ಚಳವಳಿ ವಿಮುಖ ಕ್ಷೇತ್ರವಿದು
ಕ.ಪ್ರ.ವಾರ್ತೆ,ಶಿವಮೊಗ್ಗ, ಏ.4
ಜಿಲ್ಲೆಗೆ ನಾಲ್ಕನೇ ಮುಖ್ಯಮಂತ್ರಿ ಕೊಟ್ಟ ಕ್ಷೇತ್ರವಿದು. ಇಬ್ಬರು ಮಾಜಿ ಮುಖ್ಯಮಂತ್ರಿಗಳ ನಡುವೆ ಜಿದ್ದಾಜಿದ್ದಿ ಕಂಡ ಕ್ಷೇತ್ರವಿದು. ತಮ್ಮನ್ನು ಮಣಿಸುವರಿಲ್ಲ ಎಂದು ರಾಜ್ಯಾದ್ಯಂತ ಮೆರೆಯುತ್ತಿದ್ದ ಜಾತ್ಯತೀತ ಶಕ್ತಿಗಳಿಗೆ ಮಣ್ಣು ಮುಕ್ಕಿಸಿದ ಕ್ಷೇತ್ರವಿದು. ರಾಜ್ಯದ ಹಲವೆಡೆ ನಡೆಯುತ್ತಿದ್ದ ಚಳವಳಿಗಳಿಗೆ ವಿಮುಖವಾಗಿದ್ದ ಕ್ಷೇತ್ರವಿದು.
ಇದು ಶಿಕಾರಿಪುರ ವಿಧಾನಸಭಾ ಕ್ಷೇತ್ರ.
ಈ ಕ್ಷೇತ್ರದ ರಾಜಕೀಯ ಇತಿಹಾಸ ಆರಂಭವಾಗುವುದು 1962ರಿಂದ. ಅದಕ್ಕೂ ಮುಂಚೆ ಇದು ಸೊರಬ ಕ್ಷೇತ್ರದೊಂದಿಗೆ ಜಂಟಿಯಾಗಿತ್ತು. 1962ರಲ್ಲಿ ಮೀಸಲು ಕ್ಷೇತ್ರವಾಗಿ ಘೋಷಣೆಯಾಯಿತು. ಅಕ್ಕಪಕ್ಕದ ಸಾಗರ, ತೀರ್ಥಹಳ್ಳಿ, ಹೊಸನಗರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಬಲವಾದ ಗಾಳಿ ಬೀಸುತ್ತಿದ್ದರೂ ಅದರ ಪರಿಣಾಮ ಶಿಕಾರಿಪುರದ ಮೇಲೆ ಅಗಿದ್ದು ಕಡಿಮೆಯೇ. ಆದರೂ 1967ರಲ್ಲಿ ಜಿ. ಬಸವಣ್ಯಪ್ಪ ಅವರು ಸಮಾಜವಾದಿ ಪಕ್ಷದಿಂದ ಗೆದ್ದಿದ್ದರು. ಇದನ್ನು ಹೊರತುಪಡಿಸಿ 1983ರ ವರೆಗೆ ಇಲ್ಲಿ ಕಾಂಗ್ರೆಸ್ನದ್ದೇ ರಾಜ್ಯಬಾರ. ಜೆಪಿ ಚಳವಳಿ ಉತ್ತುಂಗದಲ್ಲಿಗಲೂ ಸಹ ಶಿಕಾರಿಪುರದಲ್ಲಿ ಜನತಾ ಪರಿವಾರ ಗೆಲ್ಲಲ್ಲಿಲ್ಲ.
