ರಾಯಚೂರು

ರೈತರ ಸಮಸ್ಯೆಗೆ ಸ್ಪಂದಿಸುವರ್ಯಾರು?

Published On :

ವಿಶೇಷ ವರದಿ
ಕ.ಪ್ರ. ವಾರ್ತೆ   ಗುಲ್ಬರ್ಗ   ಮಾ.30
 ನೋಟ- 1
ಇದ್ದ ಹೊಲಗದ್ದೆಯಲ್ಲೇ ಕಷ್ಟಪಟ್ಟು ಉಳುಮೆ ಮಾಡುತ್ತಾನೆ ರೈತ. ಬಂಪರ್ ಬೆಳೆಯೂ ಬರುತ್ತದೆ, ರಾಶಿಯೊಂದಿಗೆ ಮಾರುಕಟ್ಟೆಗೆ ಹೋದ್ರೆ ಬಂಪರ್ ಬೆಲೆ ಸಿಗೋದಿಲ್ಲ. ಬಂಪರ್ ಕ್ರಾಪ್ ಬಂದ್ರೂ ರೈತ ಪಾಪರ್. ಮಾರುಕಟ್ಟೆಯಲ್ಲಿನ ಈ ಅಪಸವ್ಯಕ್ಕೆ ಯಾರು ಹೊಣೆ ರೈತರಿಗೆ ಅನುಕೂಲವಾಗುವಂತಹ ನೀತಿಗಳೆಲ್ಲಿ ಅಮಾಯಕ ರೈತ ಮತ್ತೆ ಎತ್ತುಗಳೊಂದಿಗೆ ಹೊಲಕ್ಕೇ ಹಿಂದಿರುಗುತ್ತಾನೆ. ಎಲ್ಲಾ ಕರ್ಮ, ಹಣೆ ಬರಹ... ಎಂದು ಹೊಲ ಊಳಲು ಶುರು ಮಾಡುತ್ತಾನೆ.
 ನೋಟ- 2
ಕಾಲಕಾಲಕ್ಕೆ ಆಯೋಗಗಳನ್ನು ರಚಿಸಿ, ನೌಕರರ ವೇತನ ಪರಿಷ್ಕರಿಸುವ ಸರ್ಕಾರಗಳು, ಡಾ. ಸ್ವಾಮಿನಾಥನ್ ವರದಿ ಹೇಳಿದಂತೆ, ಬೆಲೆ ಆಯೋಗ ರಚಿಸುವಂತೆ ಹೇಳಿದ್ದರೂ ಕ್ಯಾರೆ ಎನ್ನದೆ ಮೌನವಾಗಿದೆ. 2006ರಿಂದ ಕೇಂದ್ರ ಸರ್ಕಾರದ ಕಡತಗಳಲ್ಲಿ ಧೂಳು ತಿನ್ನುತ್ತಿರುವ ಕೃಷಿ ಬೆಲೆ ಆಯೋಗದ ಶಿಫಾರಸು ರೂಪ ಪಡೆಯುವುದು. ಯಾವಾಗ ನೇಗಿಲಯೋಗಿಗೂ ಅರಿವಿಗಿಲ್ಲ ಈ ಸಂಗತಿ. ಮತ ಹಾಕುತ್ತಾನೆ, ಹೊಲದತ್ತ ಹೆಜ್ಜೆ ಹಾಕುತ್ತಾನಷ್ಟೆ.
 ನೋಟ- 3
ತಿಂಗಳು, 3 ತಿಂಗಳು, 6 ತಿಂಗಳ, 9 ತಿಂಗಳು... ಹೀಗೆ ವಿವಿಧ ಅವಧಿಯ ಬೆಳೆಗಳಲ್ಲಿ ವ್ಯತ್ಯಾಸ ಕಾಣದೆ ಕೇಂದ್ರ ಉದ್ದು, ಹೆಸರು, ತೊಗರಿ, ಜೋಳ ಎಲ್ಲದಕ್ಕೂ ಕಮ್ಮಿ ದೇವರ ಲೆಕ್ಕದಲ್ಲೇ ಬೆಂಬಲ ಬೆಲೆ ಘೋಷಿಸುತ್ತದೆ. ಇದನ್ನರಿತರೂ ರೈತನಿಗೆ ಏನೂ ಮಾಡಲಾಗದ ಅಸಹಾಯಕತೆ. ಅಯ್ಯೋ ಹಣೆ ಬರಹವೇ... ಎಂದು ರೈತ ಬೆಳೆದ ದವಸ- ಧಾನ್ಯಕ್ಕೆ ಸಿಕ್ಕಷ್ಟು ಶಿವಾಯ ನಮಃ ಎಂದು ಮಾರುಕಟ್ಟೆಯಲ್ಲಿ ಮಾರಿ ಹಿಡಿಯುತ್ತಾನೆ ಮನೆ ದಾರಿ. ಚೂರು ಹೆಚ್ಚು ಕಮ್ಮಿಯಾದರೂ, ಸಾಕು ರೈತ ಸಾವಿನ ಮನೆಯ ದಾರಿಯನ್ನೇ ತುಳಿಯುವ ಅನಿವಾರ್ಯತೆ ಎದುರಿಸುತ್ತಾನೆ.
