ರಂಗೋಲಿ ಕೆಳಗೆ ನುಸುಳಿದ ರಾಜಕೀಯ
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಹೊರಗೆ ಮದುಮಕ್ಕಳ ಹೆಸರು, ಸ್ವಾಗತ ಕಮಾನು. ಆದರೆ ಒಳಗೆ ನಡೆಯುತ್ತಿರುವುದೇ ಬೇರೆ. ಅಲ್ಲಿ ರಾಜಕೀಯ ಪಕ್ಷದ ಕಾರ್ನರ್ ಮೀಟಿಂಗ್ ಇಲ್ಲವೇ ಹೋಮ-ಹವನದ ಹೆಸರಿನಲ್ಲಿ ಸೀರೆ ಹಂಚುವ ಕಾರ್ಯಕ್ರಮ.
ಚುನಾವಣಾ ಆಯೋಗ ಕಟ್ಟುಪಾಡು ಬಿಗಿ ಮಾಡುತ್ತಿದ್ದರೆ, ಇನ್ನೊಂದೆಡೆ ರಂಗೋಲಿ ಕೆಳಗೆ ತೂರುವ ಕೆಲಸವನ್ನು ರಾಷ್ಟ್ರೀಯ ಪಕ್ಷವೊಂದರ ಪ್ರತಿಷ್ಠಿತ ಅಭ್ಯರ್ಥಿಯೊಬ್ಬರು ನಡೆಸುತ್ತಿದ್ದಾರೆ. ಈ ರೀತಿಯ ಕಾರ್ಯಕ್ರಮ ಅವರಿಗೆ ಸಂಬಂಧಿಸಿದ ಟ್ರಸ್ಟ್ವೊಂದರ ಕಲ್ಯಾಣ ಮಂದಿರದಲ್ಲಿಯೇ ನಡೆಯುತ್ತಿರುವುದು ವಿಶೇಷ.
ಇಷ್ಟೇ ಅಲ್ಲ. ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳನ್ನೂ ಅವರು ಪ್ರಾಯೋಜಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಪ್ರಸಾದ (?) ವಿತರಣೆಗೆ ಯಾವ ಅಡ್ಡಿಯೂ ಇಲ್ಲವಾಗಿದೆ.
ವಿವಿಧ ಸಭೆ: ಬಿಸಿಲು ಹೆಚ್ಚಾಗಿರುವುದರಿಂದ ಪಾದಯಾತ್ರೆ, ಮನೆಮನೆ ಪ್ರಚಾರವನ್ನು ಬೆಳಿಗ್ಗೆ ಹಾಗೂ ಸಂಜೆಗೆ ಸೀಮಿತಗೊಳಿಸಿರುವ ಅಭ್ಯರ್ಥಿಗಳು ಉಳಿದ ಅವಧಿಯಲ್ಲಿ ಸಣ್ಣಸಣ್ಣ ಗುಂಪುಗಳ ಸಭೆ ನಡೆಸುವತ್ತಲೇ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಈ ರೀತಿ ಸಭೆ ನಡೆಸುವುದಕ್ಕೆ ಚುನಾವಣಾ ಆಯೋಗದ ಅಭ್ಯಂತರವಿಲ್ಲ. ಆದರೆ ಅಲ್ಲಿ ಊಟೋಪಹಾರ ವ್ಯವಸ್ಥೆ, ಉಡುಗೊರೆ ವ್ಯವಸ್ಥೆ ಮಾಡುವುದಕ್ಕೆ ಮಾತ್ರ ಅವಕಾಶವಿಲ್ಲ. ಹಾಗಾಗಿ ರಾಜಕೀಯ ಪಕ್ಷಗಳು ಬಂದ ಅತಿಥಿಗಳಿಗೆ ಉಪಹಾರ ನೀಡುವುದಕ್ಕೂ ಪರದಾಡುವಂತಾಗಿದೆ. ಇನ್ನು ನಗರದ ವಿವಿಧ ಹೋಟೆಲ್ಗಳ ಸಭಾಂಗಣಗಳು ಹಲವು ದಿನಗಳ ಕಾಲ ಬುಕ್ ಆಗಿವೆ. ಜತೆಗೆ ವಿಶಾಲ ಮನೆಗಳಲ್ಲೂ ಸಭೆಗಳು ನಿರಾತಂಕವಾಗಿ ನಡೆಯುತ್ತಿವೆ.
