ರೇಲ್ವೆ ಸೇತುವೆಯಲ್ಲಿ ಹೈಡ್ರಾಮ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.17
ಬೆಂಗಳೂರು ಸ್ಫೋಟದ ಆತಂಕದ ನಡುವೆಯೇ ಶಿವಮೊಗ್ಗ ತುಂಗಾ ನದಿ ರೈಲ್ವೆ ಮೇಲ್ಸೇತುವೆಯಲ್ಲಿ ಬುಧವಾರ ರಾತ್ರಿ ಹೈಡ್ರಾಮವೊಂದು ನಡೆಯಿತು.
ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ರೈಲ್ವೆ ಸೇತುವೆ ಮೇಲೆ ಕಾಣಿಸಿಕೊಂಡಿದ್ದು, ಇದರಿಂದ ನಿಧಾನಗತಿಯಲ್ಲಿ ಬರುತ್ತಿದ್ದ ರೈಲು 15 ನಿಮಿಷ ರೈಲ್ವೆ ಸೇತುವೆ ಮೇಲೆ ನಿಲ್ಲುವಂತಾಯಿತು. ರಾತ್ರಿ 9.45ರ ಸುಮಾರಿಗೆ ಈ ಘಟನೆ ನಡೆದಿದ್ದು, ರೈಲಿನಲ್ಲಿದ್ದ ಪ್ರಯಾಣಿಕರು ಒಂದೆಡೆ ಆತಂಕಿತರಾದರೆ, ಘಟನೆಯನ್ನು ವೀಕ್ಷಿಸುತ್ತಿದ್ದವರು ಒಂದು ಕ್ಷಣ ಅವಕ್ಕಾಗಿ ಹೋದರು. ರೈಲಿನಿಂದ ಇಳಿಯಲೂ ಆಗದೇ ಹೊರಗೆ ಏನಾಗುತ್ತದೆ ಎಂದು ತಿಳಿಯಲಾಗದೆ ರೈಲಿನಲ್ಲಿದ್ದ ಪ್ರಮಾಣಿಕರು ಒಂದಿನಿತು ಅದುರಿಹೋದರು.
ಇಬ್ಬರು ಅಪರಿಚಿತರು: ಆಗಿದ್ದಿಷ್ಟು, ಬೆಂಗಳೂರಿನಿಂದ ಶಿವಮೊಗ್ಗ ಕಡೆಗೆ ಬಂದ ರೈಲು ರಾತ್ರಿ 9.40ರ ಸುಮಾರಿಗೆ ಶಿವಮೊಗ್ಗ ರೈಲ್ವೆ ಹಳೇ ನಿಲ್ದಾಣ (ಮಹದೇವಿ)ಗೆ ಆಗಮಿಸಿತು. ನಂತರ ಕೆಲ ನಿಮಿಷಗಳ ನಂತರ ಮುಂದಿನ ರೈಲ್ವೆ ಸೇತುವೆಯತ್ತ ಆಗಮಿಸಿತು. ಈ ಸಂದರ್ಭದಲ್ಲಿ ರೈಲು ಚಾಲಕ ಎದುರಿಗೆ ಇಬ್ಬರು ವ್ಯಕ್ತಿಗಳಿರುವುದನ್ನು ಗಮನಿಸಿ ರೈಲನ್ನು ನಿಲ್ಲಿಸಿದ್ದಾರೆ.
ಕೆಲಹೊತ್ತು ಈ ಹೈಡ್ರಾಮ ನಡೆದಿದ್ದು, ಆ ವ್ಯಕ್ತಿಗಳು ನಂತರ ಅಲ್ಲೇ ಇರುವ ಸೇತುವೆ ಮೇಲಿನ ಪಾರ್ಕಿಂಗ್ ಸ್ಥಳದಲ್ಲಿ ಅವಿತಿದ್ದಾರೆ. ರೈಲು ಮುಂದೆ ಸಾಗಿಬಂತು.
ಧರ್ಮದೇಟು: ರೈಲು ಸೇತುವೆ ದಾಟುತ್ತಿದ್ದಂತೆ ಅಲ್ಲಿ ಜಮಾಯಿಸಿದ್ದ ಸಾರ್ವಜನಿಕರು ರೈಲು ತಡೆದ ಅಪರಿಚಿತರನ್ನು ಹುಡುಕಲು ಮುಂದಾದರು. ಕೆಲವರು ರೈಲ್ವೆ ಹಳಿ ಮೇಲೆ ತೆರಳಿ ಇಬ್ಬರನ್ನು ಹಿಡಿದು ತಂದರು.