ನಾಡಿನ ರೈತರು ಎದುರಿಸುತ್ತಿರುವ ನೂರಾರು ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ನೀತಿ ನಿರೂಪಕರು ರೈತರ ಪರ ನೀತಿಗಳನ್ನು ನಿರೂಪಿಸೋದು ಯಾವಾಗ?  ರೈತ ಬೆಳೆದ ಬೆಳೆ ಉತ್ತಮ ಬೆಲೆಗೆ ಮಾರಿ, ಹೆಂಡರು- ಮಕ್ಕಳೊಂದಿಗೆ ಸುಖಿ ಸಂಸಾರ ಮಾಡೋದು ಬೇಡವೆ? ಹಸನಾದ ಬದುಕು ರೈತನದ್ದು ಆಗೋದು ಎಂದು?
ಇವೆಲ್ಲ ಪ್ರಶ್ನೆಗಳಿಗೆ ಉತ್ತರ ರೂಪದಲ್ಲೀಗ ರೈತರ ಮುಂದೆ ಲೋಕ ಸಮರ ಎದುರಾಗಿದೆ. ಕೇಂದ್ರದಲ್ಲಿ ಕೃಷಿಕರ ಪರ ಉತ್ತಮ ನೀತಿ ನಿರೂಪಕರಾಗಿರುವವರಿಗೆ ರೈತರು ಮತ ನೀಡಿ ಗೆಲ್ಲಿಸಿದರೆ ಸಾಕು, ತಮ್ಮ ಮುಂದಿನ ಸಂಕಷ್ಟಗಳಿಗೆ ತಾವೇ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಇಲ್ಲಿನ ತೊಗರಿ ಬೆಳೆಗಾರರ ಸಂಘಟನೆ ಇದೀಗ ರೈತರಿಗಾಗಿಯೇ ಮತದಾನ ಜಾಗೃತಿಗೆ ಮುಂದಾಗಿದೆ.
ಜಾಗೃತಿ: ಆಶಾಭಾವನೆಯೊಂದಿಗೆ ತೊಗರಿ ಬೆಳೆಗಾರರ ಸಂಘಟನೆ ರೈತರ ಜಾಗೃತಿಗೆ ಮುಂದಾಗಿದೆ. ಕರಪತ್ರ ಮುದ್ರಿಸಿ, ಮಾಧ್ಯಮ ಹೇಳಿಕೆ ನೀಡುತ್ತ ರೈತ ಜಾಗೃತಿಗೆ ಮುಂದಾಗಿರುವ ಸಂಘಟನೆಯವರು ಗ್ರಾಮಗಳಿಗೆ ಮತ ಕೇಳಲು ಬರುವ, ಭಾಷಣಕ್ಕೆ ಮುಂದಾಗುವ ಲೋಕಸಮರ ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುವಂತೆಯೂ ರೈತರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ನದಿ ಜೋಡಣೆಯಂತಹ ಗಂಭೀರ ವಿಷಯದಿಂದ ಹಿಡಿದು ಊರ ಮುಂದಿನ ಹೊಲಗದ್ದೆಗೆ ಹೋಗುವ ರಸ್ತೆ ದುರವಸ್ಥೆವರೆಗೂ ತರಹೇವಾರಿ ವಿಷಯಗಳ ವ್ಯಾಪ್ತಿಯೊಂದಿಗೆ ಅಭ್ಯರ್ಥಿಗಳೊಂದಿಗೆ ಸಂವಾದಿಯಾಗುವಂತೆ ರೈತರನ್ನು ತಯಾರು ಮಾಡುತ್ತಿದ್ದಾರೆ.
