ಕೈ ಕುಲುಕಿದ ಮತದಾರ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಮೇ 16
ರಾಯಚೂರು ಲೋಕಸಭೆ ಕ್ಷೇತ್ರ(ಎಸ್ಟಿ ಮೀಸಲು)ಕ್ಕೆ ಏಪ್ರಿಲ್ 17ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಭಗವಂತರಾಯ ನಾಯಕ (ಬಿ.ವಿ. ನಾಯಕ) ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಾಜಿ ಸಚಿವ ಶಿವನಗೌಡ ನಾಯಕ ಅವರನ್ನು 1499 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ನಗರದ ಎಲ್ ವಿಡಿ ಕಾಲೇಜು ಮತ್ತು ಎಸ್ಆರ್ಪಿಎಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಮತಗಳ ಎಣಿಕೆ ಕಾರ್ಯದ ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಎನ್. ನಾಗರಾಜು ಕಾಂಗ್ರೆಸ್ ಗೆಲುವನ್ನು ಪ್ರಕಟಿಸಿದರು.
ಚಾಲನೆ: ಮತ ಎಣಿಕೆ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ 8ಕ್ಕೆ ಮತಗಳ ಎಣಿಕೆ ಕಾರ್ಯ ಆರಂಭಗೊಂಡಿತು. ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಸಲಾಯಿತು. ಅಂಚೆ ಮತಗಳ ಎಣಿಕೆ ಕಾರ್ಯ ನಿಧಾನವಾಗಿ ಸಾಗಿದ್ದರಿಂದ ಜಿಲ್ಲಾಧಿಕಾರಿಗಳು ಮತಗಳ ಎಣಿಕೆ ಪ್ರಕ್ರಿಯೆ ಚುರುಕುಗೊಳಿಸಲು ಮತಯಂತ್ರಗಳಿರುವ ಸ್ಟ್ರಾಂಗ್ ರೂಂ ಕೊಠಡಿ ತೆರೆದು ಮತ ಎಣಿಕೆ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ನಡೆದ ಮತಗಳ ಎಣಿಕೆಯಲ್ಲಿ ಅಂತಿಮವಾಗಿ ಕಾಂಗ್ರೆಸ್ನ ಭಗವಂತರಾಯ ನಾಯಕ (ಬಿ.ವಿ.ನಾಯಕ) ಅವರು ವಿಜಯದ ನಗೆ ಬೀರಿದರು. ಕಾಂಗ್ರೆಸ್ ಅಭ್ಯರ್ಥಿಗೆ ಒಟ್ಟು 443659 ಮತಗಳು ಬಂದರೆ ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಾಜಿ ಸಚಿವ ಶಿವನಗೌಡ ನಾಯಕ ಅವರಿಗೆ 442160 ಮತಗಳು ಬಂದವು. ಕಾಂಗ್ರೆಸ್ ಅಭ್ಯರ್ಥಿಯು 1499 ಮತಗಳ ಅಂತರದಿಂದ ಗೆಲವು ಸಾಧಿಸಿದರು.
ಜೆಡಿಎಸ್ ಅಭ್ಯರ್ಥಿ ಡಿ.ಬಿ. ನಾಯಕ ಅವರಿಗೆ 21706, ಬಿಎಸ್ಪಿಯ ರಾಜಾ ತಿಮ್ಮಪ್ಪ ನಾಯಕ-12254, ಸಿಪಿಎಂಎಲ್ನ ನಾಗರಾಜ- 6938, ಲೋಕಸತ್ತಾದ ಭಗವಂತಪ್ಪ- 2881, ಆಮ್ ಆದ್ಮಿ ಪಾರ್ಟಿಯ ಭೀಮರಾಯ ಜರದಬಂಡಿ-4234, ನ್ಯಾಷನಲ್ ಡೆವಲಪ್ಮೆಂಟ್ ಪಾರ್ಟಿಯ ಮಾರುತಿ ಜಂಬಗಿ- 3618, ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾದ ರಂಗನಾಯಕ ಗಾಣದಾಳ- 4935, ಎಸ್ ಯುಸಿಐ-ಸಿ ಪಕ್ಷದ ಸೋಮಶೇಖರ್ ಯಾದಗಿರಿ- 6788, ಪಕ್ಷೇತರ ಚಿನ್ನಯ್ಯ ನಾಯಕ- 6540 ಮತ ಗಳಿಸಿದರು.