23 ಸಾವಿರ ಅಂತರದಿಂದ ಗೆಲವು: 1972 ಹಾಗೂ 78ರಲ್ಲಿ ಆಯ್ಕೆಯಾದ ಕಾಂಗ್ರೆಸ್ನ ಕೆ. ವೆಂಕಟಪ್ಪ ಅವರು ಗುಂಡೂರಾವ್ ಸರ್ಕಾರದಲ್ಲಿ ಬಂದೀಖಾನೆ ಸಚಿವರೂ ಆಗಿದ್ದರು. ಆಗ ಶಿಕಾರಿಪುರ ಪುರಸಭೆ ಅಧ್ಯಕ್ಷರಾಗಿದ್ದ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ. ವೆಂಕಟಪ್ಪ ಅವರ ನಡುವೆ ಭಾರಿ ಜಿದ್ದಾಜಿದ್ದಿ ನಡೆದಿತ್ತು. ಒಮ್ಮೆ ಯಡಿಯೂರಪ್ಪ ಅವರ ಮೇಲೆ ಹಲ್ಲೆಯೂ ನಡೆದಿತ್ತು. ಅವತ್ತೇ ಹಠಸಾಧನೆಗೆ ತೊಡಗಿದ ಯಡಿಯೂರಪ್ಪ ಅವರು 1983ರ ಚುನಾವಣೆಯಲ್ಲಿ ಸಚಿವ ವೆಂಕಟಪ್ಪ ಅವರನ್ನು ಸುಮಾರು 23 ಸಾವಿರ ಮತಗಳ ಅಂತರದಿಂದ ಸೋಲಿಸಿದರು. ಆಗ ಶಿಕಾರಿಪುರದಲ್ಲಿ ಅರಳಿದ್ದ ಕಮಲವನ್ನು ಬಾಡಿಸಲು ಯಾರಿಂದಲೂ ಆಗಿರಲಿಲ್ಲ.
ತಿರುಗಿದ ಚಕ್ರ: ಆದರೆ ಸಮಯ ಹಾಗೆಯೇ ಇರುವುದಿಲ್ಲ. 1999ರ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಬಂಗಾರಪ್ಪ ಅವರ ಗಾಳಿ ಬಲವಾಗಿ ಬೀಸುತ್ತಿತ್ತು. ಶಿಕಾರಿಪುರ ಕ್ಷೇತ್ರದಲ್ಲಿ ಬಂಗಾರಪ್ಪ ಅವರು ಕಾಂಗ್ರೆಸ್ನಿಂದ ಯಾರಿಗೂ ಅಷ್ಟಾಗಿ ಪರಿಚಯವಿರದ ಮಹಾಲಿಂಗಪ್ಪ ಅವರನ್ನು ಕಣಕ್ಕಿಳಿಸಿದರು. ಸತತ ನಾಲ್ಕು ಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದ ಯಡಿಯೂರಪ್ಪ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಏಳುವರೆ ಸಾವಿರ ಮತಗಳ ಅಂತರದಿಂದ ಸೋಲು ಕಂಡರು.
1962ರಿಂದ ಇದೂವರೆಗೆ ಶಿಕಾರಿಪುರ ಕ್ಷೇತ್ರದಲ್ಲಿ ನಡೆದ ಎಲ್ಲಾ ಚುನಾವಣೆಗಿಂತಲೂ ಅತಿ ಹೆಚ್ಚು ಮತದಾನ ನಡೆದಿದ್ದು ಯಡಿಯೂರಪ್ಪ ಅವರು ಸೋಲು ಕಂಡ ವರ್ಷದಲ್ಲಿಯೇ ಎಂಬುದು ಕಾಕತಾಳೀಯ. ಇದಾದ ನಂತರ ಬಿಜೆಪಿಯು ಯಡಿಯೂರಪ್ಪರನ್ನು ವಿಧಾನಪರಿಷತ್ತಿಗೆ ಕರೆದುಕೊಂಡಿತು.
2004ರಲ್ಲಿ ಸುಲಭವಾಗಿ ಗೆದ್ದ ಯಡಿಯೂರಪ್ಪರಿಗೆ 2008ರ ಚುನಾವಣೆ ಸವಾಲಿನ ಚುನಾವಣೆಯಾಗಿತ್ತು. ಅವರನ್ನು ಮಣಿಸಲೇಬೇಕೆಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಎದುರಾಳಿಯಾಗಿ ಕಣಕ್ಕಿಳಿದಿದ್ದರು.
ಬಂಗಾರಪ್ಪ ವಿರುದ್ಧ ಗೆಲವು: ಆಗ ಅವರು ಸಮಾಜವಾದಿ ಪಕ್ಷದಲ್ಲಿದ್ದರು. ಬಂಗಾರಪ್ಪ ಅವರಿಗೆ ಬೆಂಬಲಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಆಗ ತಾನೇ ಒಂದು ವಾರ ಮುಖ್ಯಮಂತ್ರಿಯಾಗಿ ಕೆಳಗಿಳಿದಿದ್ದ ಯಡಿಯೂರಪ್ಪ ಅವರು 'ನನ್ನನ್ನು ಶಾಸಕ ಸ್ಥಾನಕ್ಕೆ ಅಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿ' ಎಂದು ಜನರ ಬಳಿ ಪ್ರಚಾರಕ್ಕಿಳಿದಿದ್ದರು. ಬಂಗಾರಪ್ಪ ಸಹ ಬಿರುಸಿನ ಪ್ರಚಾರ ನಡೆಸಿದ್ದರು. ಇಡೀ ರಾಜ್ಯದ ಜನತೆಯ ಕಣ್ಣನ್ನು ಇತ್ತ ತಿರುಗಿಸಿದ ಚುನಾವಣೆ ಅದು. ಆದರೆ ಅಂತಿಮವಾಗಿ ಯಡಿಯೂರಪ್ಪ ಅವರು 45 ಸಾವಿರ ಮತಗಳ ದಾಖಲೆ ಅಂತರದಿಂದ ವಿಜಯಿಯಾದರು.
