ಈ-ಟೆಂಡರ್ ವ್ಯವಸ್ಥೆ ಬದಲಾವಣೆ: ಖಂಡನೆ
ಕ.ಪ್ರ. ವಾರ್ತೆ, ಸಾಗರ, ಏ.9
ಇಲ್ಲಿನ ಎಪಿಎಂಸಿಯಲ್ಲಿ ಈ-ಟೆಂಡರ್ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದ ಕಿಯೋನಿಕ್ಸ್ ಸಂಸ್ಥೆ ಏಕಾಏಕಿ ಬದಲಾಯಿಸಿ ಮುಂಬೈನ ಎನ್ಸಿಡಿಎಕ್ಸ್ ಸಂಸ್ಥೆಗೆ ನೀಡಿರುವ ಕ್ರಮವನ್ನು ಖಂಡಿಸಿ ವರ್ತಕರು ಎಪಿಎಂಸಿ ಅಧ್ಯಕ್ಷ ಸಿ.ಜಿ. ಮಂಜಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ವರ್ತಕರು ಹಾಗೂ ಬೆಳೆಗಾರರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ-ಟೆಂಡರ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದನ್ನು ವರ್ತಕರ ಸಂಘ ಬೆಂಬಲಿಸಿಕೊಂಡು ಬಂದಿತ್ತು. ಆರಂಭದಿಂದಲೂ ಕಿಯೋನಿಕ್ಸ್ ಸಂಸ್ಥೆ ಈ-ಟೆಂಡರ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಬರುವ ಮೂಲಕ ಟೆಂಡರ್ ಪ್ರಕ್ರಿಯೆ ಶೀಘ್ರಗತಿಯಲ್ಲಿ ನಡೆಯುತ್ತಿತ್ತು. ಆದರೆ ಸೋಮವಾರದಿಂದ ಬದಲಾಯಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸರ್ವರ್ ತೊಂದರೆ: ಹಿಂದೆ ಕಿಯೋನಿಕ್ಸ್ ಸಂಸ್ಥೆ ಈ-ಟೆಂಡರ್ ವ್ಯವಸ್ಥೆಗೆ ಅಗತ್ಯವಾದ ತಾಂತ್ರಿಕ ಸೌಲಭ್ಯಗಳನ್ನು ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿಯೆ ಅಳವಡಿಸಿತ್ತು. ಇದರಿಂದ ಟೆಂಡರ್ ಪ್ರಕ್ರಿಯೆ ಯಾವುದೆ ಅಡ್ಡಿಯಿಲ್ಲದೆ ನಡೆಯುತ್ತಿತ್ತು. ಆದರೆ ಮುಂಬೈ ಮೂಲದ ಎನ್ಸಿಡಿಎಕ್ಸ್ ಸಂಸ್ಥೆ ಸರ್ವರನ್ನು ಮುಂಬೈನಲ್ಲಿ ಇರಿಸಿಕೊಂಡು ಈ-ಟೆಂಡರಿಂಗ್ ವ್ಯವಸ್ಥೆ ಮಾಡುತ್ತಿದೆ. ಅನೇಕ ಸಂದರ್ಭದಲ್ಲಿ ಸರ್ವರ್ ತೊಂದರೆ ಉಂಟಾಗಿ ವರ್ತಕರು ಅಡಕೆದರ ತಿಳಿಯಲು ಸಮಸ್ಯೆ ಎದುರಿಸುವಂತಾಗಿದೆ.
ಬದಲಾಯಿಸುವ ಮುನ್ನ ವರ್ತಕರಿಗೆ ಕಾಲಾವಕಾಶ ನೀಡಬೇಕಿತ್ತು. ಅಡಕೆಯಲ್ಲಿ 19 ವಿಧಾನವಿದ್ದು, ಹಾಲಿ ಗುತ್ತಿಗೆ ನಿರ್ವಹಿಸುತ್ತಿರುವ ಎನ್ಸಿಡಿಎಕ್ಸ್ ಸಂಸ್ಥೆ ಎಲ್ಲಾ ಅಡಕೆಗಳಿಗೆ ಒಂದೆ ದರ ನಿಗಧಿ ಮಾಡುತ್ತಿದೆ. ಇದರಿಂದ ವರ್ತಕರು ಹಾಗೂ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಜೊತೆಗೆ ವಿಳಂಬವೂ ಆಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವರ್ತಕರ ಸಂಘದ ಬಸವರಾಜ್, ಕೆ.ಎನ್. ಶೇಷಾದ್ರಿ, ಅಶ್ವಿನಿಕುಮಾರ್, ಪರಮೇಶ್ವರ್, ಎಚ್.ಎಸ್.ಕೆ. ಗೌಡರ್, ನಟರಾಜ್, ನಿರಂಜನ್, ಮಧುಕರ ನರಸಿಂಹ ಹೆಗಡೆ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