ಗೊಂದಲ: ಮತಗಳ ಎಣಿಕೆ ಕೇಂದ್ರದ ಎದುರು ಬೆಳಗ್ಗೆ 10ರವರೆಗೆ ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಷ್ಟಾಗಿ ಕಂಡುಬರಲಿಲ್ಲ. ಆದರೆ 10 ಗಂಟೆಯ ನಂತರದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದರು. ಕೇಂದ್ರದೊಳಗೆ ತೆರಳಿದ್ದ ನಾಯಕರು ನೀಡುತ್ತಿದ್ದ ಮುನ್ನಡೆಯ ಸಂದೇಶ ಅನೇಕ ಬಾರಿ ಹೊರಗಿದ್ದ ಕಾರ್ಯಕರ್ತರಿಗೆ ಗೊಂದಲ ಮೂಡಿಸಿದ್ದು, ಕಂಡು ಬಂದಿತು.
ಈ ಮಧ್ಯೆ ಯಾದಗಿರಿ ಕ್ಷೇತ್ರದ ಮತ ಎಣಿಕೆಯ ಮೊದಲ ಸುತ್ತಿನ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸಮಾನ ಮತಗಳು ಬಂದಿದ್ದರಿಂದ ಮತ್ತೆ ಮತ ಎಣಿಕೆ ನಡೆಸಲಾಯಿತು. ಆನಂತರ ಬಿಜೆಪಿಗೆ ಮುನ್ನಡೆ ದೊರೆತು ಸಮಸ್ಯೆ ಪರಿಹಾರ ಕಂಡಿತು. ಅದರಿಂದಾಗಿ ಮತಗಳ ಎಣಿಕೆ ಮತ್ತು ಪ್ರಕಟಣೆ ವಿಳಂಬವಾಯಿತು.
ಮರು ಎಣಿಕೆಗೆ ಒತ್ತಾಯ: ಅದೇ ರೀತಿ ಕಾಂಗ್ರೆಸ್ ಕೇವಲ 1499 ಮತಗಳ ಅಂತರದಿಂದ ಗೆಲವು ಕಾಣುತ್ತಿದ್ದಂತೆಯೇ ಬಿಜೆಪಿ ಅಭ್ಯರ್ಥಿ ಪರ ಮಾಜಿ ಸಚಿವ ರಾಜೂಗೌಡ ಅವರು ಜಿಲ್ಲಾಧಿಕಾರಿಗಳಿಗೆ ಮತಗಳ ಮರು ಎಣಿಕೆಗೆ ಒತ್ತಾಯಿಸಿದರು. ತಮ್ಮ ಲೆಕ್ಕಾಚಾರದಂತೆ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತಗಳು ಬರಬೇಕಿತ್ತು. ಎಣಿಕೆಯಲ್ಲಿ ಲೋಪವಾಗಿದೆ ಎಂದು ವಾದಿಸಿದರು. ಆದರೆ ಜಿಲ್ಲಾ ಚುನಾವಣಾಧಿಕಾರಿ ಎಸ್.ಎನ್. ನಾಗರಾಜು ಅವರು, ಮತ ಎಣಿಕೆಯಲ್ಲಿ ಯಾವುದೇ ಲೋಪವಾಗಿಲ್ಲ. ಪಕ್ಷದ ಲೆಕ್ಕಾಚಾರದಂತೆ ಮತಗಳನ್ನು ಎಣಿಸಲಾಗದು. ಮತಗಳ ಸಂಖ್ಯೆಯನ್ನು ಸರಿಯಾಗ ಎಣಿಕೆ ಮಾಡಿ ಒದಗಿಸಲಾಗಿದೆ ಎಂದು ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಡಿಸಿ ಮೇಸ್ಟ್ರು, ಮೀಡಿಯಾ ಸ್ಟೂಡೆಂಟ್ಸು..!
