ಶಿವಮೊಗ್ಗ

ಬದನೆಹಾಳ್‌ನಲ್ಲಿ ಮುಂದುವರಿದ ಭಯ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಏ.8-
ಭದ್ರಾವತಿ ತಾಲೂಕಿನ ಬಂಡಿಗುಡ್ಡ ಅರಣ್ಯದಲ್ಲಿರುವ ಬದನೆಹಾಳ್ (ಬಳ್ಳಿಗೆರೆ) ಗ್ರಾಮದಲ್ಲಿ ಸೋಮವಾರವೂ ಭಯದ ವಾತಾವರಣ ಮುಂದುವರೆದಿದ್ದು, ನಿವಾಸಿಗಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ಭಾನುವಾರ ಇದೇ ಗ್ರಾಮದಲ್ಲಿ ಅರಣ್ಯ ಇಲಾಖೆಯು ಅರಣ್ಯ ಭೂಮಿ ಒತ್ತುವರಿ ತೆರವಿಗೆ ಪ್ರಯತ್ನ ನಡೆಸಿತ್ತು. ಆದರೆ, ಜಗ್ಗದ ರೈತರು ಅರಣ್ಯ ಇಲಾಖೆ ಕ್ರಮದ ವಿರುದ್ಧ ಸಿಡಿದೆದ್ದು, ಒಂದು ಬುಲ್‌ಡೋಜರ್ ಹಾಗೂ ಒಂದು ಬೈಕ್‌ಗೆ ಬೆಂಕಿ ಇಟ್ಟಿದ್ದರು. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಲ್ಲದೇ, ಒಂದು ಸುತ್ತು ಗಾಳಿಯಲ್ಲಿ ಗುಂಡು ಸಹ ಹಾರಿಸಿದ್ದರು. ಈ ವೇಳೆ ಒಬ್ಬ ರೈತನಿಗೆ ಗುಂಡು ತಗಲಿತ್ತು. 7 ಜನರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾಗಿದೆ.
60 ರೈತರ ಬಂಧನ: ನೂರಕ್ಕೂ ಹೆಚ್ಚು ರೈತರ ವಿರುದ್ಧ ಕೇಸು ದಾಖಲಿಸಲಾಗಿದ್ದು, ಮಹಿಳೆಯರು ಸೇರಿದಂತೆ ಸುಮಾರು 60 ರೈತರನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಪೊಲೀಸರು ಇನ್ನಷ್ಟು ಜನರನ್ನು ಬಂಧಿಸಲು ಮುಂದಾಗಿದ್ದು, ಬೆದರಿದ ನಿವಾಸಿಗಳು ತಲೆಮರೆಸಿಕೊಂಡಿದ್ದಾರೆ. ಬಹಳಷ್ಟು ಜನರು ಬೇರೆ ಊರಿಗೆ ಪಲಾಯನ ಮಾಡಿದ್ದಾರೆ.
ಚುನಾವಣಾ ನೀತಿ ಸಂಹಿತೆ: ಮುಂದಿನ ಕೆಲ ದಿನಗಳಲ್ಲಿ ಎದುರಾಗುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಆದ್ದರಿಂದ ರೈತರು ಸ್ಥಳೀಯ ಜನಪ್ರತಿನಿಧಿಗಳ ಬಳಿಗೆ ಹೋದರೂ ಬರೀ ಕೈಯಿಂದ ಹಿಂದಿರುಗುವಂತಾಗಿದೆ. ಜಿಲ್ಲೆಯ ಯಾವ ಜನಪ್ರತಿನಿಧಿಗಳನ್ನು ಕಂಡು ತಮ್ಮ ಅಳಲನ್ನು ತೊಡಿಕೊಂಡರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಜನಪ್ರತಿನಿಧಿಗಳ ಬಳಿ ಹೋಗಿ ಸಮಸ್ಯೆ ಪರಿಹರಿಸುವಂತೆ ಕೇಳಿದರೆ ನೀತಿ ಸಂಹಿತೆ ಇರುವುದರಿಂದ ನಾವುಗಳು ಇಂತಹ ಸಮಸ್ಯೆಗೆ ಸ್ಪಂದಿಸುವಂತಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ.
ನಮ್ಮ ಸಮಸ್ಯೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಹೇಳಿಕೊಂಡರೆ ಅವರು ಸಹ ಪರಿಹಾರ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ. ಇದೀಗ ನಮಗೆ ಆ ದೇವರೇ ದಿಕ್ಕು ತೊರಿಸಬೇಕು. ಜಮೀನುಗಳನ್ನು ಕಳೆದುಕೊಂಡರೆ ಸಾವೊಂದೇ ನಮಗುಳಿಯುವ ಪರಿಹಾರ ಎನ್ನುವುದು ಇಲ್ಲಿನ ಗ್ರಾಮಸ್ಥರ ಅಳಲು.
ಇವರೇನಂತಾರೆ: ಅರಣ್ಯ ಇಲಾಖೆಯವರು ಈ ರೀತಿಯ ದೌರ್ಜನ್ಯ ಮಾಡಿರುವು ಖಂಡನೀಯ. ಇಂತಹ ಕ್ರಮ ತೆಗೆದುಕೊಳ್ಳುವ ಮೊದಲು ದೊಡ್ಡ ಮ್ಟಟದ ಅಧಿಕಾರಿಗಳನ್ನು ಭೇಟಿ ಮಾಡಬೇಕಿತ್ತು. ಅದರೊಂದಿಗೆ ಸ್ಥಳೀಯವಾಗಿ ಅರಣ್ಯ ಗ್ರಾಮ ಸಮಿತಿ ಸಭೆ ನಡೆಸಬೇಕಿತ್ತು. ನಂತರ ಒತ್ತುವರಿ ತೆರವು ಮಾಡುವ ಅವಕಾಶವಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇದಾವುದನ್ನೂ ಮಾಡಿಲ್ಲ. ಅಲ್ಲದೇ, ಚುನಾವಣೆ ವೇಳೆ ತೆರವು ಕಾರ್ಯಚರಣೆ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಮಂಗಳವಾರ ಗ್ರಾಮದಲ್ಲಿ ಶಾಂತಿ ನಡೆಸುವಂತೆ ಅರಣ್ಯ ಅಧಿಕಾರಿಗಳು ಮತ್ತಿತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎನ್ನುತ್ತಾರೆ ರೈತ ಮುಖಂಡ ಕೆ.ಟಿ. ಗಂಗಾಧರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.