ಅಪೂರ್ಣ ಕ್ರೀಡಾಂಗಣ ಅನೈತಿಕ ತಾಣ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.4
ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಿರ್ಮಿಸುತ್ತಿರುವ 10 ಕೋಟಿ ರುಪಾಯಿ ವೆಚ್ಚದ ಕ್ರೀಡಾಂಗಣ ಕಾಮಗಾರಿ ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ರಾಜ್ಯದ ಎಲ್ಲಾ ವಿವಿಗಳಿಗೆ ನೀಡಿದಂತೆ ಈ ಕ್ರೀಡಾಂಗಣದ ಕಾಮಗಾರಿಗೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕುವೆಂಪು ವಿವಿಗೆ 10 ಕೋಟಿ ರುಪಾಯಿ ಹಣ ನೀಡಿತ್ತು. ಅದರಂತೆ ಅಂದಿನ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಶೇರಿಗಾರ್ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಇದೀಗ ಕಾಮಗಾರಿಗೆ ಪೂರ್ಣ ಪ್ರಮಾಣದ ಹಣ ಪೂರೈಸಲು ಸಾಧ್ಯವಾಗದ ವಿವಿ ಕಾಮಗಾರಿಗೆ ಬ್ರೇಕ್ ಹಾಕಿದೆ. ಸದ್ಯ ವಿಶ್ವವಿದ್ಯಾಲಯದಲ್ಲಿ ಕಾಮಗಾರಿಗೆ ಹಣ ಒದಗಿಸಲು ಸಾಧ್ಯವಿಲ್ಲದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಸರ್ಕಾರದಿಂದ ಹಣ ಮಂಜೂರಾದ ನಂತರ ಕಾಮಗಾರಿಗೆ ಮರು ಚಾಲನೆ ನೀಡಲಾಗುವುದು ಎಂಬುದು ವಿವಿ ಅಧಿಕಾರಿಗಳ ವಿಶ್ಲೇಷಣೆ.
ಅಕ್ರಮ- ಅನೈತಿಕ: ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಕ್ರೀಡಾಂಗಣದಲ್ಲಿ ಅಕ್ರಮ ಚಟುವಟಿಕೆಗಳು ಏಗಿಲ್ಲದೇ ಸಾಗುತ್ತಿದೆ. ಈ ಘಟನಾವಳಿಗಳ ಬಗ್ಗೆ ವಿವಿ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕಾಣದಂತೆ ಸುಮ್ಮನಿರುವುದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆ ಏನು: ಕೋಟ್ಯಂತರ ರುಪಾಯಿ ಯೋಜನೆಯೊಂದು ಮಣ್ಣು ಹಿಡಿಯುತ್ತಿದ್ದು, ಕ್ರೀಡಾಂಗಣ ಅಕ್ಷರಶಃ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಮೈದಾನದ ಸುತ್ತ- ಮುತ್ತ ಕೆಲವೆಡೆ ಗುಪ್ತ ಸ್ಥಳಗಳಿರುವುದರಿಂದ ಅಕ್ರಮ ಕೆಲಸಗಳು ಎಗ್ಗಿಲ್ಲದೇ ಸಾಗುತ್ತಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಸಿಗರೇಟ್ಪ್ಯಾಕ್ಗಳು, ಕ್ರೀಡಾಂಗಣದ ಆವರಣ ಸಂಪೂರ್ಣ ಹಳ್ಳ- ಗುಂಡಿಗಳಿಂದ ಕೂಡಿದ್ದು, ಸಂಜೆ ವೇಳೆ ವಾಯುವಿಹಾರ ಮಾಡುವುದಕ್ಕೂ ಭಯದ ವಾತಾವರಣ ಸೃಷ್ಟಿಯಾಗಿದೆ.
ಕ್ರೀಡಾಂಗಣಕ್ಕೆ ಬಳಸಿದ್ದ ಕಬ್ಬಿಣದ ಉಪಕರಣಗಳು ತುಕ್ಕು ಹಿಡಿಯುತ್ತಿದ್ದು, ಕ್ರೀಡಾಂಗಣದ ಪರಿಕರಗಳು ನಾಶವಾಗುವ ಹಂತ ತಲುಪುತ್ತಿವೆ.