ಮೇಟಿ ವಿದ್ಯೆ ಮೇಲೆಂದ ದೇಶದಲ್ಲಿ ಹೀಗೇಕೆ?:  ದೇಶದ ಮತದಾರರ ಪೈಕಿ ಶೇ. 70ರಷ್ಟು ರೈತರೇ ಇದ್ದರೂ, ಅವರ ಬವಣೆಗಳಿಗೆ ಪರಿಹಾರ ಗಗನ ಕುಸುಮ. ಕಬ್ಬು ರೈತರಿಗೆ ಬೆಂಬಲ ಬೆಲೆ ಇಲ್ಲ, ನದಿಗಳ ಜೋಡಣೆ ಮಾತನ್ನಾಡುತ್ತಾರೆ. ಮರೆತು ಬಿಡುತ್ತಾರೆ. ಕೃಷಿ ಬೆಲೆ ಆಯೋಗ ರಚನೆಯೇ ಆಗೋದಿಲ್ಲ.... ರೈತರ ಸಮಸ್ಯೆಗಳೆಂದರೆ ಆಳುವವರಿಗೆ ತಾತ್ಸಾರ. ಅದಕ್ಕೇ ರೈತರನ್ನು ಬಡಿದೆಬ್ಬಿಸುವುದು ಈಗಿನ ಅಗತ್ಯ ಎನ್ನುತ್ತಾರೆ ತೊಗರಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಇಂಗಿನ್.
ರಾಜ್ಯಾದ್ಯಂತ ರೈತರ ಜಾಗೃತಿಗೆ ಮುಂದಾಗಿದ್ದೇವೆ. ಹಳ್ಳಿಗಳಿಗೆ ಭೇಟಿ ನೀಡುವ ರಾಜಕಾರಣಿಗಳಿಗೆ ಪ್ರಶ್ನಿಸಲೇಬೇಕು ಎಂದು ರೈತರನ್ನು ಹುರಿದುಂಬಿಸುತ್ತಿದ್ದೇವೆ. ರೈತರು ತಮ್ಮ ಸಂಕಷ್ಟಗಳನ್ನು ನಾಯಕರ ಮುಂದೆ ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲಿ, ಭರವಸೆ ಕೇಳದೆ ಅವುಗಳನ್ನೆಲ್ಲ ಲಿಖಿತವಾಗಿ ಬರೆದಿಟ್ಟುಕೊಳ್ಳಲಿ. ಅದಕ್ಕಾಗಿ ರೈತರಿಗ ಸೂಕ್ತ ತಯಾರಿ ಮಾಡಲಾಗುತ್ತಿದೆ ಎಂದು ಇಂಗಿನ್ ಹೇಳಿದ್ದಾರೆ.



ರೈತರ ಸಮಸ್ಯೆಗಳಿಗೆ ಪರಿಹಾರವಿಲ್ಲವೇ?
1) 2006ರಲ್ಲೇ ಡಾ. ಸ್ವಾಮಿನಾಥನ್ ರೈತರ ಬೆಳೆಗೆ ಉತ್ತಮ ಬೆಲೆ ದೊರಕಬೇಕೆಂದು ಕೃಷಿ ಬೆಲೆ ಆಯೋಗ ರಚನೆಗೆ ಮಾಡಿದ್ದ ಶಿಫಾರಸು ಕೊಳೆಯುತ್ತಿದೆ. ಇದಕ್ಕೆ ಮುಕ್ತಿ ಸಿಗುವುದು ಬೇಡವೆ? ಕೃಷಿ ಬೆಲೆ ಆಯೋಗ ರಚನೆಯಾಗಲೇಬೇಕಲ್ಲವೆ?
2) ಕೃಷಿ ಉತ್ಪನ್ನ ವೆಚ್ಚದೊಂದಿಗೆ ಶೇ. 50ರಷ್ಟು ಮೊತ್ತ ಸೇರಿಸಿ ಬೆಂಬಲ ಬೆಲೆ ಘೋಷಣೆಯಾಕಾಗುತ್ತಿಲ್ಲ
3) ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಕಮ್ಮಿ ಬೆಲೆಗೆ ದವಸ ಮಾರಾಟವಾದಾಗಲೂ ಸರ್ಕಾರಗಳು ಮೌನ ತಾಳುವುದು ಯಾಕೆ?
4) 2013- 14ರಲ್ಲಿ ರಾಜ್ಯದಲ್ಲಿ ಟನ್ ಕಬ್ಬಿಗೆ ರು. 2,500 ಬೆಲೆ ಘೋಷಿಸಿತು. ಆದರೆ ಯಾವ ಕಾರ್ಖಾನೆಗಳವರೂ ಅದರಂತೆ ನಡೆಯಲೇ ಇಲ್ಲ. ರೈತರಿಗೆ ಬೆಲೆ ದೊರಕಲೇ ಇಲ್ಲ. ಕಬ್ಬು ರೈತರು ಬೀದಿಪಾಲಾದರೂ ಕೇಳುವವರಿಲ್ಲದಂತಹ ದುರವಸ್ಥೆ ನಿರ್ಮಾಣವಾಗಿದ್ದು ಸಮಸ್ಯೆಯಲ್ಲವೆ?
