ಕೃಷಿ ವಿವಿಯ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ
ಕ.ಪ್ರ. ವಾರ್ತೆ ರಾಯಚೂರು ಮಾ.23
ಚುನಾವಣೆ ನೀತಿ ಸಂಹಿತೆ ಎಂಬುದನ್ನು ತುರ್ತುಪರಿಸ್ಥಿತಿಯ ರೂಪದಲ್ಲಿ ಹೇರಲಾಗುತ್ತಿದೆ. ಕೃಷಿ ವಿವಿ ಹಂಗಾಮಿ ನೌಕರರ ಸಮಾವೇಶಕ್ಕೆ ಕುಲಪತಿ ಡಾ.ಬಿ.ವಿ. ಪಾಟೀಲ್ ಅಸ್ತ್ರವಾಗಿ ಬಳಸಿ ನೌಕರರ ಸಮಾವೇಶಕ್ಕೆ ಅಡ್ಡಿಪಡಿಸಿದ್ದು, ಈ ಹಿನ್ನೆಲೆ ಕೃಷಿ ವಿವಿ ವಿರುದ್ಧ ಕಾನೂನು ಸಮರಕ್ಕೆ ಸಿದ್ಧರಾಗಿರುವುದಾಗಿ ಕೃಷಿ ವಿವಿ ಹಂಗಾಮಿ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಮಾನಸಯ್ಯ ಹೇಳಿದರು.
ಅವರು ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸಂಘವು ಕೃಷಿ ವಿವಿ ಹಂಗಾಮಿ ನೌಕರರ ಸಮಾವೇಶ ಆಯೋಜನೆ ಕುರಿತು ಮಾ.1ರಂದು ವಿವಿ ಆಡಳಿತಕ್ಕೆ ಮಾಹಿತಿ ನೀಡಿ ಸಭಾಂಗಣ ಕಾಯ್ದಿರಿಸಿದೆ. ಮಾ.18 ರಂದು ರು. 5ಸಾವಿರ ಹಣ ಪಾವತಿಸಿದೆ. ಆದರೆ ನೀತಿ ಸಂಹಿತೆಯ ನೆಪವೊಡ್ಡಿ ಸಮಾವೇಶ ರದ್ದುಗೊಳಿಸುವಂತೆ ಮಾಡಲಾಗಿದೆ ಎಂದು ಟೀಕಿಸಿದರು.
ಹಣ ದುರ್ಬಳಕೆ: ಸಮಾವೇಶ ರದ್ದತಿಯ ಹಿಂದೆ ಕೃಷಿ ವಿವಿ ಕುಲಪತಿ ಡಾ.ಬಿ.ವಿ. ಪಾಟೀಲ್ ಕೈವಾಡವಿದೆ. ಅವರು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕೃಷಿ ವಿವಿ ವ್ಯಾಪ್ತಿಯ ಅನೇಕತ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಹಂಗಾಮಿ ನೌಕರರಿಗೆ ಪೂರ್ಣ ಕೂಲಿ ನೀಡುತ್ತಿಲ್ಲ. ಕೃಷಿ ವಿಜ್ಞಾನಿಗಳು ಕಾರ್ಮಿಕರ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ತಮ್ಮ ಬಳಿ ದಾಖಲೆಗಳಿದ್ದು, ಶೀಘ್ರದಲ್ಲಿಯೇ ಬಹಿರಂಗಗೊಳಿಸುವುದಾಗಿ ಎಚ್ಚರಿಸಿದರು.
ಹಂಗಾಮಿ ನೌಕರರ ಸಂಘ ಸ್ವಯಂಘೋಷಿತ ಸಂಘ ಎಂಬ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ತಮ್ಮದು ಸ್ವಯಂ ಘೋಷಿತ ಸಂಘವಲ್ಲ. ಕಾನೂನು ಬದ್ಧವಾಗಿ ನೋಂದಾಯಿಸಿದ್ದಾಗಿದೆ. ಲೆಕ್ಕಪತ್ರಗಳ ಪರಿಶೋಧನೆಯೂ ಪ್ರತಿ ವರ್ಷ ಮಾಡಿಸಲಾಗುತ್ತಿದೆ. ಕೃಷಿ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳವರು ಆಡಳಿತದ ಒತ್ತಡದ ಹಿನ್ನೆಲೆಯಲ್ಲಿ ಹಂಗಾಮಿ ನೌಕರರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆಂದು ತಿಳಿಸಿದರು.
