ಶಿವಮೊಗ್ಗ

ಸೊರಬ ಅತಿ ಹೆಚ್ಚು, ಸಾಗರ ಕಡಿಮೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.17
ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಬುಧವಾರ ಎಲ್ಲಾ ಕ್ಷೇತ್ರಗಳಲ್ಲೂ ಚುನಾವಣಾಧಿಕಾರಿ ಕಚೇರಿಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ ಕಂಡುಬಂತು. ವಿವಿಧ ಪಕ್ಷಗಳ ಘಟಾನುಘಟಿಗಳು ಕಣಕ್ಕಿಳಿದರು.
 ಕೊನೆಯ ದಿನ ಜಿಲ್ಲೆಯಲ್ಲಿ 61 ಅಭ್ಯರ್ಥಿಗಳು ಒಟ್ಟು 102 ನಾಮಪತ್ರ ಸಲ್ಲಿಸಿದರು. ಬಿಜೆಪಿ- 16, ಬಿಎಸ್ಪಿ-5, ಕಾಂಗ್ರೆಸ್-10, ಎಸ್‌ಡಿಪಿಐ-1, ಕೆಜೆಪಿ-7, ಲೋಕಸತ್ತಾ-2, ಬಿಎಸ್‌ಆರ್ ಕಾಂಗ್ರೆಸ್- 7, ಎನ್‌ಸಿಪಿ-1, ಲೋಕಶಕ್ತಿ-1, ಜೆಡಿಯು-8, ಪಕ್ಷೇತರ-33 ನಾಮಪತ್ರಗಳು ಸಲ್ಲಿಕೆಯಾಗಿವೆ.
ಈ ಬಾರಿಯ ವಿಧಾನಸಭೆ ಚುನಾವಣೆಗೆ ಒಟ್ಟು 178 ನಾಮಪತ್ರಗಳು ಸಲ್ಲಿಕೆಯಾದಂತಾಗಿವೆ.
ಅತಿ ಹೆಚ್ಚು: ಸೊರಬ ಕ್ಷೇತ್ರದಲ್ಲಿ ಈ ಬಾರಿ ಅತಿ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿವೆ. ಇಲ್ಲಿ ಕೊನೆಯ ದಿನ ಸಲ್ಲಿಕೆಯಾದ 24 ನಾಮಪತ್ರಗಳೂ ಸೇರಿ ಒಟ್ಟು 39 ನಾಮಪತ್ರ ಸಲ್ಲಿಕೆಯಾಗಿವೆ. ಸಾಗರದಲ್ಲಿ ಕೊನೆದಿನ  3  ನಾಮಪತ್ರ ಸಲ್ಲಿಕೆಯಾಗಿದೆ. ಒಟ್ಟು 12 ನಾಮಪತ್ರಗಳಿವೆ. ಉಳಿದಂತೆ ಭದ್ರಾವತಿ- 28, ಶಿವಮೊಗ್ಗ -32, ತೀರ್ಥಹಳ್ಳಿ-25, ಶಿಕಾರಿಪುರ- 24, ಶಿವಮೊಗ್ಗ  ಗ್ರಾಮಾಂತರ ಕ್ಷೇತ್ರದಿಂದ 18 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಲಿಗಳು ಕಣಕ್ಕೆ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬುಧವಾರ ಭಾರಿ ಜನಸ್ತೋಮದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಜಯಲಕ್ಷ್ಮಿ, ಸಂಸದ ಆಯನೂರು ಮಂಜುನಾಥ್, ವಿಪ ಸದಸ್ಯ ಎಂ.ಬಿ. ಭಾನುಪ್ರಕಾಶ್, ಅನಂತಶಾಸ್ತ್ರಿ ಇದ್ದರು.
 ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರೂ ಸಹ ಭಾರಿ ಮೆರವಣಿಗೆಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇವರೊಂದಿಗೆ ಎಚ್.ಸಿ. ಸುರೇಶ್, ವಕೀಲ ಅನಿಲ್ ಕುಮಾರ್, ನಗರಸಭಾ ಸದಸ್ಯ ಕೇಬಲ್ ಬಾಬು ಇದ್ದರು.
 ವೈ.ಎಚ್. ನಾಗರಾಜ್ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸಂಯುಕ್ತ ಜನತಾದಳದಿಂದ ತ್ಯಾಜವಳ್ಳಿ ಮಂಜುನಾಥ್, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಮಹಮ್ಮದ್ ಇಸ್ಲಾಂಖಾನ್ ನಾಮಪತ್ರ ಸಲ್ಲಿಸಿದರು.
 ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇಲ್ಲಿ ಸಂಯುಕ್ತ ಜನತಾದಳದಿಂದ ಚಂದ್ರಾನಾಯ್ಕ್, ಬಿಎಸ್ಪಿಯಿಂದ ವೀರೇಶ್ ಕ್ಯಾತಿನಕೊಪ್ಪ ನಾಮಪತ್ರ ಸಲ್ಲಿಸಿದ್ದಾರೆ.

ಮದುಮಗನಿಗೆ ಅಡ್ಡಿ
ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಆಗಮಿಸಿದಾಗ ಅವರೊಂದಿಗೆ ಬಂದಿದ್ದ ಭಾರಿ ಸಂಖ್ಯೆಯ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು  ಹರಸಾಹಸ ಪಡಬೇಕಾಯಿತು.
 ಜೆಡಿಎಸ್ ಅಭ್ಯರ್ಥಿ ಶ್ರೀಕಾಂತ್ ಅವರು ನಗರಸಭೆ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ನೂಕುನುಗ್ಗಲು ಉಂಟಾಗಿದ್ದರಿಂದ ಡಿವೈಎಸ್ಪಿ ರಾಮಾನಾಯ್ಕ್ ಅವರು ತಾಳ್ಮೆ ಕಳೆದುಕೊಂಡು ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿದರು. ಮತ್ತೆ ವಾಪಸು ಬಂದ ಶ್ರೀಕಾಂತ್ ಜನರನ್ನು ಸಮಾಧಾನಪಡಿಸಿ ನಾಮಪತ್ರ ಸಲ್ಲಿಸಲು ತೆರಳಿದರು.
 ನಗರಸಭೆ ಪಕ್ಕದಲ್ಲೇ ಇರುವ ಎನ್‌ಡಿವಿ ಹಾಸ್ಟೆಲ್ ಆವರಣದಲ್ಲಿ ಬಿಜೆಪಿ ಬಹಿರಂಗ ಸಭೆ ಆಯೋಜಿಸಿದ್ದರಿಂದ ವಾಹನಗಳ ಸಂಚಾರ ನಿಲುಗಡೆ ಮಾಡಲಾಗಿತ್ತು. ಹಾಸ್ಟೆಲ್ ಪಕ್ಕದ ವೀರಶೈವ ಕಲ್ಯಾಣ ಮಂದಿರದಲ್ಲಿ ಮದುವೆ ನಡೆಯುತ್ತಿದ್ದ ಸ್ವತಃ ಮದುಮಗನಿಗೇ ಪೊಲೀಸರು ತೆರಳಲು ಅವಕಾಶ ನೀಡಲಿಲ್ಲ. ಸ್ವಲ್ಪ ಹೊತ್ತು ವಾಗ್ವಾದದ ನಂತರ ಮದುಮಗನನ್ನು ಕಳಿಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.