ವಿತರಣಾ ಕಾಲುವೆ ಕಾಮಗಾರಿ ಅಪೂರ್ಣ
ಅಮರೇಶಸ್ವಾಮಿ ಬಲ್ಲಟಗಿ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮೇ 24
ತಾಲೂಕಿನ ಗೌಡೂರು ಗ್ರಾಮದ ಬಳಿ ರಾಂಪೂರ ಏತನೀರಾವರಿ ಯೋಜನೆ ವಿಸ್ತಾರಿತ ವಿತರಣಾ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದರಿಂದ ಕೃಷಿ ಚಟುವಟಿಕೆಗೆ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರಾಂಪೂರು ಏತ ನೀರಾವರಿ ಯೋಜನೆಯ 11ನೇ ಉಪಕಾಲುವೆ ಮುಂದುವರೆದ ಕಾಮಗಾರಿಯಾಗಿ ಲಿಂಗಸ್ಗೂರು ತಾಲೂಕಿನ ಹೊನ್ನಳ್ಳಿಯಿಂದ ಆರಂಭಗೊಂಡು ಉಪಕಾಲುವೆ ಕಾಮಗಾರಿ ಗುಡದನಾಳ, ಮೇದಿನಾಪೂರ, ಹಟ್ಟಿ, ಕೋಠಾ, ಗೌಡೂರು, ಮಾಚನೂರು ಗ್ರಾಮಗಳವರೆಗೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. 2013 ಡಿಸೆಂಬರ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿಯಮ ಅನುಸರಿಸಬೇಕಿತ್ತು.
ಅಧಿಕಾರಿಗಳ ನಿರ್ಲಕ್ಷ್ಯ: ಆರಂಭ ಶೂರನಂತೆ ಭರದಿಂದ ಆರಂಭಿಸಿದ ಕಾಮಗಾರಿ ನಂತರ ಗುತ್ತೇದಾರರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ 3-4 ತಿಂಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ನಮ್ಮ ಜಮೀನುಗಳಿಗೆ ನೀರಾವರಿಯಾಗಲಿದ್ದು, ಉತ್ತಮ ಫಸಲು ಬೆಳೆದು ಆರ್ಥಿಕ ಸ್ಥಿತಿಗತಿ ಸುಧಾರಣೆಗೊಂಡು ಉತ್ತಮ ಜೀವನ ಸಾಗಿಸಬಹುದೆಂಬ ರೈತರ ಕನಸು ಹುಸಿಯಾಗಿದೆ.
ಜಮೀನಿನಲ್ಲಿ ಕಾಲುವೆಗುಂಟ: ಬರುವ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಗೊಂಡು ಬಿತ್ತನೆ ಕಾರ್ಯ ಆರಂಭವಾಗಲಿದ್ದು, ರೈತರು ಕೃಷಿ ಚಟುವಟಿಕೆಗೆ ಅಗತ್ಯ ತಯಾರಿ ನಡೆಸುತ್ತಿದ್ದಾರೆ. ಆದರೆ ವಿತರಣಾ ಕಾಲುವೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಕಾಲುವೆ ಅಗೆದು ಅದರಲ್ಲಿನ ಮಣ್ಣು ರೈತರ ಜಮೀನಿನಲ್ಲಿ ಕಾಲುವೆಗುಂಟ ಹಾಕಿದ್ದಾರೆ. ಅಲ್ಲದೆ ಕಾಲುವೆಗೆ ಸೇತುವೆ ನಿರ್ಮಿಸಲು ಬೇಕಾದ ಸಿಮೆಂಟ್ ಪೈಪುಗಳು ರೈತರ ಜಮೀನಿನಲ್ಲಿ ಹಾಕಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದ್ದು, ಹೊಲಗಳಿಗೆ ತೆರಳಲು ದಾರಿಯಿಲ್ಲದೆ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪರಿಹಾರ ಕೊಟ್ಟಿಲ್ಲ: ಉಪಕಾಲುವೆ ನಿರ್ಮಿಸಲು ರೈತರಿಗೆ ಪ್ರತಿ ಗುಂಟೆಗೆ 1200 ರಂತೆ ಬೆಳೆ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಗುತ್ತಿಗೆದಾರರು ಇದುವರೆಗೆ ಕೆಲ ರೈತರಿಗೆ ಪರಿಹಾರ ನೀಡಿಲ್ಲ. ಕಾಲುವೆ ಅಗಲ 60 ಫೀಟಿನಂತೆ ನಿರ್ಮಿಸಬೇಕೆಂಬ ನಿಯಮವಿದ್ದರೂ ಕೆಲ ರೈತರ ಜಮೀನಿನಲ್ಲಿ 80 ರಿಂದ 90 ಫೀಟು ಜಮೀನು ಪಡೆದಿರುತ್ತಾರೆ. ಹೆಚ್ಚಿನ ಜಮೀನು ಪಡೆದರೂ ಅದಕ್ಕೆ ಪರಿಹಾರ ನೀಡಿಲ್ಲವೆಂಬುದು ರೈತರ ಆರೋಪವಾಗಿದೆ. ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಉಪಕಾಲುವೆ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಬೇಕು. ನಿಯಮಾನುಸಾರ 60 ಫೀಟು ಜಮೀನು ಪಡೆದು ಒತ್ತುವರಿ ಜಮೀನು ತೆರವುಗೊಳಿಸಬೇಕು. ಇಲ್ಲದಿದ್ದರೆ ರೈತರ ಜೊತೆಗೂಡಿ ಹೋರಾಟ ನಡೆಸಲಾಗುವುದೆಂದು ಕರ್ನಾಟಕ ರೈತಸಂಘದ ತಾಲೂಕು ಅಧ್ಯಕ್ಷ ಸಿದ್ದೇಶ ಗೌಡೂರು, ರೈತ ಮುಖಂಡರಾದ ಅಮರೇಶ ಅಂಗಡಿ, ಅಮರೇಶ ಬೆಣ್ಣಿ ಸೇರಿ ರೈತರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

