ಬಿಜೆಪಿಗೆ ಎಂದಿಗೂ ಒಲಿಯದ ಭದ್ರಾವತಿ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.5
ಉಕ್ಕಿನ ನಗರಿ ಭದ್ರಾವತಿ ಬಿಜೆಪಿ ಪಾಲಿಗೆ ಮಾತ್ರ ಕಬ್ಬಿಣದ ಕಡಲೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಠೇವಣಿ ಉಳಿಸಿಕೊಳ್ಳಲೂ ಇಲ್ಲಿ ಪರದಾಡುವ ಸ್ಥಿತಿ
ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಭದ್ರನೆಲೆ ಎಂದು ಹೇಳಲಾಗುವ ಶಿವಮೊಗ್ಗದಿಂದ ಕೇವಲ 18 ಕಿಲೋಮೀಟರ್ ದೂರದಲ್ಲಿರುವ ಭದ್ರಾವತಿಯಲ್ಲಿ ಮಾತ್ರ ಬಿಜೆಪಿ ಗಾಳಿ ಎಂದಿಗೂ ಬೀಸಲೇ ಇಲ್ಲ.
ಅಚ್ಚರಿ ಎಂದರೆ, ಜನಸಂಘದ ಕಾಲದಿಂದ ಈವರೆಗೆ ಭದ್ರಾವತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ.
ಹಲವಾರು ತಂತ್ರಗಾರಿಕೆ: ಭದ್ರಾವತಿ ವಲಸಿಗರ ನಾಡೆಂಬ ಖ್ಯಾತಿ ಇದೆ. ಏಕೆಂದರೆ, ಇಲ್ಲಿ ಮೂಲ ನಿವಾಸಿಗಳಿಂದ ಹೊರ ಊರು, ಹೊರ ರಾಜ್ಯದಿಂದ ಬಂದು ನೆಲೆಸಿದವರ ಸಂಖ್ಯೆಯೇ ಹೆಚ್ಚು. ಇಲ್ಲಿರುವ ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳೇ ದಿಕ್ಕುದೆಸೆ. ಉಳಿದಂತೆ ಕೃಷಿಯೂ ಒಂದು ಹಂತದವರೆಗೆ ಚೆನ್ನಾಗಿಯೇ ಇದೆ. ಭದ್ರೆ ಇಲ್ಲಿನ ರೈತರಿಗೆ ಕೈಕೊಟ್ಟಿದ್ದು ಕಡಿಮೆ. ಇಂತಹ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕೆಂಬ ಪ್ರಯತ್ನದಲ್ಲಿ ಬಿಜೆಪಿ ಸಂಘಟನೆ ಮುಂಚಿನಿಂದಲೂ ಸಾಕಷ್ಟು ಪ್ರಯತ್ನ ಮಾಡಿಕೊಂಡೇ ಬಂತು. ಹಲವಾರು ತಂತ್ರಗಾರಿಕೆ ನಡೆಸಿತು. ತಿಪ್ಪರಲಾಗ ಹಾಕಿದರೂ ಇಲ್ಲಿನ ಜನ ಸೊಪ್ಪು ಹಾಕಲೇ ಇಲ್ಲ. ಬಿಜೆಪಿಯ ಅನೇಕ ಅಲೆಗಳು ಇಲ್ಲಿ ಕೆಲಸ ಮಾಡಿದ್ದಿಲ್ಲ. ರಾಜ್ಯದೆಲ್ಲೆಡೆ ಅಲೆ ಎಬ್ಬಿಸಿದ ಯಡಿಯೂರಪ್ಪ ಇಲ್ಲಿ ಬೆಳೆ ತೆಗೆಯಲು ಸಾಧ್ಯವಾಗದೇ ಹೋದರು.
1978ರ ಚುನಾವಣೆ ಜೆಪಿ ಚಳವಳಿಯ ಸಂದರ್ಭವದು. ಜನಸಂಘ ಜನತಾಪಕ್ಷದೊಂದಿಗೆ ವಿಲೀನಗೊಂಡು ಕಣಕ್ಕಿಳಿದಿತ್ತು. ಆ ಸಂದರ್ಭದಲ್ಲಿ ಅತ್ಯಧಿಕ ಮತ ಗಳಿಸಿತಾದರೂ ಗೆಲುವು ಕೈ ತಪ್ಪಿತು.
ಹಲವು ಪ್ರಯೋಗ: ಮುಂಚಿನಿಂದಲೂ ಭದ್ರಾವತಿಯಲ್ಲಿ ಸಂಘಟನೆ ಕಟ್ಟದೇ ಸುಮ್ಮನೆ ಕುಳಿತಿಲ್ಲ. ಜೊತೆಗೆ ಚುನಾವಣೆ ಸಂದರ್ಭದಲ್ಲೂ ಅನೇಕ ಪ್ರಯೋಗ ನಡೆಸಿದೆ. ಆದರೆ, ಫಲ ದೊರೆಯಲಿಲ್ಲ ಎಂದೇ ಹೇಳಬೇಕು. ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿರುವ ಭದ್ರಾವತಿಯಲ್ಲಿ ಕಾರ್ಮಿಕ ಹೋರಾಟದಲ್ಲಿ ತೊಡಗಿಕೊಂಡ ಆಯನೂರು ಮಂಜುನಾಥ್ ಅವರನ್ನು ಕಣಕ್ಕಿಳಿಸಿ ಪ್ರಯೋಗ ಮಾಡಲಾಯಿತು. ಭಾರತೀಯ ಮಜ್ದೂರ್ ಸಂಘವನ್ನು ಬಲಪಡಿಸಿ ಆ ಮೂಲಕ ದಾಳ ಉರುಳಿಸಲಾಯಿತು, ಅದೂ ಕೈಗೂಡಲಿಲ್ಲ. ನಂತರ ಆರಗ ಜ್ಞಾನೇಂದ್ರ ಅವರನ್ನು ಎಂಪಿಎಂ ಅಧ್ಯಕ್ಷರನ್ನಾಗಿ ಮಾಡಲಾಯಿತು, ಬಿಲ್ಕುಲ್ ಪ್ರಯೋಜನವಾಗಲೇ ಇಲ್ಲ. ಪಕ್ಷ ನೆಲಬಿಟ್ಟು ಮೇಲೇಳಲೇ ಇಲ್ಲ.
