ಗ್ರಾಪಂ ನೌಕರರ ಅನಿರ್ದಿಷ್ಟಾವಧಿ ಧರಣಿ
ರಾಯಚೂರು: ಗ್ರಾಮ ಪಂಚಾಯಿತಿ ನೌಕರರ ಅನುಮೋದನೆ, ಹೊಸ ಮತ್ತು ಬಾಕಿ ವೇತನ ಪಾವತಿಗೆ ಆಗ್ರಹಿಸಿ ಜಿಲ್ಲೆಯ ಹಲವೆಡೆಯ ಗ್ರಾಪಂ ನೌಕರರು ನಗರದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಸಿದ ಪ್ರತಿಭಟನಾಕಾರರು ಜಿಪಂ ತಲುಪಿ ಜಿಪಂ ಸಿಇಒಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲೆಯ 165 ಗ್ರಾಮ ಪಂಚಾಯಿತಿಗಳಲ್ಲಿ 1400ಕ್ಕೂ ಹೆಚ್ಚಿನ ಸಂಖ್ಯೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ವಿವಿಧ ಸವಲತ್ತು ನೀಡುವಲ್ಲಿ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ಸೌಲಭ್ಯ ಕಲ್ಪಿಸುತ್ತಿಲ್ಲ: ಗ್ರಾಮೀಣ ಭಾಗದಲ್ಲಿ ಕುಡಿವ ನೀರು, ಬೀದಿ ದೀಪ ವ್ಯವಸ್ಥೆ ಸೇರಿದಂತೆ ವಿವಿಧ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಪಂ ನೌಕರರ ಪಾತ್ರ ಮಹತ್ವದ್ದಾಗಿದೆ. ಆದರೆ ಜಿಲ್ಲಾಡಳಿತವು ಗ್ರಾಪಂ ನೌಕರರ ಬೇಡಿಕೆ ಮಾತ್ರ ಈಡೇರಿಸುತ್ತಿಲ್ಲ. ದಲಿತರು ಮತ್ತು ಹಿಂದುಳಿದವರೇ ಹೆಚ್ಚಾಗಿ ಈ ಕೆಲಸ ಕಾರ್ಯ ಮಾಡುತ್ತಿದ್ದು ಅವರಿಗೆ ಸರ್ಕಾರದ ಸೂಚನೆಯಂತೆ ಸೌಲಭ್ಯ ದೊರಕಿಸಲಾಗುತ್ತಿಲ್ಲ ಎಂದು ಟೀಕಿಸಿದರು.
2011ರಲ್ಲಿ ಗ್ರಾಪಂ ನೌಕರರು ಕನಿಷ್ಠ ಕೂಲಿ ಜಾರಿಗೆ ಹೋರಾಡಿದ ನಂತರ ಕೂಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರೂ ಈಗಲೂ ಜಿಲ್ಲೆಯ ಶೇ. 70ರಷ್ಟು ಗ್ರಾಪಂ.ಗಳ ನೌಕರರಿಗೆ ಹೊಸ ವೇತನ ನೀಡಿಲ್ಲ. ಕರ ಸಂಗ್ರಹಕಾರರ ಪಟ್ಟಿಯಲ್ಲಿ ಬಡ್ತಿಗೆ ಕಾದಿದ್ದ 13 ಜನರ ಪೈಕಿ ಮೂವರಿಗೆ ಮಾತ್ರ ಬಡ್ತಿ ನೀಡಿದ್ದು, ಇನ್ನುಳಿದವರಿಗೂ ಬಡ್ತಿ ನೀಡುವಂತೆ ಒತ್ತಾಯಿಸಿದರು.
ವೇತನ ಪಾವತಿಗೆ ಆಗ್ರಹ: ಕಳೆದ 10 ವರ್ಷಗಳಿಂದ ಬಿಲ್ ಕಲೆಕ್ಟರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದವರ ಎಲ್ಲ ದಾಖಲೆಗಳನ್ನು ಜಿಪಂ ಪರಿಶೀಲಿಸಿದ್ದು, ಜೇಷ್ಠತಾ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಗೊಳಿಸಬೇಕು. ಕಳೆದ 20ರಿಂದ 30 ತಿಂಗಳವರೆಗಿನ ಬಾಕಿ ವೇತನವನ್ನು ಹಾಗೂ ಹೊಸ ವೇತನವನ್ನೂ ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಎಲ್ಲ ಸಿಬ್ಬಂದಿ ಸೇವಾ ಪುಸ್ತಕ ಜಾರಿಗೊಳಿಸಬೇಕು. ಭವಿಷ್ಯ ನಿಧಿ ಸವಲತ್ತು ನೀಡಬೇಕು. ಬಿಲ್ ಕಲೆಕ್ಟರ್ ವೃಂದದಿಂದ ಲೆಕ್ಕ ಸಹಾಯಕ ಹಾಗೂ ಕಾರ್ಯದರ್ಶಿ ಗ್ರೇಡ್-2ಗೆ ಬಡ್ತಿ ನೀಡಬೇಕು. 13ನೇ ಹಣಕಾಸು ಆಯೋಗದ ಅನುದಾನದಲ್ಲಿ ನೀರು ಪೂರೈಕೆ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಯದಲ್ಲಿರುವ ಸಿಬ್ಬಂದಿಗೆ ವೇತನ ನೀಡಬೇಕೆಂದು ಒತ್ತಾಯಿಸಿದರು.
ಗ್ರಾಚ್ಯೂಟಿ, ಮತ್ತಿತರೆ ಸೌಲಭ್ಯಕ್ಕೆ ಆಗ್ರಹ: ಗ್ರಾಮ ಪಂಚಾಯಿತಿಯ ಎಲ್ಲ ನೌಕರರಿಗೆ ಸಮವಸ್ತ್ರ ನೀಡಬೇಕು. ಪಂಪ್ ಆಪರೇಟರ್ಗಳಿಗೆ ಸೈಕಲ್, ಬ್ಯಾಟರಿ ಒದಗಿಸಬೇಕು. ಗ್ರಾಪಂ ಸಿಬ್ಬಂದಿಗೆ ಜನಶ್ರೀ ವಿಮೆ ಜಾರಿಗೊಳಿಸಲು ಇಒಗಳು ಇಪಿಎಫ್ ಖಾತೆ ಪ್ರಾರಂಭಿಸಬೇಕು. ಬಾಕಿಯಿರುವ ಅನುಕಂಪ ನೇಮಕಾತಿ, ಮೃತ ಮತ್ತು ನಿವೃತ್ತ ನೌಕರರಿಗೆ ಗ್ರಾಚ್ಯೂಟಿ ಮತ್ತಿತರೆ ಸೌಲಭ್ಯ ದೊರಕಿಸಬೇಕೆಂದರು. ಗಣಕ ಯಂತ್ರ ನಿರ್ವಾಹಕರನ್ನು ಗ್ರಾಪಂ ನೌಕರರೆಂದು ಪರಿಗಣಿಸಬೇಕು. ಗ್ರಾಪಂಗಳಿಗೆ 2013- 14ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಅನುದಾನ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಹೋರಾಟ ಆರಂಭಿಸಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

