ಶಿವಮೊಗ್ಗ

ಮತದಾನ ಮಾಡಿದ ಸರ್ಕಾರಿ ಸಿಬ್ಬಂದಿ

Published On :

ಕ.ಪ್ರ, ಶಿವಮೊಗ್ಗ, ಏ.23
ಚುನಾವಣೆಗೆ ಇನ್ನು 12 ದಿನ ಬಾಕಿ ಇದೆ. ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಇನ್ನಿಲ್ಲದ ಹರಸಾಹಸಪಡುತ್ತಿದ್ದರೆ, ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆಯೇ ಮಂಗಳವಾರ ವಿದ್ಯುಕ್ತವಾಗಿ ಚುನಾವಣಾ ಅಭ್ಯರ್ಥಿಗಳಿಗೆ ಮತದಾನ ನಡೆಯಿತು.
 ಇದ್ಯಾವುದೆಂದಿರಾ, ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸರ್ಕಾರಿ ಸಿಬ್ಬಂದಿ ತಮಗಿಷ್ಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಖುಷಿಪಟ್ಟರು.
ಮತದಾನ ಪ್ರಕ್ರಿಯೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಈ ಸಿಬ್ಬಂದಿಗೆ ತರಬೇತಿಯ ವೇಳೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಅದರಂತೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ನೌಕರರಿಗೆ ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿಯೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿತ್ತು.
ಮತದಾನಕ್ಕೆ ಅವಕಾಶ: ಕುವೆಂಪು ರಂಗಮಂದಿರದ ಪ್ರವೇಶ ದ್ವಾರದಲ್ಲಿಯೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನೌಕರರು ಫಾರಂ ನಂ.12ನ್ನು ಭರ್ತಿ ಮಾಡಿ, ಗೆಜೆಟ್ ಅಧಿಕಾರಿಯಿಂದ ದೃಢಪಡಿಸಿದ ನಂತರ ಅವರಿಗೆ ಅಂಚೆ ಮತ ಪತ್ರ ನೀಡಲಾಗುತ್ತಿತ್ತು. ಮತ ಪತ್ರದಲ್ಲಿ ತಮಗೆ ಇಷ್ಟವಾದ ಅಭ್ಯರ್ಥಿಗೆ ಮತ ಚಲಾವಣೆ ಮಾಡಿದ ನಂತರ ಸೀಲ್ ಮಾಡಿದ ಕವರ್ನಲ್ಲಿ ಫಾರಂ, ಬ್ಯಾಲೆಟ್ ಪೇಪರ್ ಇಟ್ಟು ಮತಪೆಟ್ಟಿಗೆಯಲ್ಲಿ ಹಾಕಿದರು.
 ಕಡ್ಡಾಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿಯೇ ಸಿಬ್ಬಂದಿ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಮಾಡಿಕೊಟ್ಟಿತ್ತು.
ಮತ ಪೆಟ್ಟಿಗೆಯನ್ನು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಬಿಗಿಭದ್ರತೆಯಲ್ಲಿ ಇಡಲಾಗುತ್ತದೆ. ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲಿರುವ ಸರ್ವಿಸ್ ವೋಟರ್ಸ್ಗಳಿಗೆ ಈಗಾಗಲೇ ಅಂಚೆ ಮೂಲಕ ಮತ ಪತ್ರ ಕಳುಹಿಸಲಾಗಿದೆ. ಅಲ್ಲಿಂದ ಅಂಚೆ ಮೂಲಕ ಬಂದ ನಂತರ ಮತ ಪತ್ರಗಳನ್ನು ಇದೇ ಭದ್ರತೆಯಲ್ಲಿಡಲಾಗುತ್ತದೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 847 ಸರ್ವಿಸ್ ವೋಟರ್ಸ್ ಇದ್ದಾರೆಂದು ಗುರುತಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ 74, ಶಿವಮೊಗ್ಗ 74, ಶಿವಮೊಗ್ಗ ನಗರ 102, ಭದ್ರಾವತಿ 319, ತೀರ್ಥಹಳ್ಳಿ 151, ಸಾಗರ 109, ಸೊರಬ 45 ಹಾಗೂ ಶಿಕಾರಿಪುರ 47 ಮತದಾರರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.