ಈ ಸಂದರ್ಭದಲ್ಲಿ ಇಬ್ಬರು ಅಪರಿಚಿತರನ್ನು ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದರಲ್ಲದೇ, ರೈಲು ತಡೆದು ನಿಲ್ಲಿಸಿದ್ದಕ್ಕೆ ವಿವರಣೆ ಪಡೆಯುವ ಪ್ರಯತ್ನ ಮಾಡಿದರು.
ಈ ಬೆಳವಣಿಗೆಯ ನಡುವೆ ಒಬ್ಬ ವ್ಯಕ್ತಿ ತನ್ನ ಬಳಿ ಇದ್ದ ಕಟಿಂಗ್ ಪ್ಲಯರ್ನ್ನು ಜೇಬಿನಿಂದ ತೆಗೆದು ಕತ್ತಲಲ್ಲಿ ಒಗೆದಿದ್ದು ಅಲ್ಲಿದ್ದ ಸಾರ್ವಜನಿಕರನ್ನು ಕೆರಳಿಸಿತು. ಅಷ್ಟೇ ಅಲ್ಲದೇ, ರೈಲ್ವೆ ಸೇತುವೆಯಲ್ಲಿ ಅನುಮಾನಾಸ್ಪದವಾಗಿ ಚಟುವಟಿಕೆ ನಡೆಸಿದ್ದರ ಸಂಶಯವೂ ವ್ಯಕ್ತವಾಯಿತು.
ಇಷ್ಟರಲ್ಲೇ ಬೆಂಗಳೂರು ಕಡೆಗೆ ಹೊರಟ ಎಕ್ಸ್ಪ್ರೆಸ್ ರೈಲು ಇದೇ ಮಾರ್ಗವಾಗಿ ಸಾಗಿಬಿಟ್ಟಿತು.
ರೈಲು ಸೇತುವೆಯನ್ನು ದಾಟುವವರೆಗೆ ಸಾರ್ವಜನಿಕರು ಉಸಿರುಬಿಗಿ ಹಿಡಿದಿದ್ದರು. ಸೆರೆ ಸಿಕ್ಕ ಖದೀಮರು ಅನಪೇಕ್ಷಿತ ಚಟುವಟಿಕೆ ನಡೆಸಿ ಅವಘಡ ಸಂಭವಿಸಿಬಿಟ್ಟೀತೆಂಬ ಆತಂಕ ಮನೆ ಮಾಡಿತು. ಆದರೆ, ರೈಲು ಸರಾಗವಾಗಿ ಸಾಗಿತು.
ಗೊಂದಲದ ಹೇಳಿಕೆ: ಭದ್ರಾವತಿಯ ಆರಿಫ್ ಎಂದು ಹೇಳಿಕೊಂಡ ಒಬ್ಬ ನಂತರ ತನ್ನ ಹೆಸರು ಆರಿಫ್ ಅಲ್ಲ ಅಸ್ಲಂ ಎಂದ.
ತಾನು ರೈಲ್ವೆ ಸೇತುವೆ ಪ್ಲಾಟ್ಫಾರಂ ಮೇಲೆ ಮಲಗಲು ಬಂದಿದ್ದೆ ಎಂದ. ಮತ್ತೊಬ್ಬ ಕುಣಿಗಲ್ನ ಮೋಹನ. ಈತವೂ ಸಹ ಸುಮ್ಮನೆ ನಡೆದು ಬಂದೆ, ನನಗೇನು ತಿಳಿಯದು ಎಂದು ಹೇಳಿದ್ದು ಸಾರ್ವಜನಿಕರನ್ನು ಕೆರಳಿಸಿತು. ಇದರಿಂದಾಗಿ ಈ ಇಬ್ಬರು ಸಾಕಷ್ಟು ಧರ್ಮದೇಟು ತಿನ್ನಬೇಕಾಗಿಬಂತು.
ಪೊಲೀಸರ ವಶಕ್ಕೆ: ಇಷ್ಟರಲ್ಲಾಗಲೇ ಘಟನೆಯ ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ಅಪರಿಚಿತ ವ್ಯಕ್ತಿಗಳಿಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಇವರು ಸರಗಳ್ಳರೆಂಬ ಶಂಕೆ ವ್ಯಕ್ತವಾದರೆ, ಮತ್ತೊಂದು ಕಡೆ ರೈಲ್ವೆ ಹಳಿ ಸ್ಫೋಟಿಸಲು ಸಂಚುರೂಪಿಸಿದ್ದರೆ ಎಂಬ ಗುಮಾನಿಯೂ ಎದ್ದಿದ್ದರಿಂದ ಕೆಲಕಾಲ ಪರಿಸ್ಥಿತಿ ಗೊಂದಲಮಯವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

