ರೈತರ ಬೆಂಬಲದಿಂದ ಪಕ್ಷೇತರ ಸ್ಪರ್ಧೆಗೆ ನಿರ್ಧಾರ: ನಾಯಕ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.19
ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಜಿಲ್ಲಾ ಹತ್ತಿ ಬೆಳೆಗಾರರ ರೈತರ ಹೋರಾಟ ಸಮಿತಿ ಅಧ್ಯಕ್ಷ ಚಿನ್ನಯ್ಯ ನಾಯಕ, ಕ್ಷೇತ್ರವನ್ನು ಇದುವರೆಗೆ ಪ್ರತಿನಿಧಿಸಿದ ಎಲ್ಲರೂ ಪ್ರಗತಿಗೆ ಗಮನಹರಿಸಿಲ್ಲ. ಬದಲಿಗೆ ಲೋಕಸಭೆ ಸದಸ್ಯರಾದವರು ತಮ್ಮ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆಂದು ಟೀಕಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹತ್ತಿ ಬೆಳೆಗಾರರು ಹಾಗೂ ಕ್ಷೇತ್ರದ ವ್ಯಾಪ್ತಿಯ ರೈತರ ಒತ್ತಾಯದ ಮೇರೆಗೆ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳು ರೈತರಿಗೆ ವಂಚಿಸಿವೆ ಎಂದು ಟೀಕಿಸಿದರು.
ಸ್ಪಂದಿಸದ ನಾಯಕರು: ರೈತರು, ಬಡವರ ಸಮಸ್ಯೆಗಳಿಗೆ ರಾಜಕೀಯ ನಾಯಕರು ಸ್ಪಂದಿಸಿಲ್ಲ. ಅದರಿಂದ ಮತದಾರರಲ್ಲಿ ಬೇಸರವಿದೆ. ಎಸ್ಟಿಗಳಿಗೆ ಕ್ಷೇತ್ರ ಮೀಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕ್ಷೇತ್ರವನ್ನು ಕೆಲ ರಾಜಕೀಯ ನಾಯಕರು ಆಳುತ್ತಿದ್ದಾರೆ. ಎಸ್ಟಿಗಳ ಸೌಲಭ್ಯ ಪಡೆದು ಕುಟುಂಬಕ್ಕೆ ಲಾಭ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಕ್ಷೇತ್ರದ ಮೀಸಲಾತಿ ಸೌಲಭ್ಯವನ್ನು ಎಸ್ಟಿ ಜನಾಂಗದ ಶ್ರೀಮಂತರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ದಬ್ಬಾಳಿಕೆ ತಡೆಯಲು ರೈತರು ತಮ್ಮನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ರೈತರು, ಬಡವರ ಒತ್ತಾಯದ ಮೇರೆಗೆ ತಾವು ಕಣಕ್ಕಿಳಿಯಲಿದ್ದು, ಬಿಎಸ್ಪಿ ಮತ್ತಿತರೆ ಪಕ್ಷಗಳು ತಮಗೆ ಕಣಕ್ಕಿಳಿಸಲು ಟಿಕೆಟ್ ನೀಡುವುದಾಗಿ ಹೇಳಿದ್ದವು. ಆದರೆ ತಾವು ಪಕ್ಷೇತರರಾಗಿಯೇ ಸ್ಪರ್ಧಿಸುವುದಾಗಿ ತಿಳಿಸಿದರು.
ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ಮತದಾರರಿಗೆ ಹಣ ಮತ್ತು ಹೆಂಡ ಹಂಚುತ್ತಿವೆ. ಈ ಕುರಿತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಶೀಘ್ರವೇ ಈ ಬಗ್ಗೆ ಗಮನ ಸೆಳೆಯಲಾಗುತ್ತದೆ ಎಂದು ಚಿನ್ನಯ್ಯ ನಾಯಕ ತಿಳಿಸಿದರು. ಸಮಿತಿ ಪ್ರಮುಖರಾದ ಶರಣಪ್ಪಗೌಡ ಪೊಲೀಸ್ ಪಾಟೀಲ್, ಗೋವಿಂದನಾಯಕ, ಬಸವರಾಜ ನಾಯಕ ಸಿರವಾರ, ನರಸಪ್ಪ ಹಳ್ಳಿಬೆಂಚಿ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

