಷದಿಂದ ಕೆ. ಸೋಮಶೇಖರ್ ಯಾದಗಿರಿ ಅವರನ್ನು ಕಣಕ್ಕಿಳಿಸುವುದಾಗಿ ಪ್ರಕಟಿಸಿವೆ. ಹೀಗಾಗಿ ಚುನಾವಣೆ ಕಣ ಈಗಾಗಲೇ ರಂಗೇರಿದ್ದು, ಚುನಾವಣೆ ತಂತ್ರ ರೂಪಿಸುವಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತೊಡಗಿದ್ದಾರೆ.
ಆರೋಪ ಪ್ರತ್ಯಾರೋಪಕ್ಕೆ ವೇದಿಕೆ ಸಜ್ಜು: ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಆಗಲೇ ಪ್ರಚಾರ ಕಾರ್ಯವನ್ನು ಸದ್ದಿಲ್ಲದೇ ಆರಂಭಿಸಿದ್ದು, ಜೆಡಿಎಸ್ ಮಾತ್ರ ಪ್ರಚಾರಕ್ಕೆ ಇನ್ನೂ ತೊಡಗಿಲ್ಲ. ಅಧಿಸೂಚನೆಯ ಜಾರಿಯೊಂದಿಗೆ ಲೋಕಸಭೆ ಕ್ಷೇತ್ರದ ಚುನಾವಣೆ ಕಣ ರಂಗೇರಲಿದೆ. ಅಬ್ಬರದ ಪ್ರಚಾರ, ಆರೋಪ ಪ್ರತ್ಯಾರೋಪಕ್ಕೆ ವೇದಿಕೆ ಸಜ್ಜಾಗಲಿದೆ.
ಸಿದ್ಧತೆ: ಚುನಾವಣೆಯ ಅಧಿಸೂಚನೆಯ ಜಾರಿಯೊಂದಿಗೆ ಮತದಾನದ ಪ್ರಕ್ರಿಯೆಗೆ ಸಕಲ ಸಿದ್ಧತೆ ನಡೆದಿದ್ದು, ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1878 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲಾಡಳಿತವು ಈಗಾಗಲೇ ನೆರೆಯ ಆಂಧ್ರದ ಕರ್ನೂಲು ಮತ್ತು ಮಹೆಬೂಬ್ ನಗರ ಜಿಲ್ಲೆಯ ವಿವಿಧ ಇಲಾಖೆಗಳ ಮೇಲಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಆಂಧ್ರದ ಗಡಿಯಲ್ಲಿ ಚುನಾವಣೆ ವೇಳೆ ಬಿಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.