ನೋಟಿಸ್ ಜಾರಿ: ವಿವಿ ಆಡಳಿತವು ಕಾರ್ಮಿಕರ ಹಕ್ಕುಗಳ ದಮನ ನೀತಿ ಅನುಸರಿಸುತ್ತಿದೆ. ಸರ್ಕಾರದ ಸೂಚನೆಯಂತೆ ರು. 236 ಪಾವತಿಸುವ ಬದಲು ಕಾರ್ಮಿಕರಿಗೆ ತಲಾ ರು. 173 ಪಾವತಿಸಲಾಗುತ್ತಿದೆ. ಇದನ್ನು ಪ್ರಶ್ನಿಸುವವರಿಗೆ ಹಾಗೂ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದವರಿಗೆ ವಿವಿ ಆಡಳಿತವು ನೋಟಿಸ್ ಜಾರಿ ಮಾಡಿ ಬೆದರಿಸಿದೆ ಎಂದು ಆರೋಪಿಸಿದರು.
ವಿವಿಧ ಸಂಘಗಳ ಮೂಲಕ ಹೇಳಿಕೆ ಕೊಡಿಸುತ್ತಿರುವ ಕೃಷಿ ವಿವಿ ಕುಲಪತಿ ಡಾ.ಬಿ.ವಿ. ಪಾಟೀಲ್ ಅವರು ಕಾರ್ಮಿಕರ ವಿರುದ್ಧ ಕಾರ್ಮಿಕರನ್ನು ಎತ್ತಿಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಸಂಘಟನೆಯು ಸಮಾವೇಶದ ಕರಪತ್ರದಲ್ಲಿ ಬಳಕೆ ಮಾಡಿದ್ದ ಲಾಂಛನದ ಬಗ್ಗೆ ವಿವಿ ಆಕ್ಷೇಪಿಸಿದ್ದು, ಅದು ರಾಜಕೀಯ ಪಕ್ಷದ ಲಾಂಛನ ಎಂದು ಕಾರಣವೊಡ್ಡಿದೆ. ಆದರೆ ರಾಜಕೀಯ ಪಕ್ಷದ ಲಾಂಛನ ಬಳಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ದೂರು ಸಲ್ಲಿಕೆ: ಸಂಘಟನೆಯಿಂದ ಸಮಾವೇಶಕ್ಕಾಗಿ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡ ಸಂದರ್ಭದಲ್ಲಿ ವಿವಿ ಆಡಳಿತ ದಿಢೀರ್ ಆಗಿ ಸಮಾವೇಶಕ್ಕೆ ಸಭಾಂಗಣ ನೀಡುವುದಿಲ್ಲ ಎಂದು ಹೇಳಿದ್ದು, ಈ ಹಿನ್ನೆಲೆಯಲ್ಲಿ ವಿವಿ ಕ್ರಮ ಪ್ರಶ್ನಿಸಿ ನ್ಯಾಯಾಲಯದಲ್ಲಿ ಹಾಗೂ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಸಂಘಟನೆಯು ವಿವಿ ಕೃಷಿ ವಿಜ್ಞಾನಿಗಳು ಎಸಗುತ್ತಿರುವ ಅಕ್ರಮದ ಕುರಿತು ಕರಪತ್ರದಲ್ಲಿ ಮಾಡಿದ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿ ವಿವಿ ಆಡಳಿತದ ಕ್ಷಮೆ ಕೇಳುವುದಿಲ್ಲ. ಅಕ್ರಮದಲ್ಲಿ ಶಾಮೀಲಾಗಿರುವ ಕೃಷಿ ವಿಜ್ಞಾನಿಗಳ ಹೆಸರಿರುವ ಪಟಿಯನ್ನು ಶೀಘ್ರದಲ್ಲಿಯೇ ಬಹಿರಂಗಗೊಳಿಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಬಸವರಾಜ್ ಯಾದವ್, ಉಪಾಧ್ಯಕ್ಷ ಭೀಮಪ್ಪ ದಾದಾಸ್, ಪ್ರಭುರಾಜ್, ಈಶಪ್ಪ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