ಸಿಎಂ, ಡಿಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ, ಪ್ರಮುಖ ಕ್ಯಾಬಿನೆಟ್ ಸ್ಥಾನಮಾನ ಎಲ್ಲವೂ ಜಿಲ್ಲೆಯ ಬಿಜೆಪಿ ನಾಯಕರಿಗೆ ಒಲಿದು ಬಂದರೂ ಭದ್ರಾವತಿ ವಿಚಾರದಲ್ಲಿ ಅವರ್ಯಾರು ಮೂಗು ತೂರಿಸಲೇ ಇಲ್ಲ.
ಏನು ಕಾರಣ: ಬಿಜೆಪಿ ನೆಲೆಯೂರಲು ಕಾರ್ಮಿಕ ಸಂಘಟನೆ ಪ್ರಬಲವಾಗಿರುವುದು ಪ್ರಮುಖ ಕಾರಣ ಎಂದು ರಾಜಕೀಯ ಪಂಡಿತರ ವಿಶ್ಲೇಷಣೆ. ಎಡಪಂಥೀಯ ಧೋರಣೆ ಹೊಂದಿದ ಸಂಘಟನೆಗಳು ಪ್ರಬಲವಾಗಿರುವುದು ಒಂದು ಕಡೆಯಾದರೆ, ಬಿಜೆಪಿಯ ಪ್ರಭಾವಿ ಮುಖಂಡರು ಅಲ್ಲಿ ಬೆಳೆಯಲೇ ಇಲ್ಲ. ಜೊತೆಗೆ ಬೆಳೆಸಲೂ ಇಲ್ಲ ಎಂಬ ವಾದವಿದೆ.
ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರದಲ್ಲಿ ಮೊದಲಿನಿಂದಲೂ ಬಿಜೆಪಿ ಪ್ರಭಾವ ದಟ್ಟವಾಗಿತ್ತು. ನಂತರ ಬಂಗಾರಪ್ಪ ಒಮ್ಮೆ ಬಿಜೆಪಿಗೆ ಬಂದು ಹೋದ ಮೇಲೆ ಸಾಗರ, ಸೊರಬಕ್ಕೂ ಬಿಜೆಪಿ ವಿಸ್ತರಣೆಗೊಂಡಿತು. ಭದ್ರಾವತಿ ವಾತಾವರಣವೇ ಬೇರೆ. ಇನ್ನು ಇಲ್ಲಿನ ರಾಜಕೀಯ ವಾತಾವರಣ ಇನ್ನೊಂದು ರೀತಿ. ಇಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಬೆಳೆ ತೆಗೆದಿದ್ದೇ ಹೆಚ್ಚು.
ತುಲನೆ: ಬಿಜೆಪಿ ಸರ್ಕಾರ ಬಂದ ನಂತರ ಅಭಿವೃದ್ಧಿ ವಿಚಾರದಲ್ಲಿ ಶಿವಮೊಗ್ಗ ಚಿತ್ರಣ ಬದಲಾಯಿತು. ಆದರೆ, ಭದ್ರಾವತಿ ತನ್ನ ಹಳೆಯ ಛಾಪನ್ನು ಹಾಗೇ ಉಳಿಸಿಕೊಂಡು ಬಂದಿದೆ. ಅಭಿವೃದ್ಧಿ ದೃಷ್ಟಿಯಿಂದ ಶಿವಮೊಗ್ಗವನ್ನು ತುಲನೆ ಮಾಡುವ ಭದ್ರಾವತಿ ಜನ, ನಮ್ಮೂರು ಹೀಗೆ ಆಗಬೇಕೆಂದು ಹೇಳುತ್ತಾರೆ. ಆದರೆ ರಾಜಕೀಯ ಬದಲಾವಣೆ ಬಯಸರು.
ಅಂತಿಮವಾಗಿ ಮುಂಬರುವ ಚುನಾವಣೆಗೂ ಬಿಜೆಪಿ ಈ ಕ್ಷೇತ್ರದ ಬಗ್ಗೆ ಅಷ್ಟಾಗಿ ತಲೆಕೆಸಿಕೊಂಡಂತೆ ಕಂಡುಬರುತ್ತಿಲ್ಲ.
ಭದ್ರಾವತಿಯಲ್ಲಿ ಬಿಜೆಪಿ ಪುರಾಣ
1952 ಬಿಜೆಎಸ್ 20203 860
1957 ಬಿಜೆಎಸ್ 29523 912
1962 ಬಿಜೆಎಸ್ 40311 2051
1967 ---- ----
1972 ಬಿಜೆಎಸ್ 56839 6487
1978 ಜೆಎನ್ಪಿ 67085 29099
1983 ಬಿಜೆಪಿ 70202 6359(ವಿಶ್ವನಾಥ ಕೋಟಿ)
1985 ಬಿಜೆಪಿ 73572 11628(ಶಿವಣ್ಣಗೌಡ)
1989 ಬಿಜೆಪಿ 94394 8821(ನವನೀತ)
1994 ಬಿಜೆಪಿ 96279 16830(ನವನೀತ)
1999 ಬಿಜೆಪಿ 103426 11266(ಕದಿರೇಶ್)
- ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

