ರಾಯಚೂರು

ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

Published On :

ರಾಯಚೂರು: ಗುಲ್ಬರ್ಗ ಜಿಲ್ಲೆಯ ತಾಡತೆಗನೂರು ಗ್ರಾಮದಲ್ಲಿರುವ ವಿವೇಕಾನಂದ ವಿದ್ಯಾಪೀಠ ಶಾಲೆಯಲ್ಲಿ 2014-15ನೇ ಸಾಲಿಗೆ ಜಿಲ್ಲೆಯ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ. ಅಲೆಮಾರಿ- ಅರೆ ಅಲೆಮಾರಿ ಜಾತಿಗೆ ಸೇರಿದವರಾಗಿರಬೇಕು. ಕೌಟುಂಬಿಕ ಆದಾಯ 1ಲಕ್ಷ ಒಳಗಿರಬೇಕು. ಆಸಕ್ತರು ಅರ್ಜಿಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ರಾಯಚೂರು ಅವರಿಂದ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಿಂದ ಉಚಿತವಾಗಿ ಪಡೆದು ಮೇ 28ರೊಳಗೆ ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗೆ ಜಿಲ್ಲಾ ಕಚೇರಿಯನ್ನು ಅಥವಾ ತಾಲೂಕು ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಜಿಲ್ಲಾ ಕೋರಲಾಗಿದೆ.
ಪತ್ರಿಕೋದ್ಯಮ ಪ್ರಶಸ್ತಿಗೆ ಅರ್ಜಿ
ರಾಯಚೂರು: ರಾಜ್ಯ ಸರ್ಕಾರವು ಪ್ರತಿ ವರ್ಷ ನೀಡುವ ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ವಿವಿಧ ಮಾಧ್ಯಮ ಸಂಸ್ಥೆಗಳಿಂದ ಅರ್ಹ ಪತ್ರಕರ್ತರ ನಾಮ ನಿರ್ದೇಶನಗಳನ್ನು ಆಹ್ವಾನಿಸಿದೆ. ಟಿಯೆಸ್ಸಾರ್ ಸ್ಮಾರಕ ಪ್ರಶಸ್ತಿಯನ್ನು ಕನ್ನಡ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಾಗೂ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿ, ಜೀವನಮಾನದ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡಲಾಗುತ್ತದೆ.
ಕನಿಷ್ಟ ಮೂವತ್ತು ವರ್ಷ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಅಥವಾ ಈ ಎರಡು ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುವುದು. ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಾವುದೇ ಕನ್ನಡ ಪತ್ರಿಕೆಯನ್ನು ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಹಾಗೂ ಪ್ರವೃತ್ತಿಯಲ್ಲಿ ಪತ್ರಕರ್ತರಾಗಿ ವೃತ್ತಿಯಲ್ಲಿ ಪತ್ರಿಕಾ ಸಮೂಹದ ಮಾಲೀಕರಾಗಿ, ಆಡಳಿತಗಾರರಾಗಿ ಕನಿಷ್ಟ 30 ವರ್ಷಗಳ ಅನುಭವ ಹೊಂದಿದವರನ್ನು ಪರಿಗಣಿಸಲಾಗುತ್ತದೆ. ಭಾರತೀಯ ಪತ್ರಿಕಾ ಮಂಡಳಿಯಿಂದ ಛೀಮಾರಿ ಅಥವಾ ದಂಡ ಹಾಕಿಸಿಕೊಂಡ ಇಲ್ಲವೇ ಯಾವುದೇ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಈ 2 ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರ ಪರಿಚಯ, ಸಾಧನೆಯ ಮಾಹಿತಿ, ಶಿಫಾರಸ್ಸು ಪತ್ರಗಳನ್ನು ಪತ್ರಿಕಾ ಸಂಘಟನೆಗಳು ಹಾಗೂ ಮಾಧ್ಯಮ ಸಂಸ್ಥೆಗಳವರು ನಿರ್ದೇಶಕರು, ವಾರ್ತಾಇಲಾಖೆ, ನಂ.17, ಭಗವಾನ್ ಮಹಾವೀರ ರಸ್ತೆ, ವಾರ್ತಾ ಸೌಧ, ಬೆಂಗಳೂರು ಇಲ್ಲಿಗೆ ಜೂ.3ರೊಳಗೆ ಸಲ್ಲಿಸಲು ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ ತಿಳಿಸಿದ್ದಾರೆ.
