ಬೆಲೆ ಬರೆಗೆ ಬತ್ತದ ಬೆಳೆಗಾರ ಕಂಗಾಲು
ಕನ್ನಡಪ್ರಭ ವಾರ್ತೆ ರಾಯಚೂರು ಮೇ 11
ಕೃಷಿ ಉತ್ಪನ್ನಗಳಿಗೆ ದೊರೆಯದ ಸಮರ್ಪಕ ಬೆಲೆಯಿಂದಾಗಿ ರೈತರಿಗೆ ಭವಿಷ್ಯವಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕಟಾವು ಮಾಡಿದ ಬತ್ತ ಮಾರಾಟಕ್ಕೆ ಸೂಕ್ತ ಬೆಲೆಯಿಲ್ಲದೆ ಅಡಚಣೆಯಾದರೆ, ಮತ್ತೊಂದೆಡೆ ಅಕಾಲಿಕ ಮಳೆಯ ಕಾಟ. ಹೀಗಾಗಿ ಬತ್ತ ಬೆಳೆಗಾರರು ಅಕ್ಷರಶಃ ಆತಂಕದಲ್ಲಿದ್ದಾರೆ.
ಪ್ರಸಕ್ತ ಬೇಸಿಗೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಸಿಂಧನೂರು, ಮಾನವಿ ತಾಲೂಕುಗಳ ಬತ್ತ ಬೆಳೆಗಾರರಿಗೆ ಸಮರ್ಪಕ ನೀರು ದೊರೆಯಲಿಲ್ಲ. ಫೆಬ್ರವರಿ ಅಂತ್ಯಕ್ಕೆ ಬಹುತೇಕ ಕಾಲುವೆಯ ಕಡೆಯ ಭಾಗದ ರೈತರು ನೀರಿನಿಂದ ವಂಚಿತರಾದರು. ಆದಾಗ್ಯೂ ಕಷ್ಟಪಟ್ಟು ಬೆಳೆದ ಬೆಳೆಗೀಗ ಬೆಲೆಯಿಲ್ಲದಂತಾಗಿದೆ.
ಬೆಲೆ ಕುಸಿತ: ರಾಯಚೂರು ಜಿಲ್ಲೆಯ ಎಲ್ಲೆಡೆಯ ಮಾರುಕಟ್ಟೆಗಳಲ್ಲಿ ಪ್ರತಿ ಬಾರಿ ಬತ್ತ ಮಾರುಕಟ್ಟೆಗೆ ಬಂದಾಗಲೆಲ್ಲ ಬೆಲೆ ಕುಸಿತ ಕಾಣುವುದು ಈಚಿನ ದಿನಗಳಲ್ಲಿ ಸಾಮಾನ್ಯ. ಮಧ್ಯವರ್ತಿಗಳ ಹಾವಳಿ, ಬತ್ತದ ಗುಣಮಟ್ಟದ ಬಗ್ಗೆಯೇ ಖರೀದಿದಾರರ ಆಕ್ಷೇಪದಂಥ ಕಾರಣಗಳಿಂದ ರೈತರಿಗೆ ಮಾತ್ರ ಲಾಭಕ್ಕೆ ಅನಿಶ್ಚಿತತೆ ನಿರಂತರ ಕಾಡುತ್ತಿದೆ. ಪ್ರಸಕ್ತ ಬೇಸಿಗೆಯಲ್ಲಿಯೂ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಎಡದಂಡೆ ಕಾಲುವೆಯ ವ್ಯಾಪ್ತಿ ಸಿಂಧನೂರು ಹಾಗೂ ಮಾನವಿ ತಾಲೂಕಿನ ಕೆಲ ಭಾಗದಲ್ಲಿ ರೈತರು ಬತ್ತ ಬೆಳೆದಿದ್ದರು. ನೀರಿನ ಕೊರತೆ, ಆಗಾಗ್ಗೆ ಕಾಡಿದ ಅಕಾಲಿಕ ಮಳೆಯ ಹೊರತಾಗಿಯೂ ಎಕರೆಗೆ ಸುಮಾರು 25 ಸಾವಿರ ವೆಚ್ಚ ಮಾಡಿ ಬೆಳೆದು ಕಟಾವು ಮುಗಿಸಿದ ರೈತರು ನೆಮ್ಮದಿ ನಿಟ್ಟುಸಿರಿಟ್ಟಿದ್ದಾರೆ.
