ರೈತರಿಗೆ ಶೇ.4 ಬಡ್ಡಿ ಸಾಲ: ಸಲಹೆ ನೀಡಿದ್ದು ನಾನೇ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಏ.22
ರೈತರಿಗೆ ಶೇ.4 ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ಬರುವುದಕ್ಕೆ ತಮ್ಮ ಸಲಹೆಯೇ ಕಾರಣ. ಇದಕ್ಕೆ ಕೆ.ಎಸ್. ಈಶ್ವರಪ್ಪರೇ ಸಾಕ್ಷಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಪ್ರತಿಪಾದಿಸಿದರು.
ಮಂಗಳವಾರ ಸಂಜೆ ಸಾಗರದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವಿದ್ದಾಗ ಹಣಕಾಸು ಸಚಿವರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ರೈತರಿಗೆ ಶೇ.4ರ ಬಡ್ಡಿ ದರದಂತೆ ಸಾಲ ನೀಡಲು ತಿಳಿಸಿದ್ದೆ. ತಮ್ಮ ಬಜೆಟ್ನಲ್ಲಿ ಅವರು ಇದನ್ನು ಅಳವಡಿಸಿದರು. ನಂತರದ ಇದೇ ರೀತಿಯ ಯೋಜನೆಯನ್ನು ಬಿಜೆಪಿ ಸರ್ಕಾರವಿದ್ದ ಇತರೆ ರಾಜ್ಯಗಳಲ್ಲಿಯೂ ಜಾರಿ ಮಾಡಲಾಯಿತು ಎಂದರು.
ಈ ಬಡ್ಡಿ ದರ ಮುಂದಿನ ದಿನಗಳಲ್ಲಿ ಶೇ.1, ನಂತರ ಶೂನ್ಯ ದರಕ್ಕೆ ಇಳಿಯಿತು ಎಂದು ನೆನಪಿಸಿದರು.
ಬಿಎಸ್ವೈ ಬಿಡಬಾರದಿತ್ತು: ಬಿ.ಎಸ್. ಯಡಿಯೂರಪ್ಪ ಅವರು ಐದು ವರ್ಷ ಮುಖ್ಯಮಂತ್ರಿಯಾಗಿರಲಿ ಎಂದು ಅವರನ್ನು ಅಧಿಕಾರಕ್ಕೆ ತಂದೆವು. ದುರಾದೃಷ್ಟಕರ ಸಂದರ್ಭದಲ್ಲಿ ಅವರು ರಾಜಿನಾಮೆ ನೀಡಬೇಕಾಯಿತು ಎಂದ ರಾಜನಾಥ ಸಿಂಗ್, ಅವರ ವಿರುದ್ಧ ನಾವು ಯಾವ ಆರೋಪವನ್ನೂ ಮಾಡಲಿಲ್ಲ. ಲೋಕಾಯುಕ್ತರು ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು. ಆದ್ದರಿಂದಲೇ ಅವರ ರಾಜಿನಾಮೆ ಕೇಳಬೇಕಾಯಿತು ಎಂದರು.
ಆರೋಪ ಪಟ್ಟಿಯಲ್ಲಿ ಯಾರ ಹೆಸರು ಇರುತ್ತದೆಯೋ ಅವರು ಅಧಿಕಾರದಲ್ಲಿರುವಂತಿಲ್ಲ ಎಂಬುದು ಬಿಜೆಪಿ ಪಾಲಿಸುತ್ತಿರುವ ಒಂದು ಆರೋಗ್ಯಕರ ಸಂಪ್ರದಾಯ. ಆದರೆ ನಂತರ ಅವರು ಬಿಜೆಪಿ ಬಿಡಬಾರದಿತ್ತು. ಅವರು ಆರೋಪಮುಕ್ತರಾದ ನಂತರ ಖಂಡಿತಾ ಅವರಿಗೆ ಮತ್ತೆ ಅಧಿಕಾರ ನೀಡುತ್ತಿದ್ದೆವು ಎಂದು ಅವರು ಹೇಳಿದರು.
ಕಾಂಗ್ರೆಸ್ ನಿಷ್ಕ್ರಿಯ: ಸುಮಾರು 50 ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ ಎಂದು ಟೀಕಿಸಿದ ಅವರು, ರೈತರು, ಬಡವರು, ನಿರುದ್ಯೋಗಿಗಳ ಬಗ್ಗೆ ಅವರಿಗೆ ಚಿಂತೆಯೇ ಇರಲಿಲ್ಲ. ವಾಜಪೇಯಿ ಸರ್ಕಾರವಿದ್ದಾಗ ಗ್ಯಾಸ್ ಸಿಲಿಂಡರ್ ದರ ಎಷ್ಟಿತ್ತು. ಈಗ ಎಷ್ಟಿದೆ ಎಂದು ನೋಡಿದರೆ ಗೊತ್ತಾಗುತ್ತದೆ ಎಂದು ರಾಜನಾಥ ಸಿಂಗಗ್ಟೀಕಿಸಿದರು.
ಗುಜರಾತ್ನ ನರೇಂದ್ರ ಮೋದಿ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ ಎಂದು 2008ರಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷರಾಗಿರುವ ರಾಜೀವ್ಗಾಂಧಿ ಫೌಂಡೇಶನ್ ಹೇಳಿತ್ತು. ಎಲ್ಲೇ ಆಗಲಿ ಉತ್ತಮ ಆಡಳಿತ ಕೊಡುವುದು ಬಿಜೆಪಿಗೆ ಮಾತ್ರ ಸಾಧ್ಯ ಎಂದು ಸಮೀಕ್ಷೆಗಳು ಹೇಳುತ್ತಿವೆ ಎಂದ ಅವರು, ಮುಂದೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ರಾಜ್ಯದಲ್ಲಿಯೂ ಸಹ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಾಗರ ಬಿಜೆಪಿ ಅಭ್ಯರ್ಥಿ ಶರಾವತಿ ಸಿ. ರಾವ್, ಸೊರಬ ಬಿಜೆಪಿ ಅಭ್ಯರ್ಥಿ ಚಿಕ್ಕಾವಲಿ ನಾಗರಾಜಗೌಡ, ವಿದಾನಪರಿಷತ್ ಸದಸ್ಯ ನಾರಾಯಣ ಸಾ. ಬಾಂಡಗೆ, ಪಕ್ಷದ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಜಿ.ಪಂ. ಮಾಜಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಮುಖಂಡರಾದ ಎ.ಎಸ್. ಪದ್ಮನಾಭ ಭಟ್, ಪಾಣಿ ರಾಜಪ್ಪ, ಹುಣವಳ್ಳಿ ಗಂಗಾಧರಪ್ಪ ಸೇರಿದಂತೆ ಹಲವು ಮುಖಂಡರಿದ್ದರು.
ತಾಲೂಕು ಬಿಜೆಪಿ ಅಧ್ಯಕ್ಷ ಯು.ಎಚ್. ರಾಮಪ್ಪ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