ಈಗ: ಈಗ ಯಡಿಯೂರಪ್ಪ ಬಿಜೆಪಿಯಿಂದ ಹೊರಬಂದು ಕೆಜೆಪಿ ಸ್ಥಾಪಿಸಿದ್ದಾರೆ. ಅವರೇ ಶಿಕಾರಿಪುರದಲ್ಲಿ ಅಭ್ಯರ್ಥಿ. ಬಿಜೆಪಿಯು ಅಭ್ಯರ್ಥಿಯ ಹುಡುಕಾಟ ನಡೆಸಿದೆ. ಕಾಂಗ್ರೆಸ್ನಿಂದ ಒಂದು ಕಾಲದ ಯಡಿಯೂರಪ್ಪ ಅವರ ಒಡನಾಡಿ ಶಾಂತವೀರಪ್ಪಗೌಡ ಅವರೇ ಕಣಕ್ಕಿಳಿಯಬಹುದು. ನಾನೇ ಜೆಡಿಎಸ್ ಅಭ್ಯರ್ಥಿ ಎಂದು ನಿವೃತ್ತ ಅಧಿಕಾರಿ ಬಳಿಗಾರ್ ಓಡಾಡುತ್ತಿದ್ದಾರೆ. ಬಿಎಸ್ಆರ್ ಪಕ್ಷವೂ ಸಹ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಫಕೀರಪ್ಪ ಅವರನ್ನು ಸ್ಪರ್ಧೆಗಿಳಿಸಲಿದೆ.
ಯಡಿಯೂರಪ್ಪ ಅವರಿಗಿದು ಮಾಡು-ಮಡಿ ಚುನಾವಣೆ. ಅವರ ಹೊಸ ಕೆಜೆಪಿ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆ. ಹಾಗಾಗಿ ಈ ಕ್ಷೇತ್ರದ ಎಲ್ಲ ಅಭ್ಯರ್ಥಿಗಳಿಗೂ ಸವಾಲಿನ ಚುನಾವಣೆ ಆಗಲಿದೆ. ಆದರೆ ಮತದಾರನ ಮುಂದೆ ಇರುವ ಸವಾಲುಗಳೇ ಬೇರೆ.
ಚುನಾವಣೆ ಗೆದ್ದವರು ಪಕ್ಷ ಶೇ. ಮತದಾನ
1962 ವೀರಪ್ಪ ಐಎನ್ಸಿ 51.48
1967 ಜಿ. ಬಸವಣ್ಯಪ್ಪ ಎಸ್ಎಸ್ಪಿ 61.14
1972 ಕೆ. ವೆಂಕಟಪ್ಪ ಐಎನ್ಸಿ 59.20
1978 ಕೆ. ವೆಂಕಟಪ್ಪ ಐಎನ್ಸಿ 73.50
1983 ಬಿ.ಎಸ್. ಯಡಿಯೂರಪ್ಪ ಬಿಜೆಪಿ 73.74
1985 ಬಿ.ಎಸ್. ಯಡಿಯೂರಪ್ಪ ಬಿಜೆಪಿ 76.48
1989 ಬಿ.ಎಸ್. ಯಡಿಯೂರಪ್ಪ ಬಿಜೆಪಿ 77.47
1994 ಬಿ.ಎಸ್. ಯಡಿಯೂರಪ್ಪ ಬಿಜೆಪಿ 77.76
1999 ಮಹಾಲಿಂಗಪ್ಪ ಕಾಂಗ್ರೆಸ್ 83.17
2004 ಬಿ.ಎಸ್. ಯಡಿಯೂರಪ್ಪ ಬಿಜೆಪಿ 74.41
2008 ಬಿ.ಎಸ್. ಯಡಿಯೂರಪ್ಪ ಬಿಜೆಪಿ 77.81
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

