ಸ್ಪರ್ಧೆಗೆ ಜೆಡಿಎಸ್ ಅಭ್ಯರ್ಥಿ ನಿರಾಸಕ್ತಿ; ಪರ್ಯಾಯ ಸಜ್ಜು
-ವಿಶೇಷ ವರದಿ
ಕ.ಪ್ರ. ವಾರ್ತೆ ರಾಯಚೂರು ಮಾ.23
ಲೋಕಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅಂತಿಮ ಗಡುವು ಸಮೀಪಿಸುತ್ತಿದ್ದರೂ ರಾಯಚೂರು ಕ್ಷೇತ್ರದಲ್ಲಿ ಜೆಡಿಎಸ್ ಪ್ರಕಟಿಸಿರುವ ಅಭ್ಯರ್ಥಿ ಸ್ಪರ್ಧೆಗೆ ಆಸಕ್ತಿ ತೋರದಿರುವ ಅಂಶ ಬಹಿರಂಗಗೊಂಡಿದೆ. ಜೆಡಿಎಸ್ ಅಭ್ಯರ್ಥಿ ಎಂದು ಘೋಷಿತ ರಾಜಾ ಅಮರೇಶ್ವರ ನಾಯಕರನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲು ತಂತ್ರವನ್ನೂ ನಡೆಸಿರುವುದು ಜೆಡಿಎಸ್ಗೆ ಹೊಸ ಬಿಕ್ಕಟ್ಟು ತಂದೊಡ್ಡಿದೆ. ಪರಿಣಾಮ ಪರ್ಯಾಯ ಅಭ್ಯರ್ಥಿಗಳತ್ತ ಜೆಡಿಎಸ್ ಗಮನಹರಿಸಿದೆ.
ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಸಂಭಾವ್ಯರ ಪಟ್ಟಿಯಲ್ಲಿ ಮತ್ತು ಆನಂತರ ಘೋಷಿತರ ಪಟ್ಟಿಯಲ್ಲಿ ಇದ್ದದ್ದು ರಾಜಾ ಅಮರೇಶ್ವರ ನಾಯಕರ ಹೆಸರು ಮಾತ್ರ. ಆದರೆ ಅವರು ಚುನಾವಣೆಯ ಕಣಕ್ಕಿಳಿಯುವತ್ತ ಅಷ್ಟಾಗಿ ಆಸಕ್ತಿ ತೋರದಿರುವುದು ಪಕ್ಷದಲ್ಲಿ ಗೊಂದಲ ಮೂಡಿಸಿದೆ.
ಪ್ರಚಾರ: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದ ರಾಜಾ ಅಮರೇಶ್ವರ ನಾಯಕ ಅವರು ಟಿಕೆಟ್ ಸಿಗುವುದೆಂಬ ನಂಬಿಕೆಯಿಂದ ಪ್ರಚಾರದಲ್ಲಿ ತೊಡಗಿದ್ದರು. ಆದರೆ ಕಡೆಯ ಕ್ಷಣದಲ್ಲಿ ಬಳ್ಳಾರಿ ರೆಡ್ಡಿ ಬಣದ ಸಣ್ಣ ಫಕೀರಪ್ಪ ಅವರನ್ನು ಕಣಕ್ಕಿಳಿಸಿದ್ದರಿಂದ ನಾಯಕ ಅವರಿಗೆ ನಿರಾಸೆಯಾಗಿತ್ತು.
ಆನಂತರ ಅವರು ಜೆಡಿಎಸ್ ಸೇರಿದ್ದರು. ಲೋಕಸಭೆ ಚುನಾವಣೆಯ ಅಧಿಸೂಚನೆ ಪ್ರಕಟಗೊಂಡ ನಂತರದಲ್ಲಿ ರಾಜಾ ಅಮರೇಶ್ವರ ನಾಯಕ ಅವರೇ ಜೆಡಿಎಸ್ ಅಭ್ಯರ್ಥಿ ಎಂದು ಪಕ್ಷ ಸಹ ಹೇಳಿಕೊಂಡಿತ್ತು. ಸದ್ಯ ಅವರಿಗೇ ಟಿಕೆಟ್ ನೀಡಲಾಗಿದೆ. ಆದರೆ ಅಮರೇಶ್ವರ ನಾಯಕ ಅವರು ಸ್ಪರ್ಧೆಗೆ ಆಸಕ್ತಿ ತೋರದಿರುವುದು ಪಕ್ಷಕ್ಕೆ ಹಿನ್ನಡೆ ತಂದಿದೆ.