ಆದರೆ ಮಾರುಕಟ್ಟೆಗೆ ಬತ್ತ ಆಗಮಿಸುತ್ತಿದ್ದಂತೆಯೇ ರೈತರಿಗೆ ಬೆಲೆ ಕುಸಿತ ಕಾಡತೊಡಗಿದೆ. ಸದ್ಯ ಮಾರುಕಟ್ಟೆಯಲ್ಲಿ 75 ಕೆಜಿ ಬತ್ತಕ್ಕೆ 900 ರಿಂದ 1000 ಮಾತ್ರ ದರವಿದೆ. ರೈತರು ಕನಿಷ್ಠ 1200ಕ್ಕೆ ಬೇಡಿಕೆ ಇಡುತ್ತಿದ್ದಾರೆ. ಪರಿಣಾಮ ರೈತರು ಬೆಳೆದ ಬತ್ತ ಖರೀದಿಯಾಗದೇ ಹಾಗೆಯೇ ಉಳಿಯುತ್ತಿದೆ.
ಮಳೆಯ ಕಾಟ: ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ಮತ್ತು ಕಳೆದ ಎರಡು ದಿನಗಳವರೆಗೆ ಧಾರಾಕಾರ ಮಳೆ ಸುರಿಯಿತು. ಅಕಾಲಿಕ ಮಳೆಯಿಂದಲೂ ಬತ್ತದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ರೈತರು ಸದ್ಯ ಬತ್ತವನ್ನು ಹೊಲಗದ್ದೆಗಳಲ್ಲಿ ಸಂಗ್ರಹಿಸಿದ್ದು, ಅಕಾಲಿಕ ಮಳೆಯಿಂದಾಗಿ ಬತ್ತ ಹಾನಿಗೀಡಾಗುತ್ತಿದೆ. ಅಷ್ಟೇ ಅಲ್ಲ ಮಳೆಯ ಕಾಟದಿಂದ ಪಾರಾಗಲು ಅನಿವಾರ್ಯವಾಗಿ ಸಿಕ್ಕ ಬೆಲೆಗೆ ಮಾರಾಟ ಮಾಡುವಂಥ ಸ್ಥಿತಿಯಿದೆ. ಈಗಾಗಲೇ ಕೆಲ ರೈತರು ಆತಂಕದಿಂದ ಬತ್ತ ಮಾರಾಟ ಮಾಡಿದ್ದಾರೆ.
ಖರೀದಿ ಕೇಂದ್ರಕ್ಕೆ ಆಗ್ರಹ: ಬತ್ತದ ದರ ಕುಸಿತ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ದಾರಿ ಮಾಡಿದೆ. ಈಗಾಗಲೇ ರಾಜ್ಯ ರೈತ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಗಿದೆ. ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಲಾಗಿದೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಮೇ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಬತ್ತ ಮತ್ತು ಶೇಂಗಾ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ. ಸಿಎಂ ಈ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಷರತ್ತಿನ ಭೀತಿ: ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆದು ಬತ್ತ ಖರೀದಿಗೆ ಮುಂದಾದರೂ ಅಂಥ ಕೇಂದ್ರಗಳಲ್ಲಿ ವಿಧಿಸಲಾಗುವ ಖರೀದಿ ಪೂರ್ವ ಷರತ್ತುಗಳ ಬಗ್ಗೆ ರೈತರಲ್ಲಿ ಈಗಲೇ ಆತಂಕ ಮೂಡಿದೆ. ಬೇಸಿಗೆಯಲ್ಲಿ ನೀರಿನ ಅಭಾವದಿಂದ ಗುಣಮಟ್ಟದ ಬತ್ತ ಬೆಳೆಯುವುದು ಕಷ್ಟ. ಇಂಥ ಪರಿಸ್ಥಿತಿಯಲ್ಲಿ ಖರೀದಿ ಕೇಂದ್ರದಲ್ಲಿ ಗುಣಮಟ್ಟದ ಬತ್ತ ಮಾತ್ರ ಖರೀದಿಸಲಾಗುತ್ತದೆ ಎಂದು ಘೋಷಿಸಿದಲ್ಲಿ ರೈತರು ಮತ್ತೆ ಆತಂಕಕ್ಕೆ ಸಿಲುಕುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಷರತ್ತುಗಳ ಸಡಿಲಿಕೆಗೆ ಒತ್ತಡ ಹೇರಲಾಗುತ್ತಿದೆ.
ಜಗನ್ನಾಥ ಆರ್. ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

