ರಾಯಚೂರು

ಅರಣ್ಯ ಇಲಾಖೆ ಪ್ಲಾಂಟೇಷನ್‌ಗೆ ರೈತರ ತಡೆ

Published On :

ಕನ್ನಡಪ್ರಭ ವಾರ್ತೆ  ಲಿಂಗಸ್ಗೂರು  ಮೇ 7
ತಾಲೂಕಿನ ಗುಂತಗೋಳ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಸ್ವಚ್ಛಗೊಳಿಸಿ ಪ್ಲಾಂಟೇಷನ್‌ಗಾಗಿ ಗುಂಡಿ ಅಗೆಯಲು ಮುಂದಾಗುತ್ತಿದ್ದಂತೆ ಸಾಗುವಳಿ ಮಾಡುತ್ತಿದ್ದ ರೈತರು ಕಾರ್ಯಕ್ಕೆ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಜರುಗಿತು.
ವಲಯ ಅರಣ್ಯ ಇಲಾಖೆಯ ಸ.ನಂ. 43ರ 25 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಕಳೆದ ಆರೇಳು ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಏಕಾಏಕಿ ಅರಣ್ಯ ಇಲಾಖೆ ಕೆಎಫ್‌ಡಿಎಫ್ ಯೋಜನೆಯಡಿ ಪ್ಲಾಂಟೇಷನ್ ಮಾಡಲು ಸ್ವಚ್ಛಗೊಳಿಸಿ ಗುಂಡಿ ತೆಗೆಯಲು ಮುಂದಾದ ಪ್ರಯುಕ್ತ ಆಕ್ರೋಶಗೊಂಡ ರೈತರು, ಕಳೆದ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಏಕಾಏಕಿ ಗುಂಡಿ ಅಗೆದು ಸಸಿ ನೆಡಲು ಮುಂದಾದರೆ ನಮಗೆ ಉಳುಮೆಗೆ ಜಮೀನು ಇಲ್ಲದೆ ತೀವ್ರ ತೊಂದರೆಯಾಗಲಿದೆ ಎಂದು ಕಾರ್ಯಕ್ಕೆ ಅಡ್ಡಿಪಡಿಸಲು ಮುಂದಾದರು.
ರೈತರಿಗೆ ಸಂಘ ಬೆಂಬಲ: ಸುದ್ದಿ ತಿಳಿದ ತಕ್ಷಣ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಸ್ಥಳಕ್ಕೆ ಆಗಮಿಸಿ, ಈ ಭಾಗದ ಬಡ ರೈತರು ಕಳೆದ ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬರುತ್ತಿದ್ದಾರೆ. ಈಗ ಏಕಾಏಕಿ ಸ್ವಚ್ಛಗೊಳಿಸಿ ಸಸಿ ನೆಡಲು ಮುಂದಾದರೆ ರೈತರಿಗೆ ತೊಂದರೆಯಾಗಲಿದೆ. ಅದೇ ರೀತಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿರುವ ರೈತರಿಗೆ ಪಟ್ಟಾ ಒದಗಿಸುವಂತೆ ರೈತ ಸಂಘದಿಂದ ಒತ್ತಾಯಿಸುತ್ತಾ ಬರಲಾಗಿದೆ.
ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ರೈತರ ಸಭೆ ಕರೆದು ತೀರ್ಮಾನಕ್ಕೆ ಬರುವವರೆಗೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗದಂತೆ ವಲಯ ಅರಣ್ಯ ಅಧಿಕಾರಿ ಎಸ್.ಎನ್. ಪ್ರಭಾಕರ್ ಅವರಿಗೆ ಮನವಿ ಮಾಡಿದರು. ಅಲ್ಲದೆ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಅಧಿಕಾರಿಗಳ ಜೊತೆ ಮಾತನಾಡಿಸಿದರು.
ಮಾನವೀಯತೆ ದೃಷ್ಟಿಯಿಂದ ಬಿಡಲಾಗಿತ್ತು: ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ತಾಲೂಕಿನ ಸುಮಾರು 12,334 ಹೆಕ್ಟೇರ್ ಅರಣ್ಯ ಇಲಾಖೆ ಪ್ರದೇಶದಲ್ಲಿ ಕೆಎಫ್‌ಡಿಎಫ್ ಯೋಜನೆಯಡಿ 150 ಹೆಕ್ಟೇರ್ ಪ್ರದೇಶದಲ್ಲಿ ಪ್ಲಾಂಟೇಷನ್ ಮಾಡಲು ನಿರ್ಧರಿಸಿದ್ದು, ಗುಂತಗೋಳ ಗ್ರಾಪಂ ವ್ಯಾಪ್ತಿಯ ಸ.ನಂ. 43ರ 25 ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರೈತರು ಕಳೆದ ಆರೇಳು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದರೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಲು ಬರುವುದಿಲ್ಲ.
1978ರೊಳಗೆ ಸಾಗುವಳಿ ಮಾಡುವ ರೈತರಿಗೆ ಮಾತ್ರ ಪಟ್ಟಾ ನೀಡಲು ಅವಕಾಶವಿದ್ದು, ಆದರೆ ಈ ರೈತರ ಬಳಿ ಯಾವುದೇ ದಾಖಲೆಗಳಿಲ್ಲ. ಅರಣ್ಯ ಇಲಾಖೆ ಮಾಡಿದ ಟ್ರೆಂಚ್ ದಾಟಿ ಬಂದು ಬೆಳೆ ಬೆಳೆದಿದ್ದಾರೆ. ಇಲಾಖೆಯಿಂದ ಸ್ವಚ್ಛತಾ ಕಾರ್ಯ ಕೈಗೊಂಡರೆ ರೈತರ ಬೆಳೆ ನಷ್ಟವಾಗಲಿದೆ ಎಂದು ಮಾನವೀಯತೆ ದೃಷ್ಟಿಯಿಂದ ಸ್ವಚ್ಛಗೊಳಿಸಲು ಮುಂದಾಗಿರಲಿಲ್ಲ. ಇಲಾಖೆಯ ಪ್ಲಾಂಟೇಷನ್ ಕಾರ್ಯಕ್ಕೆ ಅಡ್ಡಿಪಡಿಸದೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸೋಮವಾರದವರೆಗೆ ಕಾಲಾವಕಾಶ: ಇದಕ್ಕೆ ರೈತ ಸಂಘದ ಮುಖಂಡರು ಸೋಮವಾರದವರೆಗೆ ಇಲಾಖೆಯಿಂದ ಯಾವುದೇ ಕಾರ್ಯ ಕೈಗೊಳ್ಳದೆ ಅವಕಾಶ ನೀಡಬೇಕು. ಅಷ್ಟರಲ್ಲಿ ಸಹಾಯಕ ಆಯುಕ್ತರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಂಡ ಪ್ರಕಾರ ಮುಂದುವರಿಯುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ವಲಯ ಅರಣ್ಯ ಅಧಿಕಾರಿಗಳು ಸೋಮವಾರದವರೆಗೆ ಸಮಯಾವಕಾಶ ನೀಡಲಾಗುವುದು. ಮಂಗಳವಾರದಿಂದ ಪುನಃ ಕಾರ್ಯಾರಂಭಸಿಸಲಾಗುವುದೆಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.