ಗೂಂಡಾ ಕಾಯಿದೆ: ಇಬ್ಬರ ಬಂಧನ
ರಾಯಚೂರು: ಸಿಎಚ್ ಪೌಡರ್ ಮತ್ತು ಅಕ್ರಮ ಸೇಂದಿ ಮಾರಾಟದಲ್ಲಿ ತೊಡಗಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರನ್ನು ಗೂಂಡಾ ಕಾಯಿದೆ ಅಡಿ ಜಿಲ್ಲಾ ಪೊಲೀಸ್ ಇಲಾಖೆ ಭಾನುವಾರ ಬಂಧಿಸಿದೆ.ಬಂಧಿತರನ್ನು ನರಸಿಂಹಲು ಅಲಿಯಾಸ್ ಬ್ರೂಸ್ಲಿ(35) ಹಾಗೂ ಶ್ರೀನಿವಾಸ್(47) ಎಂದು ಗುರುತಿಸಲಾಗಿದೆ. ನರಸಿಂಹಲು ಎಂಬಾತ ನಗರದ ಮೈಲಾರ ನಗರ ಬಡಾವಣೆಯವನಾಗಿದ್ದು, ಈತನ ವಿರುದ್ಧ 2005ರಿಂದ ಇದುವರೆಗೆ 20 ಅಕ್ರಮ ಸಿಎಚ್ ಪೌಡರ್ ಮತ್ತು ಸೇಂದಿ ಸಾಗಣೆಯ ಕೇಸುಗಳಿದ್ದವು. ಜಿಲ್ಲಾಧಿಕಾರಿ ಈತನ ವಿರುದ್ಧ ಗೂಂಡಾ ಕಾಯಿದೆ ಅಡಿ ಬಂಧಿಸಲು ಆದೇಶಿಸಿದ್ದರು. ಅದೇ ರೀತಿ ತಾಲೂಕಿನ ದೇವಸೂಗೂರು ಗ್ರಾಮದ ಲೇಬರ್ ಕಾಲನಿಯ ನಿವಾಸಿ ಶ್ರೀನಿವಾಸ್ ಎಂಬಾತ ಸಹ ಅಕ್ರಮ ಸಿಎಚ್ ಪೌಡರ್ ಮತ್ತು ಸೇಂದಿ ಮಾರಾಟದ ಕೃತ್ಯದಲ್ಲಿ ತೊಡಗಿದ್ದು, ಈತನ ವಿರುದ್ಧ 14 ಕೇಸುಗಳಿದ್ದವು. ಜಿಲ್ಲಾಧಿಕಾರಿ ಈತನ ಬಂಧನಕ್ಕೂ ಸೂಚಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದಾರೆಂದು ಜಿಲ್ಲಾ ಪೊಲೀಸ್ ತಿಳಿಸಿದೆ.
ಸೇವೆ ಮುಂದುವರಿಸಿ:
ಗ್ರಾಮಸ್ಥರ ಮನವಿ
ಲಿಂಗಸ್ಗೂರು: ತಾಲೂಕಿನ ಗುಂತಗೋಳ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ಅಂಕುಶದೊಡ್ಡಿ ಗ್ರಾಪಂಗೆ ನಿಯೋಜನೆ ಮಾಡಿರುವುದನ್ನು ರದ್ದುಗೊಳಿಸಿ ಗುಂತಗೋಳ ಗ್ರಾಪಂನಲ್ಲಿ ಮುಂದುವರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ತಾಪಂ ಇಒ ಶರಣಬಸಪ್ಪರಿಗೆ ಸೋಮವಾರ ಮನವಿ ಸಲ್ಲಿಸಿದರು. ಗುಂತಗೋಳ ಗ್ರಾಪಂ ಗ್ರೇಡ್-2 ಕಾರ್ಯದರ್ಶಿ ಮಹ್ಮದ್‌ಖಾಜಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಸಾರ್ವಜನಿಕರ ಸಹಕಾರ ಮನೋಭಾವ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಹೆಚ್ಚಿನ ಅಭಿವೃದ್ಧಿಗೆ ಇವರ ಸೇವೆ ಅವಶ್ಯವಿರುತ್ತದೆ ಎಂದು ಆಗ್ರಹಿಸಿದ್ದಾರೆ.