5) ರೈತರಿಗೆ ಅಗತ್ಯವಿರುವ ಶೈತ್ಯಾಗಾರಗಳ ನಿರ್ಮಾಣಕ್ಕೆ ಯಾಕೆ ಆಸಕ್ತಿ ತೋರುತ್ತಿಲ್ಲ?
6) ರೈತರಿಗೆ ಕಡ್ಡಾಯ ವಾರ್ಷಿಕ ರು. 5 ಲಕ್ಷವನ್ನು ಬಡ್ಡಿರಹಿತ ಸಾಲ ನೀಡಲು ಬ್ಯಾಂಕುಗಳಿಗೆ ಸೂಚನೆ ನೀಡಿದರೆ ರೈತರಿಗೆ ಅನುಕೂಲವಾಗದೆ?
7) ಕೃಷಿ ವಿಮೆ ಪರಿಹಾರ ಅಳತೆಗೋಲು ಪ್ರತಿ ಜಮೀನಿಗೆ ಇಳಿಯಬೇಕು. ವಿಮೆ ಕಂತು ಕಮ್ಮಿಯಾಗಬೇಕು. ಶೇ.10ರೈತರಿಂದ ಉಳಿದದ್ದು ರಾಜ್ಯ, ಕೇಂದ್ರ ಭರಿಸುವಂತಾಗಲಿ
8) ಭೂ ಆರೋಗ್ಯ ಸಂರಕ್ಷಣೆಗೆ ಉಪಾಯ ಮಾಡಬೇಕಲ್ಲವೆ?
9) ರೈತರ ವಿದ್ಯುತ್ ಕೊರತೆ ನೀಗಿಸಲು ನವೀಕರಿಸಬಹುದಾದ ಇಂಧನ ಬಳಕೆಗೆ ಪ್ರೋತ್ಸಾಹಿಸುವುದು ಭವಿಷ್ಯದ ದೃಷ್ಟಿಯಿಂದ ಉತ್ತಮವಲ್ಲವೆ?
10) ರಾಷ್ಟ್ರದಲ್ಲಿನ ನದಿ ಜೋಡಣೆ ಕಾರ್ಯ ಮಹತ್ವದ್ದಾಗಿತ್ತು. ಅದು ನೆನೆಗುದಿಗೆ ಬೀಳಲು ಹೊಣೆ ಯಾರು?
11) ರೈತರ ಅನುಕೂಲಕ್ಕೆ ತಕ್ಕಂತೆ ಸರ್ಕಾರಗಲು ದೀರ್ಘಕಾಲದ ಆಯಾತ- ನಿರ್ಯಾತ ನೀತಿಗಳನ್ನು ಅಳವಡಿಸಿಕೊಂಡಾಗ ಮಾರುಕಟ್ಟೆ ಅನಿಶ್ಚಿತತೆಗೆ ಮಂಗಳ ಸಾಧ್ಯ.
12) ವಿದ್ಯುತ್ ಕೊರತೆ ನೀಗಿಸಲು ಶೇ.10ರ ಸಹಾಯ ಧನದಲ್ಲಿ ಸೋಲಾರ್ ವ್ಯವಸ್ಥೆ ದೊರಕಿಸಬೇಕು. ಶೇ.40ರ ಸಹಾಯಧನದಲ್ಲಿ ಎಥಾನಾಲ್ ಒದಗಿಸಬೇಕು.
13) ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ದೃಢೀಕರಣ ಯೋಜನೆ ಸರಿಯಾಗಿ ಜಾರಿಗೆ ತರಬೇಕು
14) ಕೃಷಿ ಕಾರ್ಮಿಕರು ಜಮೀನು ಮಾಲಿಕರಿಂದ ಬಾಡಿಗೆಗೆ ಜಮೀನು ಪಡೆದು ಕೃಷಿ ಮಾಡುತ್ತಿರುವುದು ಹೆಚ್ಚು. ಇವರಿಗೂ ಸರ್ಕಾರ ಸಾಲ ಸೌಲಭ್ಯ ಹಾಗೂ ಸಹಾಯಧನ  ದೊರಕಬೇಕು.
15)  ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ರೈತ ಸಂಘಟನೆ, ಕಾರ್ಯ ನಿರ್ವಹಣೆಯ ಕಾನೂನು ಬರಬೇಕು. ನೀರಿನ ಸಮಸ್ಯೆ ನಿವಾರಣೆಗೆ ನದಿಗಳ ಜೋಡಣೆಗೆ ಆದ್ಯತೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.