ರಾಯಚೂರು

ತಾಪಂ ಕಟ್ಟಡ ಶಿಥಿಲ; ಸಿಬ್ಬಂದಿಗೆ ಆತಂಕ

Published On :

ಕನ್ನಡಪ್ರಭ ವಾರ್ತೆ   ಲಿಂಗಸ್ಗೂರು  ಮೇ 9
ಸ್ಥಳೀಯ ತಾಲೂಕು ಪಂಚಾಯ್ತಿ ಕಚೇರಿ ಶಿಥಿಲಾವಸ್ಥೆಗೆ ತಲುಪಿದ್ದು, ಕಚೇರಿ ಬಹುತೇಕ ಕೊಠಡಿಗಳ ಛಾವಣಿಯ ಒಳಮೈ ಸಿಮೆಂಟ್ ಪದರ ಉದುರಿ ಅಭದ್ರತೆಯಿಂದ ಕೂಡಿದೆ. ಇನ್ನು ತೋಟಗಾರಿಕೆ ಇಲಾಖೆ ಕಚೇರಿ ಮಳೆಯಿಂದ ತೋರುತ್ತಿದೆ. ಇದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆತಂಕದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ.
ಇಂದಿನ ತಾಲೂಕು ಪಂಚಾಯ್ತಿ ಕಾರ್ಯಾಲಯ ಅಂದು ತಾಲೂಕು ಅಭಿವೃದ್ಧಿ ಮಂಡಳ ಎಂದು ಸ್ಥಾಪಿಸಲಾಗಿತ್ತು. ಅಂದಿನ ಮೈಸೂರು ಸರ್ಕಾರದ ಅವಧಿಯಲ್ಲಿ 1965 ಆಗಸ್ಟ್ 6ರಂದು ಲಿಂಗಸ್ಗೂರಲ್ಲಿ ತಾಲೂಕು ಅಭಿವೃದ್ಧಿ ಮಂಡಳ ಕಟ್ಟಡದ ಅಸ್ತಿಭಾರ ಶಿಲಾನ್ಯಾಸವನ್ನು ಮೈಸೂರು ಸರ್ಕಾರದ ಅಭಿವೃದ್ಧಿ ಪಂಚಾಯಚ್ ರಾಜ್ಯ ಮತ್ತು ಪೌರಾಡಳಿತ ಮಂತ್ರಿ ಆರ್.ಎಂ. ಪಾಟೀಲರು ನೆರವೇರಿಸಿದ್ದರು. ತಾಲೂಕು ಅಭಿವೃದ್ಧಿ ಮಂಡಳ ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ 1968 ಜುಲೈ 27ರಂದು ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಉದ್ಘಾಟನೆ ನೆರವೇರಿಸಿದ್ದರು.
ಇಣುಕಿದ ಕಂಬಿಗಳು: ಕಟ್ಟಡ ನಿರ್ಮಾಣಗೊಂಡು ಇಂದಿಗೆ ಸುಮಾರು 46 ವರ್ಷಗಳು ಕಳೆದಿದ್ದು, ಕಚೇರಿ ಶಿಥಿಲಾವಸ್ಥೆಗೆ ತಲುಪುತ್ತಿದೆ. ಬಹುತೇಕ ಕೊಠಡಿಗಳ ಛಾವಣಿಯ ಒಳಮೈ ಸಿಮೆಂಟ್ ಪದರ ಉದುರಿ ಕಬ್ಬಿಣದ ಕಂಬಿಗಳು ತೇಲಿವೆ. ತಾಪಂ ಸಭಾಂಗಣದ ಒಳ ಛಾವಣಿಗೆ ಥರ್ಮಾಕೋಲ್ ವ್ಯವಸ್ಥೆ ಅಳವಡಿಸಲಾಗಿದ್ದು, ಸಭಾಂಗಣದ ಛಾವಣಿಯ ಒಳಮೈ ಪದರು ಎಷ್ಟರ ಮಟ್ಟಿಗೆ ಶಿಥಿಲಗೊಂಡಿದೆ ಎಂಬುದು ತಿಳಿಯದಾಗಿದೆ. ಸಭಾಂಗಣದಲ್ಲಿ ಸಾಮಾನ್ಯ ಸಭೆ, ಕೆಡಿಪಿ ಸಭೆ ನಡೆಸಲಾಗುತ್ತದೆ. ಆ ವೇಳೆ ಅಕಸ್ಮಾತ್ ಒಳಮೈ ಪದರು ಉದುರಿ ಬಿದ್ದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೊಂದರೆ ಅನುಭವಿಸುವ ಸಾಧ್ಯತೆಗಳೇ ಹೆಚ್ಚು. ಮಳೆ ಬಂದರೆ ಗೋಡೆಗಳು ನೀರು ಹಿಡಿದು, ನೀರು ಸೋರಿಕೆಗೊಂಡು ಕುಸಿಯುವ ಭೀತಿ ಎದುರಾಗಿದೆ.
ಸೋರುವ ಭೀತಿ: ಇನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಾರ್ಯಾಲಯ ನಿರ್ಮಾಣಗೊಂಡು ಸುಮಾರು 35 ವರ್ಷಗಳು ಗತಿಸಿದ್ದು, ಇರುವ ಮೂರು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪುತ್ತಿದೆ. ಬಹುತೇಕ ಕೊಠಡಿಗಳು ಮಳೆ ಬಂದರೆ ಸೋರುತ್ತಿವೆ. ಅಧಿಕಾರಿ ಮತ್ತು ಸಿಬ್ಬಂದಿಗಳ ಟೇಬಲ್ ಹಾಗೂ ಮಹತ್ವದ ದಾಖಲೆಗಳ ನೀರು ಸೋರುವ ಭೀತಿ ಎದುರಾಗಿದೆ. ಇದರಿಂದ ಇಲಾಖೆ ವಿವಿಧ ಯೋಜನೆಗಳ ಬಗ್ಗೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಮೇಲಾಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಅನಾಹುತ ಸಂಭವಿಸುವ ಮುನ್ನ ದುರಸ್ತಿ ಕಾರ್ಯದ ಬಗ್ಗೆ ಗಮನ ಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.


-ಅಮರೇಶಸ್ವಾಮಿ ಬಲ್ಲಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.