ಬಿಜೆಪಿ ಅತೃಪ್ತರಿಂದ ಗೌಪ್ಯ ಸಭೆ
ದೇವದುರ್ಗ: ಬಿಜೆಪಿ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಿ.ಎಸ್. ಪಾಟೀಲ್ ಮತ್ತು ಅವರ ಬೆಂಬಲಿಗರನ್ನು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೇರಿದಂತೆ ರಾಜ್ಯ ಘಟಕ ಕಡೆಗಣಿಸಿದ್ದರಿಂದ ಇತ್ತೀಚೆಗೆ ಗೌಪ್ಯ ಸಭೆ ನಡೆಸಿರುವುದು ಬೆಳಕಿಗೆ ಬಂದಿದೆ.
ಪಟ್ಟಣ ಸಮೀಪದ ಗಡ್ಡಿಗೂಳಿ ದೇವಸ್ಥಾನದಲ್ಲಿ ಸೋಮವಾರ ಈ ಗೌಪ್ಯಸಭೆ ನಡೆದಿದ್ದು, ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಸಿ.ಎಸ್. ಪಾಟೀಲ್ ಅವರ ಬೆಂಬಲಿಗರು ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ. ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಚುನಾವಣೆ ಪ್ರಚಾರಕ್ಕೆ ಆಹ್ವಾನಿಸುತ್ತಿಲ್ಲ ಎಂಬ ದೂರು ಕೇಳಿಬಂದಿವೆ.
ಪಕ್ಷದಲ್ಲಿ ಮುಂದುವರಿಯುವುದು ಸರಿಯಲ್ಲ: ಸಭೆಯಲ್ಲಿ ಉಪಸ್ಥಿತರಿದ್ದ ಸಿ.ಎಸ್. ಪಾಟೀಲರಿಗೆ ಬೆಂಬಲಿಗರು ಇಂಥ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಒತ್ತಡ ಹೇರಿದರೆಂದು ಗೊತ್ತಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕರ ಗೆಲವಿಗೆ ಸಿ.ಎಸ್. ಪಾಟೀಲ್ ಮತ್ತು ಬೆಂಬಲಿಗರು ಹಗಲಿರುಳು ಶ್ರಮಿಸಿದ್ದನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಬಿಜೆಪಿ ರಾಜ್ಯ ಘಟಕವೂ ಅಸಡ್ಡೆ ತೋರಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ಬೆಂಬಲಿಗರಿಂದ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಮತದಾರರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಎ.ವೆಂಕಟೇಶ ನಾಯಕರನ್ನು ಆಯ್ಕೆ ಮಾಡಿದಾಗಿನಿಂದ ಹಾಲಿ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಅವರು ಸಿ.ಎಸ್. ಪಾಟೀಲರತ್ತ ಹೊರಳಿಯೂ ನೋಡುತ್ತಿಲ್ಲ. ಪಕ್ಷದ ಯಾವುದೇ ಸಭೆ ಸಮಾರಂಭಗಳಿಗೆ ಆಹ್ವಾನಿಸುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿಬಂದಿದೆ.
ಸಭೆಯಲ್ಲಿದ್ದವರು..: ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಶಿವರಾಜ ಪಾಟೀಲ್ ಇಟಗಿ, ಬಸವರಾಜ ದೊಡ್ಡಳ್ಳಿ, ನಾಗರಾಜ ಪಾಟೀಲ್ ವೆಂಕಟಾಪುರ, ಶರಣಗೌಡ, ದೇವೇಂದ್ರಪ್ಪ ಗೌಡ, ಖಂಡೇರಾಯ, ಗ್ರಾಪಂ ಉಪಾಧ್ಯಕ್ಷ ಶಿದ್ಲಿಂಗರಡ್ಡಿ, ಮಹ್ಮದ್ ಯುನೂಸ್ ಶಹಾಪೂರಿ, ಚನ್ನಬಸವ ಪಲ್ಕನಮರಡಿ, ಬಸನಗೌಡ ಹಿರೇಬೂದೂರು, ಗೋವಿಂದರಡ್ಡಿ, ಶಾಂತಪ್ಪ ಉಪ್ಪಾರ ಸೇರಿದಂತೆ ಜಾಲಹಳ್ಳಿ, ಅರಕೇರಾ, ಗಬ್ಬೂರು ಭಾಗದ ಮುಖಂಡರು ಪಾಲ್ಗೊಂಡಿದ್ದರೆಂದು ಗೊತ್ತಾಗಿದೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಬಿಜೆಪಿ ತೊರೆದು ಸಿ.ಎಸ್.ಪಾಟೀಲ್ ಅವರು ಕಾಂಗ್ರೆಸ್ ಸೇರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಬಿಜೆಪಿಯಲ್ಲಿಯೇ ಇದ್ದರೂ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳದಂತೆಯೂ ಮನವಿ ಮಾಡಿದರೆಂದು ಗೊತ್ತಾಗಿದೆ.
ಬಿಜೆಪಿಯಲ್ಲಿ ತಮ್ಮನ್ನು ಹಾಗೂ ಬೆಂಬಲಿಗರನ್ನು ಕಡೆಗಣಿಸಿರುವುದು ನಿಜ. ಲೋಕಸಭೆ ಚುನಾವಣೆಗೂ ಪೂರ್ವದಿಂದಲೇ ಪಾರ್ಟಿ ನಿರ್ಲಕ್ಷ್ಯದ ಧೋರಣೆ ಪ್ರದರ್ಶಿಸಿದೆ. ಬೆಂಬಲಿಗರಿಂದ ತಮ್ಮ ಮೇಲೆ ಈ ಬಗ್ಗೆ ಒತ್ತಡವಿರುವುದು ವಾಸ್ತವ. ಆದರೆ ಮುಂದಿನ ವಾರದಲ್ಲಿ ಬಿಜೆಪಿಯಲ್ಲಿ ಮುಂದುವರಿಯಬೇಕೇ ಬೇಡವೇ ಎಂಬ ಅಂತಿಮ ನಿರ್ಧಾರ ಕೈಗೊಳ್ಳಲಾವುದು.
ಸಿ.ಎಸ್. ಪಾಟೀಲ್, ಬಿಜೆಪಿ ತಾಲೂಕು
ಮಾಜಿ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

