ಶಿವಮೊಗ್ಗ

ಮುಹೂರ್ತಕ್ಕೆ ಕಾಯುತ್ತಿದ್ದಾರೆ...

Published On :

ಕ.ಪ್ರ ವಾರ್ತೆ, ಶಿವಮೊಗ್ಗ, ಏ.12
ನಾಮಪತ್ರ ಸಲ್ಲಿಕೆ ಚಟುವಟಿಕೆ ಇನ್ನೂ ಬಿಸಿ ಏರಿಲ್ಲ. ನಾಮಪತ್ರ ಸಲ್ಲಿಕೆಗೆ ಬಹುತೇಕ ಅಭ್ಯರ್ಥಿಗಳು ಯುಗಾದಿ  ಹಬ್ಬ ಮುಗಿಯುವುದನ್ನೇ ಕಾಯುತ್ತಿದ್ದಾರೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಸಲ್ಲಿಕೆಯಾಗಿದ್ದು  ಎರಡು ನಾಮಪತ್ರ ಮಾತ್ರ. ಅವೆರಡೂ ಸೊರಬ ಕ್ಷೇತ್ರದಲ್ಲಿಯೇ ಸಲ್ಲಿಕೆಯಾಗಿವೆ.
   ಮಾಜಿ ಸಚಿವ ಸತತ ಮೂರನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೊರಬ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಇವರು 2004ರಲ್ಲಿ ಹೊಸನಗರ ಕ್ಷೇತ್ರದಿಂದ, 2008ರಲ್ಲಿ ಸೊರಬ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ಸೊರಬ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೇ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿ ಸುರೇಶ್ ನಾಮಪತ್ರ ಸಲ್ಲಿಸಿದರು.
   ಅಧಿಸೂಚನೆಯಂತೆ ಏ.10ರಿಂದಲೇ ನಾಮಪತ್ರ ಸಲ್ಲಿಸಬಹುದಿತ್ತು. ಅಂದು ಅಮಾವಾಸ್ಯೆಯಾದ್ದರಿಂದ ಯಾರೂ  ನಾಮಪತ್ರ ಸಲ್ಲಿಸಲಿಲ್ಲ. 11ರಂದು ಯುಗಾದಿ ಪ್ರಯುಕ್ತ ಸರ್ಕಾರಿ ರಜೆ ಇತ್ತು. ಶನಿವಾರ ಹೊರತುಪಡಿಸಿದರೆ 14ರಂದು ಮತ್ತೆ ಅಂಬೇಡ್ಕರ್ ಜಯಂತಿ ಪ್ರಯುಕ್ತ ರಜೆ ಇದೆ.
ಅಭ್ಯರ್ಥಿಗಳು ಜ್ಯೋತಿಷಿಗಳ ಮೊರೆ ಹೋಗಿದ್ದು ಏ.15ರಂದು ಒಳ್ಳೆಯ ಮಹೂರ್ತ ಹುಡುಕಿಕೊಂಡಿದ್ದಾರೆ. ಅಂದೇ ಬಹುತೇಕ ನಾಮಪತ್ರಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ.
ಸಾಕಷ್ಟು ಅರ್ಜಿ: ಶುಕ್ರವಾರದವರೆಗೆ ಜಿಲ್ಲೆಯ ಎಲ್ಲಾ 7 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು 90 ಆಕಾಂಕ್ಷಿಗಳು ನಾಮಪತ್ರ  ಸಲ್ಲಿಕೆ ಸಂಬಂಧ ಅರ್ಜಿಯನ್ನು ಚುನಾವಣಾ ಕಚೇರಿಯಿಂದ ಪಡೆದಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 13, ಶಿವಮೊಗ್ಗ 20, ಭದ್ರಾವತಿ 19, ಸಾಗರ 21,  ಸೊರಬ 8, ತೀರ್ಥಹಳ್ಳಿ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಅರ್ಜಿ ಪಡೆದಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ 3  ಆಕಾಂಕ್ಷಿಗಳು ಮಾತ್ರ ಅರ್ಜಿ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಸಲು ಏ.17 ಕೊನೆಯ ದಿನವಾಗಿದೆ.
ಪಕ್ಷಗಳು ಸಜ್ಜು: ಬಿಜೆಪಿ ತಮ್ಮ ಪಕ್ಷದ ಯಾವ ಅಭ್ಯರ್ಥಿ ಯಾವತ್ತು ನಾಮಪತ್ರ ಸಲ್ಲಿಸುತ್ತಾರೆಂದು ದಿನಾಂಕಗಳನ್ನು ಪ್ರಕಟಿಸಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಕೆ.ಜಿ. ಕುಮಾರಸ್ವಾಮಿ, ಸಾಗರ ಕ್ಷೇತ್ರದಿಂದ ಶರಾವತಿ ಸಿ. ರಾವ್, ಭದ್ರಾವತಿ ಕ್ಷೇತ್ರದಿಂದ ಶಿವಾಜಿರಾವ್ ಸಿಂದ್ಯಾ ಅವರು 15ರಂದು ನಾಮಪತ್ರ ಸಲ್ಲಿಸುವರು.
ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್. ಈಶ್ವರಪ್ಪ, ತೀರ್ಥಹಳ್ಳಿ ಕ್ಷೇತ್ರದಿಂದ ಆರಗ ಜ್ಞಾನೇಂದ್ರ, ಸೊರಬದಿಂದ ಚಿಕ್ಕಾವಲಿ ನಾಗರಾಜಗೌಡ್ರು, ಶಿಕಾರಿಪುರದಿಂದ ಕೆ.ಎಸ್. ಮಂಜುನಾಥ್ 17ರಂದು ನಾಮಪತ್ರ ಸಲ್ಲಿಸುವರು.
ಕರ್ನಾಟಕ ಜನತಾ ಪಕ್ಷದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಅಭ್ಯರ್ಥಿ ರುದ್ರೇಗೌಡರು 15ರಂದು ನಾಮಪತ್ರ  ಸಲ್ಲಿಸುವರು. ಅಂದೇ ಶಿಕಾರಿಪುರದಲ್ಲಿ ಯಡಿಯೂರಪ್ಪ, ತೀರ್ಥಹಳ್ಳಿಯಲ್ಲಿ ಆರ್.ಎಂ. ಮಂಜುನಾಥಗೌಡರು ನಾಮಪತ್ರ ಸಲ್ಸಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.