ಶಿವಮೊಗ್ಗ

ಪ್ರಚಾರಕ್ಕೆ ರಾಷ್ಟ್ರೀಯ ನಾಯಕರ ಆಗಮನ

Published On :

ಕ.ಪ್ರ.ವಾರ್ತೆ,  ಶಿವಮೊಗ್ಗ,   ಏ.21
ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಜಿಲ್ಲೆಗೆ ಪಕ್ಷದ ರಾಷ್ಟ್ರೀಯ ನಾಯಕರು ಆಗಮಿಸುತ್ತಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಆದಿಯಾಗಿ, ವಿವಿಧ ಹಿರಿಯ ಶ್ರೇಣಿ ನಾಯಕರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಿಸಿಎಂ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ನಾಯಕರ ಆಗಮನದಿಂದ ಪಕ್ಷಕ್ಕೆ ಹೆಚ್ಚಿನ ವರ್ಚಸ್ಸು ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜನಾಥ್ ಸಿಂಗ್ ಭಾಷಣ: ಏಪ್ರಿಲ್ 22ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸಾಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು. ಇನ್ನು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ್ ಜೋಷಿ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿಯಲ್ಲಿ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂದರು.
ಏ.26ರಂದು ನಗರದ ಎನ್‌ಇಎಸ್ ಮೈದಾನದಲ್ಲಿ ಬಿಜೆಪಿ ಬಹಿರಂಗ ಸಭೆ ಏರ್ಪಡಿಸಿದ್ದು, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಸ್ವರಾಜ್ ಹಾಗೂ ಪಕ್ಷದ ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸೋಲು- ಗೆಲವು ಸಹಜ: 28ರಂದು ರಾಜ್ಯಸಭೆ ವಿರೋಧ ನಾಯಕ ಅರುಣ್ ಜೇಟ್ಲಿ ಆಗಮಿಸಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಷ್ಟ್ರೀಯ ಮುಖಂಡರು ಹಾಗೂ ರಾಜ್ಯದ ಪ್ರಮುಖರು ಪ್ರಚಾರ ಕಾರ್ಯದಲ್ಲಿ ಭಾಗವಹಿಸುವರು ಎಂದು ಹೇಳಿದರು.
ಬಿಜೆಪಿ ಚುನಾವಣೆಗೆ ಪ್ರಾಮುಖ್ಯತೆ ನೀಡುತ್ತದೆ. ಅದರ ಸೋಲು, ಗೆಲುವು ನಂತರದು. ಆದರೂ ಸಹ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಎಂದ ಮೇಲೆ ಸೋಲು ಗೆಲುವು ಇರುತ್ತದೆ. ಅದನ್ನು ಜನ ತೀರ್ಮಾನ ಮಾಡುತ್ತಾರೆ. ಒಂದೊಮ್ಮೆ ಚುನಾವಣೆಯಲ್ಲಿ ಸೋತಾಗ ಯಾಕಾಗಿ ಸೋತೆವು, ವೈಯಕ್ತಿಕ ದೋಷಗಳೇನು ಎಂದು ಹುಡುಕಬೇಕಾಗುತ್ತದೆ ಎಂದರು.
ಅಭಿವೃದ್ಧಿಯೇ ಶ್ರೀರಕ್ಷೆ: ಬಿಜೆಪಿ ಬಿಟ್ಟು ಹೋಗಿದ್ದ ಕೆಲ ಮುಖಂಡರು ಮತ್ತೆ ಬಿಜೆಪಿಗೆ ಮರಳುತ್ತಿರುವುದು ಪಕ್ಷಕ್ಕೆ ಮತ್ತಷ್ಟು ಬಲಬಂದಿದೆ. ಹೊಸದಾಗಿ ಬಂದ ಕಾರ್ಯಕರ್ತರು ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು, 60 ವರ್ಷಗಳಿಂದ ಅಧಿಕಾರ ಚುಕ್ಕಾಣಿ ಹಿಡಿದ ಆಡಳಿತ ಮಾಡಿರುವ ಕಾಂಗ್ರೆಸ್ ಮಾಡದಿರುವ ಕೆಲಸವನ್ನು ಬಿಜೆಪಿ 5 ವರ್ಷದಲ್ಲಿ ಮಾಡಿದೆ. ಇದೇ ಪಕ್ಷಕ್ಕೆ ಶ್ರೀರಕ್ಷೆ ಎಂದರು.
ಬಿಜೆಪಿ ಹಾಲಿದ್ದಂತೆ. ಹೊರಗಡೆಯಿಂದ ಬರುವ ಹೊಸ ಕಾರ್ಯಕರ್ತರು ಸಕ್ಕರೆ ಇದ್ದಂತೆ. ಹಾಲು ಸಕ್ಕರೆ ಸೇರಿದರೆ ಒಳ್ಳೆಯ ಸಿಹಿ ಸಿಗುತ್ತದೆ. ಅದೇ ರೀತಿ ಪಕ್ಷ ಕೂಡ ಭದ್ರವಾಗಿದೆ. ಒಂದೊಮ್ಮೆ ಸಿಹಿ ಹೆಚ್ಚಾದರೂ ತೊಂದರೆ ಇಲ್ಲ. ಸಿಹಿ ಇದ್ದಷ್ಟು ಇರುವೆಗಳು ಬರುವುದು ಏರಿಕೆಯಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಗೆ ಬಹುಮತ: ನಗರದ ಮೆಹದಿ ನಗರ, ಟ್ಯಾಂಕ್‌ಮೊಹಲ್ಲಾ ಸೇರಿದಂತೆ ಇತರ ಮುಸ್ಲಿಂ ಬಡಾವಣೆಗಳಲ್ಲಿ ಮುಸ್ಲಿಮರು ಉತ್ತಮ ಬೆಂಬಲ ನೀಡುತ್ತಿದ್ದಾರೆ. ಕ್ರೈಸ್ತ ಸಮುದಾಯದ ಪ್ರಮುಖರು ಬಿಜೆಪಿಗೆ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ ಅವರು, 5 ವರ್ಷಗಲ್ಲಿ ಪಕ್ಷ ಮಾಡಿದ ಸಾಧನೆಯ ಕಂಡು ಜನ ಈ ಬಾರಿ ಬಹುಮತ ನೀಡುತ್ತಾರೆ ಎಂದರು.
ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಥಳೀಯ ನಗರ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 9 ಅಭ್ಯರ್ಥಿಗಳು ಹಾಗೂ ಕೆಜೆಪಿಯ ನಗರ ಪ್ರಧಾನ ಕಾರ್ಯದರ್ಶಿ ರವಿ ಹಾಗೂ ತಂಡ, ಹಕ್ಕಿಪಿಕ್ಕಿ ರಾಜ್ಯಾಧ್ಯಕ್ಷೆ ಮಹದೇವಿ ಸೇರಿದಂತೆ ಸುಮಾರು 30 ಜನ ಬಿಜೆಪಿಗೆ ಸೇರ್ಪಡೆಗೊಂಡರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಸೋಮಶೇಖರ್, ಪದ್ಮನಾಭ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.