ತರಕಾರಿ ಮಾರುಕಟ್ಟೆಗೆ ಡಿಸಿ, ಶಾಸಕರ ಭೇಟಿ
ಕ.ಪ್ರ. ವಾರ್ತೆ , ರಾಯಚೂರು , ಮೇ 29
ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಹಾಗೂ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ಬೆಳಗ್ಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗೆ ಸಿಡಿಮಿಡಿಗೊಂಡು ನಗರಸಭೆಯ ಪರಿಸರ ಎಂಜಿನಿಯರ್ ಮಲ್ಲಿಕಾರ್ಜುನ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಸ್ವಚ್ಛತೆಗೆ ಗಮನ ನೀಡುವಂತೆ ತಾಕೀತು ಮಾಡಿದರು.
ಎಲ್ಲೆಂದರಲ್ಲಿ ಕಸದ ರಾಶಿ: ತರಕಾರಿ ಮಾರುಕಟ್ಟೆಯಲ್ಲಿ ಹಂದಿ, ಬಿಡಾಡಿ ದನಗಳ ಮುಕ್ತವಾಗಿ ಸಂಚರಿಸುವುದು ಹಾಗೂ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವುದನ್ನು ಕಂಡ ಜಿಲ್ಲಾಧಿಕಾರಿ ನಾಗರಾಜು, ನಗರಸಭೆಯ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸ್ವಚ್ಛತೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ಹಂದಿ, ಬಿಡಾಡಿ ದನಗಳ ಸಂಚಾರಕ್ಕೆ ಅವಕಾಶ ನೀಡಬಾರದು. ಜನಾರೋಗ್ಯದ ಹಿತದೃಷ್ಟಿಯಿಂದ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಆದೇಶಿಸಿದರು. ತರಕಾರಿ ಮಾರುಕಟ್ಟೆಯಲ್ಲಿ ಕಲುಷಿತ ನೀರು ನಿಲುಗಡೆಯಾಗದಂತೆ ಚರಂಡಿ ಸೌಲಭ್ಯ ಕಲ್ಪಿಸಬೇಕು. ಸದ್ಯ ನಿರ್ಮಿಸಿರುವ ಚರಂಡಿಗಳಲ್ಲಿ ಮಳೆ ಸುರಿದಾಗಲೆಲ್ಲ ನೀರು ಸರಾಗವಾಗಿ ಹರಿಯದಿರುವುದರಿಂದಲೇ ಮಾರುಕಟ್ಟೆ ಕೊಳಚೆ ಪ್ರದೇಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವರ್ತಕರಿಂದ ಕರ ವಸೂಲು: ತರಕಾರಿ ಮಾರುಕಟ್ಟೆಯ ಸುತ್ತಲಿನ ಪ್ರದೇಶದವರು ತರಕಾರಿ ಮಾರುಕಟ್ಟೆಯೊಳಗೆ ಕಸ ತಂದು ಸುರಿಯದಂತೆ ತಾಕೀತು ಮಾಡಬೇಕು. ಕಸ ಬಾರದಂತೆ ತಡೆಯಲು ಆವರಣ ಗೋಡೆ ನಿರ್ಮಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ನಗರಸಭೆಯು ಸ್ವಚ್ಛತೆಗೆ ಗಮನಹರಿಸುತ್ತಿಲ್ಲ. ತರಕಾರಿ ಮಾರುಕಟ್ಟೆಯ ನಿರ್ವಹಣೆಯ ಟೆಂಡರ್ ಪಡೆದವರು ಕೇವಲ ವರ್ತಕರಿಂದ ಕರ ವಸೂಲು ಮಾಡುತ್ತಿದ್ದಾರೆ. ಆದರೆ ಸ್ವಚ್ಛತೆ ಕಡೆಗಣಿಸಿದ್ದಾರೆಂದು ತರಕಾರಿ ಮಾರಾಟಗಾರರು ಜಿಲ್ಲಾಧಿಕಾರಿಗೆ ದೂರಿದಾಗ ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಸೂಚಿಸಿದರು.
ನಂತರ ಜಿಲ್ಲಾಧಿಕಾರಿಗಳು ನಗರದ ಸ್ಮಾರಕ ತೀನ್ ಕಂದೀಲ್ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ್, ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ನಗರಸಭೆಯ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