ಮೀಡಿಯಾದವ್ರು ಎಲ್ರೂ ಬಂದಿದೀರೇನ್ರಿ... ಎಸ್ ಸರ್... ಇಂಥ ಮಾತು ಶುಕ್ರವಾರ ನಗರದ ಎಲ್ವಿಡಿ ಕಾಲೇಜಿನ ಲೋಕಸಭೆ ಚುನಾವಣೆ ಮತಗಳ ಎಣಿಕೆ ವೇಳೆ ಪ್ರತಿ 15 ನಿಮಿಷಕ್ಕೊಮ್ಮೆ ಕೇಳಿಬರುತ್ತಲೇ ಇತ್ತು. ಅದಕ್ಕೆ ಕಾರಣ ಮಾಧ್ಯಮದ ಕೇಂದ್ರದ ಅವ್ಯವಸ್ಥೆ. ಪ್ರತಿ ಬಾರಿ ಚುನಾವಣೆಯ ಮತ ಎಣಿಕೆಯಂತೆ ಈ ಬಾರಿಯೂ ನಗರದ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮದವರಿಗೆ ಪ್ರತಿ ಸುತ್ತಿನ ಮತಗಳ ಎಣಿಕೆ ವಿವರ ನೀಡುವ ನಿಟ್ಟಿನಲ್ಲಿ ಮಾಧ್ಯಮದ ಕೇಂದ್ರ ಸ್ಥಾಪಿಸಲಾಗಿತ್ತು. ಮತ ಎಣಿಕೆ ಕೊಠಡಿಯಲ್ಲಿ ಮತಗಳ ಎಣಿಕೆಯು ನಾಲ್ಕರಿಂದ ಐದನೇ ಸುತ್ತಿನಲ್ಲಿದ್ದಾಗ ಮಾಧ್ಯಮ ಕೇಂದ್ರದ ಫಲಕದ ಮೇಲೆ 2ನೇ ಸುತ್ತಿನ ಮತ ಎಣಿಕೆ ವಿವರ ಪ್ರದರ್ಶನವಾಗುತ್ತಿತ್ತು. ಅದರಿಂದ ಬೇಸತ್ತ ಮಾಧ್ಯಮದವರು ಜಿಲ್ಲಾಧಿಕಾರಿಗೆ ದೂರಿತ್ತರು. ಮಾಹಿತಿ ದೊರೆಯುತ್ತಿದ್ದಂತೆಯೇ ಕೊಠಡಿಯಿಂದ ಹೊರಬರುತ್ತಿದ್ದ ಡಿಸಿ ಮಾಧ್ಯಮದವ್ರು ಎಲ್ರೂ ಬಂದಿದೀರೇನ್ರಿ ಎನ್ನುತ್ತಿದ್ದಂತೆಯೇ ಮಾಧ್ಯಮದವರು ವಿದ್ಯಾರ್ಥಿಗಳಂತೆ ಎಸ್ ಸರ್ ಎಂದು ಹೇಳುತ್ತಿದ್ದಂತೆಯೇ ಮಾಹಿತಿ ಲಭ್ಯವಾಗುತ್ತಿತ್ತು.
ರಾಯಚೂರು ಕ್ಷೇತ್ರದ ಮತದಾರರು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಂತರ 'ನೋಟಾ'ಕ್ಕೆ ಹೆಚ್ಚಿನ ಒತ್ತು ನೀಡಿದ್ದು ಎಣಿಕೆ ವೇಳೆ ಬಹಿರಂಗಗೊಂಡಿದೆ. ಒಟ್ಟು 13,176 ಜನ ಮತದಾರರು ನೋಟಾ ಬಟನ್ ಒತ್ತಿ ಅಭ್ಯರ್ಥಿಗಳಿಗೆ ನೀವೆಲ್ಲರೂ ಅರ್ಹರಲ್ಲ ಎಂದಿದ್ದಾರೆ.
ಮತಎಣಿಕೆ ವೇಳೆ ಯಾದಗಿರಿ ಮತಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯ ನಂತರ ಪ್ರಮುಖ ಅಭ್ಯರ್ಥಿಗಳಿಗೆ ಸಮನಾಗಿ ಮತ ಬಂದಿದ್ದರಿಂದ ಮತ್ತೆ ಮತಗಳ ಎಣಿಕೆ ನಡೆದು ಎರಡನೇ ಬಾರಿಯ ಎಣಿಕೆಯಲ್ಲಿ ಬಿಜೆಪಿಗೆ ಅಲ್ಪ ಮುನ್ನಡೆ ದೊರೆಯಿತು.
ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಅವರು 1,499 ಅಲ್ಪ ಮತಗಳ ಅಂತರದಿಂದ ಗೆಲವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಅಭ್ಯರ್ಥಿ ಪರ ಬೆಂಬಲಿಗರು ಮಾಜಿ ಸಚಿವ ರಾಜುಗೌಡ ಅವರ ನೇತೃತ್ವದಲ್ಲಿ ಮರು ಮತ ಎಣಿಕೆಗೆ ಒತ್ತಾಯಿಸಿದರು. ಜಿಲ್ಲಾ ಚುನಾವಣೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಮುಂದಾದರು. ಆದರೆ ಅವರು ಎಣಿಕೆ ಸರಿಯಾಗೇ ನಡೆದಿದೆ ಎಂದು ಸಮಜಾಯಿಷಿ ನೀಡುವ ಮೂಲಕ ಪರಿಸ್ಥಿತಿ ತಿಳಿಗೊಂಡಿತು.