ಐಟಿಐ: ಅರ್ಜಿ ಕರೆ
ರಾಯಚೂರು: ಉದ್ಯೋಗ ಮತ್ತು ತರಬೇತಿ ಇಲಾಖೆಯಡಿ ರ್ನಿಹಿಸುವ ಲಿಂಗಸ್ಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ. 2014ನೇ ಸಾಲಿಗೆ ಮೆರಿಟ್ ಕಂ ರಿಸರ್ವೇಶನ್ ಆಧಾರದಲ್ಲಿ ಪ್ರವೇಶ ಕಲ್ಪಿಸಲಾಗುತ್ತದೆ. ಅರ್ಜಿಗಳನ್ನು ಅಂತರ್ಜಾಲದ ಮೂಲಕ ಆಹ್ವಾನಿಸಿದ್ದು, ಪ್ರವೇಶಕ್ಕೆ ಕನಿಷ್ಟ 14 ರಿಂದ 40 ವರ್ಷ ವಯೋವುತಿ ನಿಗದಿಯಾಗಿದ್ದು, ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಎಲೆಕ್ಟ್ರಾನಿಕ್ಸ್-16, ಮೆಕ್ಯಾನಿಕಲ್ -16 ಸೀಟುಗಳಿಗೆ ಪ್ರವೇಶಕ್ಕೆ ಅವಕಾಶವಿದೆ.  ಮೇ 31ರಿಂದ ಜೂ.5ರವರೆಗೆ ಆನ್‌ಲೈನ್‌ನಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.  ಮಾಹಿತಿಗೆ  08537-257827, 9741991718, 9740850371, 9448894436.
ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಸಿಂಧನೂರು: ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ತಾಲೂಕಾಧ್ಯಕ್ಷ ದೇವೇಂದ್ರಪ್ಪ ನಾಯಕ, ಮುಖಂಡ ವೆಂಕನಗೌಡ ಮಲ್ಕಾಪುರ, ನಗರ ಘಟಕದ ಅಧ್ಯಕ್ಷ ಮಧ್ವರಾಜ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಸುಬ್ಬರಾವ್, ರುದ್ರಗೌಡ ಪಗಡದಿನ್ನಿ, ಸಾಯಿರಾಮಕೃಷ್ಣ, ಎನ್.ಕೃಷ್ಣಮೂರ್ತಿ, ಪ್ರವೀಣ ಜೈನ್, ಪ್ರಶಾಂತ, ಮುರುಳಿ, ನಾಗೇಶ, ಕೆ.ಬಾಳಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಖಾನ್ ಸಾಹೇಬ್ ಉರೂಸ್
ಸಿಂಧನೂರು: ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಮಹ್ಮದ್ ಶರೀಫ್‌ಖಾನ್ ಸಾಹೇಬರ ದರ್ಗಾದಲ್ಲಿ ಉರೂಸ್ ಅದ್ಧೂರಿಯಾಗಿ ಜರುಗಿತು.
ಬೆಳಗ್ಗೆ ಸಂತೆಕೆಲ್ಲೂರಿನ ಘನಮಠೇಶ್ವರ ಮಠದಿಂದ ಗಂಧವನ್ನು ತರಲಾಯಿತು. ಗ್ರಾಮದ ಕುಂಬಾರಗಡ್ಡೆಯಿಂದ ದರ್ಗಾದವರೆಗೆ ನಾನಾ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಸಿ ಕರ್ತೃ ಗದ್ದುಗೆಗೆ ಗಂಧವನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ರಾಮಾಯಣದ ಹಲವು ತುಣುಕು ಘಟನಾವಳಿಗಳನ್ನು ಬಹುರೂಪಿಗಳು ಮೆರವಣಿಗೆಯಲ್ಲಿ ಅಭಿನಯಿಸುವ ಮೂಲಕ ನೆರೆದ ಭಕ್ತರನ್ನು ರಂಜಿಸಿದರು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಗುರುನಾಥ ಮಹಾರಾಜ, ಮಹಾಂತ ದೇವರು, ಶೇಖ್‌ಖಾಜಾ ಮೊಹಿನುದ್ದೀನ್‌ಖಾಜಿ ಮಸ್ಕಿ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.
ಪಕ್ಕದಲ್ಲಿರುವ ನಿರುಪಾದೀಶ್ವರ ಮಠದಲ್ಲಿ ಉರೂಸಿಗೆ ಆಗಮಿಸಿದ ಭಕ್ತಾದಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಂಗಾಪುರ, ಗುಡದೂರು, ಮಸ್ಕಿ, ಪರಾಪುರ, ಗೋನಾಳ, ಮೇರನಾಳ, ದೀನಸಮುದ್ರ ಮತ್ತಿತರ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.