ಅಡಕೆ ಆಮದು ನಿಲ್ಲಿಸಲು ಚಿಂತನೆ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.3
ಅಡಕೆ ಮರಕ್ಕೆ ತಗುಲುತ್ತಿರುವ ಹಳದಿರೋಗದಿಂದ ಕಂಗಾಲಾದ ಮಲೆನಾಡಿನ ಅಡಕೆ ಬೆಳೆಗಾರರಿಗೆ ಹಿತಾನುಭವ ನೀಡುವ ಸುದ್ದಿಯೊಂದು ಸದ್ಯವೇ ಹೊರಬೀಳಲಿದೆ.
ರಾಜ್ಯದ ಸಂಸದರ ನಿಯೋಗವು ಖುದ್ಧಾಗಿ ಪ್ರಧಾನಮಂತ್ರಿಯವರಿಗೆ ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದು, ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿದೆ. ಇದಕ್ಕೆ ಪ್ರಧಾನ ಮಂತ್ರಿಯವರೂ ಸಹ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದಲ್ಲದೇ, ಸಾರ್ಕ್ ರಾಷ್ಟ್ರಗಳ ಹೊರತಾಗಿ ಬೇರೆ ದೇಶಗಳಿಂದ ಬರುತ್ತಿರುವ ಅಡಕೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರದ ಕೃಷಿ ಮತ್ತು ವಾಣಿಜ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆಯೂ ಚಿಂತನೆ ನಡೆಸಿವೆ.
ಪ್ರಧಾನಿ ಸ್ಪಂದನೆ: ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಕುರಿತು ವಿವರಿಸಿದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡರಾದ ಮುನಿಯಪ್ಪ, ಆಸ್ಕರ್ ಫರ್ನಾಂಡಿಸ್ ಆದಿಯಾಗಿ ಎಲ್ಲಾ ಪಕ್ಷಗಳ ರಾಜ್ಯದ ಸಂಸದರು ಒಟ್ಟಾಗಿ ಚರ್ಚಿಸಿ ಪ್ರಧಾನ ಮಂತ್ರಿಗಳ ಬಳಿಗೆ ನಿಯೋಗ ಹೋಗಿದ್ದೆವು. ಪ್ರಧಾನ ಮಂತ್ರಿಯವರು ವಿವರವಾಗಿ ಮಾಹಿತಿ ಪಡೆದು ಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆಂದರು.
ಹಳದಿ ಎಲೆ ರೋಗದಿಂದಾಗಿ ಅಡಕೆ ತೋಟಗಳು ನಾಶವಾಗುತ್ತಿದ್ದು, ಅಡಕೆ ಬೆಳೆಗಾರ ಕಂಗಾಲಾಗಿದ್ದಾನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟೆವು. ಸಾಲ ಮಾಡಿ 10-12 ವರ್ಷ ಅಡಕೆ ಬೆಳೆದು ನಂತರ ಕೈ ಸುಟ್ಟುಕೊಳ್ಳುವ ಬೆಳೆಗಾರನ ರಕ್ಷಣೆಗೆ ಸರ್ಕಾರ ತಕ್ಷಣವೇ ಧಾವಿಸಿಬರಬೇಕಾಗಿದೆ. ಈ ನಿಟ್ಟಿನಲ್ಲಿ ಸಾಲ ಮನ್ನಾ ಸಾಧ್ಯವಿಲ್ಲದಿದ್ದರೂ ಸೂಕ್ತ ರೀತಿಯಲ್ಲಿ ಆರ್ಥಿಕ ನೀಡಲು ಅವಕಾಶವಿದ್ದು, ಸರ್ಕಾರ ಕೂಡಲೇ ಸಹಕಾರ ನೀಡಬೇಕೆಂದು ಎಲ್ಲಾ ಸಂಸದರು ಒಕ್ಕೊರಲಿನಿಂದ ಪ್ರಧಾನಿಯವರನ್ನು ಕೋರಿದ್ದಾಗಿ ಆಯನೂರು ಮಂಜುನಾಥ್ ತಿಳಿಸಿದರು.
ಬಜೆಟ್‌ನಲ್ಲಿ ಮಂಡನೆ: ಗೋರಖ್‌ಸಿಂಗ್ ವರದಿಯಲ್ಲಿ ಉಲ್ಲೇಖಿಸಲಾಗಿರುವ ಹಳದಿ ಎಲೆ ರೋಗ ಪೀಡಿತ ಪ್ರದೇಶಗಳಿಗೆ ಪರಿಹಾರ ಒದಗಿಸಿಕೊಡುವಂತೆ ಒತ್ತಡ ಹೇರಲಾಗಿದೆ ಎಂದ ಎಂವರು, ಏ.22ರಿಂದ ಮೇ 10ರ ವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ಆಗ ಬಜೆಟ್ ಮೇಲಿನ ಚರ್ಚೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬಹುತೇಕ ಆ ಸಮಯದಲ್ಲಿ ಅಡಕೆ ಬೆಳೆಗಾರರಿಗೆ ಸೂಕ್ತ ರೀತಿಯ ಪರಿಹಾರ ಘೋಷಣೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಳದಿ ಎಲೆ ರೋಗ ಪೀಡಿತ ಪ್ರದೇಶಗಳ ರೈತರು ಸಾಲದ ಸುಳಿಯಲ್ಲಿ ಸಿಲುಕಿರುವುದು ಹಾಗೂ ಇತ್ತೀಚೆಗೆ ಹೈಕೋರ್ಟ್ ಕೂಡ ಈ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರಧಾನಿಯವರಿಗೆ ದೀರ್ಘ ಪತ್ರವೊಂದನ್ನು ಬರೆದಿದ್ದರು. ಇದರ ಜೊತೆಗೆ ಬೇರೆ ಬೇರೆ ರಾಜ್ಯಗಳ 50 ಸಂಸದರು ಪ್ರಧಾನಿಗೆ ಪತ್ರ ಬರೆದಿದ್ದೆವು ಎಂದರು.