ಬೆಂಬಲವಿಲ್ಲ: ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಭದ್ರ ನೆಲೆ ಹೊಂದಿಲ್ಲ ಎಂಬ ಅನುಮಾನ ಅಭ್ಯರ್ಥಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಅವರ ಬೆಂಬಲಿಗರಲ್ಲಿ ಕೆಲವರು ಸ್ಪರ್ಧೆಗಿಳಿಯದಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆಂದೂ ಗೊತ್ತಾಗಿದೆ. ಅಷ್ಟೇ ಅಲ್ಲ ಕಾರ್ಯಕರ್ತರ ಬೆಂಬಲ, ಪಕ್ಷದ ಬೆಂಬಲವಿಲ್ಲದೇ ಸ್ಪರ್ಧೆಗಿಳಿಯುವುದು ಸರಿಯಲ್ಲ ಎಂಬ ಮಾತು ಅವರ ಬೆಂಬಲಿಗರಿಂದ ಕೇಳಿಬಂದಿರುವುದರಿಂದ ಅವರು ಹಿಂಜರಿಯುತ್ತಿದ್ದಾರೆಂದು ಹೇಳಲಾಗಿದೆ.
ಕಾಂಗ್ರೆಸ್ ರಣತಂತ್ರ: ಜೆಡಿಎಸ್ಗೆ ಸೂಕ್ತ ಅಭ್ಯರ್ಥಿಯಿಲ್ಲದಂತೆ ಮಾಡಲು ತಂತ್ರ ರೂಪಿಸಿರುವ ಕಾಂಗ್ರೆಸ್ ಹಿರಿಯ ನಾಯಕರು ಈಗಾಗಲೇ ಚುನಾವಣೆ ಘೋಷಣೆಯಾದ ದಿನದಿಂದಲೇ ರಾಜಾ ಅಮರೇಶ್ವರ ನಾಯಕ ಅವರೊಂದಿಗೆ ನಿರಂತರ ಸಂಪರ್ಕವಿರಿಸಿಕೊಂಡಿದ್ದು ಅವರನ್ನು ಸ್ಪರ್ಧೆ ಮಾಡದಂತೆ ಮನವೊಲಿಸುವ ತಂತ್ರ ಹೂಡಿದ್ದಾರೆಂದು ಗೊತ್ತಾಗಿದೆ.
ಈಗಾಗಲೇ ಕಾಂಗ್ರೆಸ್ ನಾಯಕ ಬೋಸರಾಜು, ವೆಂಕಟೇಶ ನಾಯಕ ಮತ್ತಿತರರು ರಾಜಾ ಅಮರೇಶ್ವರ ನಾಯಕರನ್ನು ಗೌಪ್ಯವಾಗಿ ಭೇಟಿ ಮಾಡಿದ್ದು, ಪಕ್ಷ ಸೇರ್ಪಡೆಗೆ ಚರ್ಚಿಸಿದ್ದಾರೆಂದು ಗೊತ್ತಾಗಿದೆ. ಮೂಲತಃ ಕಾಂಗ್ರೆಸ್ಸಿನವರಾದ ಅಮರೇಶ್ವರ ನಾಯಕ ಅವರು ಆನಂತರದಲ್ಲಿ ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದರು. ಹಾಗಾಗಿ ಕಾಂಗ್ರೆಸ್ನತ್ತ ಸೆಳೆಯುವ ತಂತ್ರ ರೂಪಿಸಲಾಗಿದೆ ಎಂದು ಗೊತ್ತಾಗಿದೆ.
ಪರ್ಯಾಯ ಅಭ್ಯರ್ಥಿಗಳು: ಜೆಡಿಎಸ್ಗೆ ಸಹ ರಾಜಾ ಅಮರೇಶ್ವರ ನಾಯಕ ಸ್ಪರ್ಧೆಗಿಳಿಯುವ ಬಗ್ಗೆ ನಂಬಿಕೆಯಿದ್ದಂತಿಲ್ಲ. ಹಾಗಾಗಿ ಅಗತ್ಯ ಬಿದ್ದಲ್ಲಿ ಜೆಡಿಎಸ್ನಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಿ ಇರಿಸಿಕೊಂಡಿದೆ. ಪಕ್ಷದ ಮೂಲಗಳ ಪ್ರಕಾರ ರಾಜಾ ವೆಂಕಟಪ್ಪ ನಾಯಕ ಹಾಗೂ ಶಾಂತನಗೌಡ ಅವರಿಗೆ ಕಣಕ್ಕಿಳಿಸುವ ಬಗ್ಗೆಯೂ ಚಿಂತನೆಯೂ ನಡೆದಿದೆ ಎಂದು ಹೇಳಲಾಗಿದೆ.
ಒಂದೆಡೆ ಘೋಷಿತ ಅಭ್ಯರ್ಥಿ ನಾ ಒಲ್ಲೆ ಎಂದೂ ಹೇಳದೇ ಸ್ಪರ್ಧಿಸುತ್ತೇನೆಂದೂ ಮುಂದಾಗದಿರುವುದು ಜೆಡಿಎಸ್ಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸಿದೆ. ರಾಜಾ ಅಮರೇಶ್ವರ ನಾಯಕ ಸ್ಪರ್ಧೆಗಿಳಿದರೆ ಮತ ವಿಭಜನೆಯ ಭೀತಿಯಲ್ಲಿರುವ ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅವಸರದಲ್ಲಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಲೋಕಸಭೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಅಕ್ಷರಶಃ ಅತಂತ್ರರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