ಬಿಜೆಪಿ ಕಾರ್ಯಕರ್ತರು, ನಾಯಕರು ಪ್ರತಿ ಬಾರಿ ಕಾಂಗ್ರೆಸ್ ಮುನ್ನಡೆ ಸಾಧಿಸಿದಂತೆಲ್ಲ ತಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ನಡೆಸಿದ ಲೆಕ್ಕಾಚಾರದಂತೆ ವೋಟು ಬಂದಿಲ್ಲ. ಮತಎಣಿಕೆಯಲ್ಲಿ ಲೆಕ್ಕ ತಪ್ಪುತ್ತಿದೆ ಎಂದು ಗೊಣಗುತ್ತ ಅಲೆದಾಡುತ್ತಿದ್ದದ್ದು ಕಂಡುಬಂದಿತು.
ಜೆಡಿಎಸ್ಗೆ ಗೆಲವಿನ ನಿರೀಕ್ಷೆಯಿರಲಿಲ್ಲ. ಹಾಗಾಗಿ ಜೆಡಿಎಸ್ನ ಪ್ರಮುಖ ನಾಯಕರೆಲ್ಲರೂ ಮತ ಎಣಿಕೆ ಕೇಂದ್ರದಲ್ಲಿ ಸ್ಥಾಪಿಸಿದ್ದ ಮಾಧ್ಯಮ ಕೇಂದ್ರ, ವೀಕ್ಷಕರ ಕೊಠಡಿ ಹಾಗೂ ಜಿಲ್ಲಾಧಿಕಾರಿಗಳ ಸುತ್ತಲೂ ಗಿರಕಿ ಹೊಡೆಯುತ್ತಿದ್ದರೇ ವಿನಾ ಮತ ಎಣಿಕೆಯತ್ತ ಲಕ್ಷ್ಯವೇ ಇರಲಿಲ್ಲ.
ಮತ ಎಣಿಕೆ ಕೇಂದ್ರದೊಳಕ್ಕೆ ಸಹಾಯಕ ಚುನಾವಣಾಧಿಕಾರಿಗಳು ಮತ್ತು ಮಾಧ್ಯಮದವರಿಗೆ ಮಾತ್ರ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿತ್ತು. ಆದರೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಿಬ್ಬಂದಿ ಕೈಯಲ್ಲಿ ಮೊಬೈಲ್ ರಾರಾಜಿಸುತ್ತಿದ್ದವು. ರಾಜಾರೋಷವಾಗಿ ಮತಎಣಿಕೆ ಕೇಂದ್ರದಲ್ಲಿಯೇ ಹೊರಗಿನವರಿಗೆ ಮುನ್ನಡೆ, ಹಿನ್ನಡೆಯ ಮಾಹಿತಿ ಒಳಗಿನವರಿಗೆ ಗೊತ್ತಾಗುವ ಮೊದಲೇ ರವಾನೆಯಾಗುತ್ತಿದ್ದದ್ದು ವಿಶೇಷ.
ಅನಕ್ಷರಸ್ಥರಿಗೆ ಮತದಾನ ಮಾಡಲು ಬರುವುದಿಲ್ಲ. ಅವರಿಗೆ ಯಾವ ಅಭ್ಯರ್ಥಿ, ಚಿಹ್ನೆ ಗೊತ್ತಾಗದು ಎಂಬುದು ಸಾಮಾನ್ಯ ಕೂಗು. ಆದರೆ ಮತದಾನಕ್ಕೆ ತೆರಳಿದ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿಯೇ ಮತದಾನ ಮಾಡುವಲ್ಲಿ ತಪ್ಪೆಸಗಿದ್ದಾರೆ. ಒಟ್ಟು 158 ಅಂಚೆ ಮತಗಳು ತಿರಸ್ಕೃತಗೊಂಡಿದ್ದು ಇದಕ್ಕೆ ಸಾಕ್ಷಿಯಾಯಿತು.
ನೋಟಾ ಬಟನ್ ಸೌಲಭ್ಯ ಹಾಗೂ ಅಂಚೆ ಮತಗಳು ತಿರಸ್ಕೃತಗೊಂಡಿದ್ದರಿಂದ ರಾಯಚೂರು ಕ್ಷೇತ್ರದಲ್ಲಿ ಒಟ್ಟು 13,334 ಮತಗಳು ವ್ಯರ್ಥವಾದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