ಸಾರ್ಕ್ ಒಪ್ಪಂದದ ಅನ್ವಯ ಇತರೆ ದೇಶಗಳಲ್ಲಿ ಬೆಳೆದ ಅಡಕೆ ಇಲ್ಲಿಗೆ ರಫ್ತು ಮಾಡದಂತೆ ನಿರ್ಬಂಧ ಹೇರಬೇಕು ಹಾಗೂ ಬಾಂಗ್ಲಾ-ನೇಪಾಳದಿಂದ ಕಳ್ಳ ಮಾರ್ಗದಿಂದ ಬರುತ್ತಿರುವ ಅಡಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಲಾಗಿದೆ. ಕೃಷಿ ಸಚಿವ ಶರದ್ ಪವಾರ್ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮ ಅವರಿಗೂ ಈ ಬಗ್ಗೆ ಮನವಿ ಮಾಡಲಾಯಿತು ಎಂದು ಮಂಜುನಾಥ್ ಹೇಳಿದರು.
ಗೋಷ್ಠಿಯಲ್ಲಿ ವಿಪ ಸದಸ್ಯ ಎಂ.ಬಿ. ಭಾನುಪ್ರಕಾಶ್, ಸಿದ್ದರಾಮಣ್ಣ, ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದತ್ತಾತ್ರಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಡಿ.ಎಸ್. ಅರುಣ ಇದ್ದರು.
ಪ್ರಧಾನಿ ಭೇಟಿ ತಪ್ಪಿಸಿಕೊಂಡ ಬಿವೈಆರ್
ಅಡಕೆ ಬೆಳೆಗಾರರ ಹಿತರಕ್ಷಣೆ ದೃಷ್ಟಿಯಿಂದ ಕೇಂದ್ರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಚರ್ಚಿಸುವ ಹಾಗೂ ಪ್ರಧಾನಮಂತ್ರಿಯವರನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸುವ ಕುರಿತು ರಾಜ್ಯದ 28 ಸಂಸದರು, 12 ರಾಜ್ಯಸಭಾ ಸದಸ್ಯರಿಗೂ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು. ಆದರೆ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತ್ರ ಪ್ರಧಾನಮಂತ್ರಿಯನ್ನು ಭೇಟಿ ಮಾಡುವ ನಿಯೋಗದಲ್ಲಿ ಸೇರಿಕೊಂಡಿರಲಿಲ್ಲ.
ಅಡಕೆ ಬೆಳೆಗಾರರು ಹೆಚ್ಚಿನ ಸಂಖ್ಯೆ ಇರುವ ಪ್ರದೇಶಕ್ಕೆ ಸೇರಿದ ಸಂಸದರು ಏಕೆ ಬರಲಿಲ್ಲ ಎಂಬುದು ಗೊತ್ತಿಲ್ಲ. ಬೇರೆ ಏನೋ ಕಾರ್ಯ ಒತ್ತಡ ಇದ್ದಿರಬೇಕು ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಸಚಿವ ಮುನಿಯಪ್ಪ, ಆಸ್ಕರ್ ಫರ್ನಾಂಡಿಸ್ ನೇತೃತ್ವದಲ್ಲಿ, ಮೈಸೂರು ಸಂಸದ ವಿಶ್ವನಾಥ್, ಚಿತ್ರದುರ್ಗ ಸಂಸದ ಜನಾರ್ದನ ಸ್ವಾಮಿ, ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ, ನಾನು ಸೇರಿದಂತೆ 9 ಮಂದಿಯ ನಿಯೋಗ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿದೆವು. ಅಡಕೆ ಬೆಳೆಗಾರರ ಹಿತಕಾಯುವ ನಮ್ಮ ಪಕ್ಷಾತೀತ ಪ್ರಯತ್ನಕ್ಕೆ ಏಕೆ ಕೈ ಜೋಡಿಸಲಿಲ್ಲ ಎಂದು ನನಗೇನೂ ತಿಳಿಯದು ಎಂದು ಪತ್ರಕರ್ತರ ಪ್ರಶ್ನೆಗೆ ಆಯನೂರು ಮಂಜುನಾಥ್ ಉತ್ತರ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