ರಾಜಕೀಯ ಕೂಲಿ: ಚುನಾವಣಾ ಪ್ರಚಾರದ ಬಿಸಿ ಹೆಚ್ಚಾಗಿದ್ದರ ಪರಿಣಾಮ ಮಾರುಕಟ್ಟೆಗಳಲ್ಲಿ ಬೀದಿಬದಿ ಹಾಗೂ ತಳ್ಳುಗಾಡಿ ವ್ಯಾಪಾರಸ್ಥರೇ ಕಡಿಮೆಯಗಿದ್ದಾರೆ. ದಿನಕ್ಕೆ 300 ರು. ಜತೆಗೆ ಊಟ ಸಿಗುತ್ತಿರುವುದರಿಂದ ಸೊಪ್ಪು-ತರಕಾರಿ ಮಾರುವವರು, ಹಣ್ಣು ಮಾರುವವರು ಸೇರಿದಂತೆ ಹಲವು ರೀತಿಯ ಫುಟ್ಪಾತ್ವ್ಯಾಪಾರಿಗಳು ಕಡಿಮೆಯಾಗಿದ್ದಾರೆ. ಮನೆಗೆಲಸ ಮಾಡುವ ಮಹಿಳೆಯರೂ ಈಗ ದಿನಕ್ಕೆ 300 ರು. ಸಿಗುವ ರಾಜಕೀಯ ಕೆಲಸಕ್ಕೇ ಹೋಗುತ್ತಿದ್ದಾರೆ. ಇದರಿಂದ ಉದ್ಯೋಗಸ್ಥ ಮಹಿಳೆಯರುಪರದಾಡುವಂತಾಗಿದೆ.
ಇನ್ನೊಂದೆಡೆ ಪರದಾಟ
ಚುನಾವಣೆಯನ್ನು ಆಯೋಗ ಎಷ್ಟು ಬಿಗಿಯಾಗಿ ನಡೆಸುತ್ತಿದೆ ಎಂದರೆ ಇದರ ಪರಿಣಾಮ ಹಣ-ಹೆಂಡ ಹಂಚುವ ರಾಜಕೀಯ ಪಕ್ಷಗಳ ಮೇಲೆ ಮಾತ್ರವಲ್ಲ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೇಲೆಯೂ ಆಗುತ್ತಿದೆ.
ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕಿರುವುದರಿಂದ ಶ್ರದ್ಧೆಯಿಂದ ಧಾರ್ಮಿಕ ಕಾರ್ಯಕ್ರಮ ನಡೆಸುವವರು ಕಂಗಾಲಾಗಿದ್ದಾರೆ.
ಹಸೂಡಿಯಲ್ಲಿ ಕೆಂಡಾರ್ಚನೆ ಕಾರ್ಯಕ್ರಮವನ್ನು ಚುನಾವಣೆಯ ನಂತರ ಮುಂದೂಡಿರುವುದೇ ಇದಕ್ಕೆ ಸಾಕ್ಷಿ.
ಇನ್ನು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವವರು ಪರದಾಡುವಂತಾಗಿದೆ. ಕೆಲವು ದಿನಗಳ ಹಿಂದೆ ನಾಟಕೋತ್ಸವ ನಡೆಸಿದ ರಂಗತಂಡಕ್ಕೆ ನೀವು ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡಿದ್ದೀರಿ ಎಂದು ದೂರು ಬಂದಿದ್ದು, ವಿವರಣೆ ನೀಡಿ ಎಂದು ನೋಟಿಸ್ ಬಂದಿತ್ತು.
ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ಜಿಲ್ಲೆಯಾದ್ಯಂತ ವಿವಿಧ ಮಾದರಿಯ 158 ಪ್ರಕರಣಗಳು ಈಗಾಗಲೇ ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