ವಿವಿಗೂ ಗೊತ್ತು: ಈ ಬಗ್ಗೆ ಸಿಂಡಿಕೇಟ್ ಸದಸ್ಯರು ಹಲವು ಬಾರಿ ಸಭೆಯಲ್ಲಿ ಧ್ವನಿ ಎತ್ತಿದ್ದರೂ ಪ್ರಯೋಜನವಾಗಿಲ್ಲ. ನಿಕಟಪೂರ್ವ ಕುಲಪತಿಯೊಬ್ಬರು ಕಾಮಗಾರಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರಿಂದ ಕಾಮಗಾರಿ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿದೆ. ಈ ಸಂಬಂಧ ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ಆರೋಪಗಳ ಸುರಿಮಳೆಯನ್ನೆ ಹರಿಸಿದ್ದರು. ನಂತರ ಎಚ್ಚೆತ್ತ ವಿವಿಯ ಕುಲಪತಿ ಎಸ್.ಎ. ಬಾರಿ ಹಣ ದುರುಪಯೋಗ ಆಗಿರುವ ಬಗ್ಗೆ ಪ್ರೊ. ವೈದ್ಯ ನೇತೃತ್ವದ ಸಮಿತಿ ರಚಿಸಿ ಕೂಡಲೇ ವರದಿ ನೀಡುವಂತೆ ತಿಳಿಸಿದ್ದರು. ಈ ವರದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ತಿಳಿಸಲಾಗಿತ್ತು. ಆದರೆ, ಕುಲಪತಿಗಳು ಈ ಬಗ್ಗೆ ಕ್ರಮಕೈಗೊಳ್ಳದೆ ಇರುವುದು ವಿವಿಯ ದುರದೃಷ್ಟ ಎಂಬುದು ಸಿಂಡಿಕೇಟ್ ಸದಸ್ಯರ ಆರೋಪ.
ಈ ಬಗ್ಗೆ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ಸಿಂಡಿಕೇಟ್ ಸದಸ್ಯ ಎಸ್.ಪಿ. ದಿನೇಶ್, ಇದೊಂದು ದೊಡ್ಡ ಹಗರಣವಾಗಿದೆ. ಕ್ರೀಡಾಂಗಣದ ಕಾಮಗಾರಿಗೆಂದು ಬಿಡುಗಡೆಯಾದ ಹಣವನ್ನು ದುರುಪಯೋಗ ಮಾಡಿಕೊಂಡು ಕಾಮಗಾರಿಯನ್ನು ನೆನೆಗುದಿಗೆ ಬೀಳುವಂತೆ ಮಾಡಿದ್ದಾರೆ. ನಿಕಟಪೂರ್ವ ಕುಲಪತಿಯೊಬ್ಬರ ಅಧಿಕಾರಾವಧಿಯಲ್ಲಿ ಸಹ್ಯಾದ್ರಿ ಕಾಲೇಜಿನ ಸೈಟು ಹಂಚಿಕೆ, ಕಾಮಗಾರಿಗಳಿಗೆ ಸಂಬಂಧಿಸಿ ಎಷ್ಟೋ ಬಾರಿ ಸಭೆಯಲ್ಲಿ ಪ್ರಶ್ನಿಸಿದರೂ ಪ್ರತಿಕ್ರಿಯೆ ನೀಡಿಲ್ಲ. ಈಗಿನ ವಿವಿ ಕುಲಪತಿ ಪ್ರೊ. ಎಸ್.ಎ. ಬಾರಿ ಈ ಹಗರಣಕ್ಕೂ, ತಮಗೂ ಯಾವುದೇ ಸಂಬಂಧವಿಲ್ಲ. ಸದ್ಯ ಕಾಮಗಾರಿಗೆ ಹಣ ನೀಡಲೂ ವಿವಿಯಲ್ಲಿ ಹಣವಿಲ್ಲ ಎನ್ನುತ್ತಿದ್ದಾರೆ. ಮತ್ತೇನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
-ಮೋಹನ್ ಕುಮಾರ್. ಎನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

