ಹಾಸಿಗೆ ಹಿಡಿದ ದಿನಗೂಲಿ ನೌಕರ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.27
ಆತ ಮನೆಯ ಆಗುಹೋಗುಗಳಲ್ಲಿ ಸದಾ ಚಟುವಟಿಕೆಯಿಂದ ಇದ್ದವನು, ಆದರೆ, ಈಗ ಹಾಸಿಗೆ ಹಿಡಿದಿದ್ದಾನೆ, ಮಗುವಿನ ರೀತಿ ನೋಡಿಕೊಳ್ಳಬೇಕಾದ ಸ್ಥಿತಿ.. ಎಂದು ಆತನ ತಂದೆ ಹೇಳುವಾಗ ಅವರ ಸಂಕಟ ಕಟ್ಟೆಯೊಡೆದಿತ್ತು. ತಮ್ಮ ಮಗನಿಗಾದ ಅನ್ಯಾಯವನ್ನು ಹೇಳಿಕೊಳ್ಳುವಾಗ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು.
ಇದು ಹಾಸಿಗೆ ಹಿಡಿದು ಅಕ್ಷರಶಃ ಮಗುವಿನಂತೆ ಅಪ್ಪ ಅಮ್ಮಂದಿರಿಂದ ಸೇವೆ ಪಡೆಯುತ್ತಿರುವ ಮಂಡ್ಲಿಯ ಅಜಯ್ ವ್ಯಥೆಯ ಕಥೆ. ಆತನ ತಂದೆ ಮಲ್ಲಿಕಾರ್ಜುನ ಈಗ ಮಗನಿಗಾಗಿರುವ ಅನ್ಯಾಯವನ್ನು ಸರ್ಕಾರಿ ವ್ಯವಸ್ಥೆಗೆ ತಿಳಿಸಲು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಹಳೇ ಮಂಡ್ಲಿಯಲ್ಲಿ ವಾಸವಾಗಿರುವ ಮಲ್ಲಿಕಾರ್ಜುನ ಮತ್ತು ಗಾಯಿತ್ರಿಯವರ ಎರಡನೇ ಮಗ ಅಜಯ್. ಈತ ನಗರಸಭೆಯ ವಾಟರ್ ಸಪ್ಲೈ ಕಂಟ್ರ್ಯಾಕ್ಟರ್ ಗುರು ಮತ್ತು ಪ್ರತಾಪ್ ಬಳಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದನು. ಆದರೆ, ಮಾರ್ಚ್ 28ರಂದು ವಾಟರ್ಹೌಸ್ ಬಳಿ ಕೆಲಸ ಮಾಡುತ್ತಿದ್ದಾಗ ಆಯಾ ತಪ್ಪಿ ಸುಮಾರು 20 ಅಡಿ ಎತ್ತರದಿಂದ ಬಿದಿದ್ದಾನೆ. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ನರಗಳು ತುಂಡು: ಆದರೆ, ಈತ ಬಿದ್ದ ರಭಸಕ್ಕೆ ಎದೆ ಭಾಗದ ನರಗಳು ತುಂಡಾಗಿದ್ದು, ಬಲಕಾಲಿನ ಮೂಳೆ ಸಹ ಮುರಿದಿದೆ. ಅಲ್ಲದೇ ಮಲ, ಮೂತ್ರ ಒಂದೇ ಜಾಗದಿಂದ ವಿಸರ್ಜನೆ ಆಗುತ್ತಿತ್ತು. ಅಜಯ್ ಪರಿಸ್ಥಿತಿ ದಿನದಿಂದ ದಿನಕ್ಕೆ ಕಠಿಣವಾದ್ದರಿಂದ ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದ ಸ್ಥಳೀಯ ಖಾಸಗಿ ಆಸ್ಪತ್ರೆ ವೈದ್ಯರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡುವಂತೆ ತಿಳಿಸಿದ್ದರು.
ಇಲ್ಲಿಯವರೆಗೆ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದ ಕಂಟ್ರ್ಯಾಕ್ಟ್ದಾರರು ಮಣಿಪಾಲ್ ಆಸ್ಪತ್ರೆ ದಾಖಲು ಮಾಡುವ ವೇಳೆ ಪಲಾಯನ ಮಾಡಿದ್ದಾರೆ. ಇದುವರೆಗೂ ಅಜಯ್ ಬಗ್ಗೆ ವಿಚಾರಿಸಿಲ್ಲ.
ಆದರೆ, ತಂದೆ ಮಲ್ಲಿಕಾರ್ಜುನ ಅವರು ಮಗನನ್ನು ಉಳಿಸಿಕೊಳ್ಳಲು ವಾಸವಾಗಿದ್ದ ಮನೆಯನ್ನು ಮಾರಾಟ ಮಾಡಿ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಧ್ಯವಾಗದರಿಂದ ಸದ್ಯ ಅಜಯ್ ಮನೆಯಲ್ಲಿದ್ದು, ತಂದೆ ತಾಯಿಯ ಆಶ್ರಯದಲ್ಲಿದ್ದಾನೆ.
ಜತೆಗಾರರು ಹಿದೇಟು: ಈ ಸಂಬಂಧ ಮಲ್ಲಿಕಾರ್ಜುನ ಅವರು ದೊಡ್ಡಪೇಟೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದುರದೃಷ್ಟವೆಂದರೆ ಅಜಯ್. ಜತಗೆ ಕೆಲಸ ಮಾಡುತ್ತಿದ್ದ ಆತನ ಸ್ನೇಹಿತರು ದೂರು ನೀಡುವ ವೇಳೆ ಸಹಿ (ಸಾಕ್ಷಿಗೆ) ಮಾಡಲು ಹಿಂಜರಿದಿದ್ದಾರೆ. ಅದರೊಂದಿಗೆ ದೂರು ದಾಖಲಿಸಿ ಹಲವು ದಿನಗಳು ಕಳೆದರೂ ಪೊಲೀಸರು ಸ್ಥಳ ಪರಿಶೀಲಿಸದೇ ನಿರ್ಲಕ್ಷ್ಯ ತೋರಿದ್ದಾರೆ. ನಗರಸಭೆ ಅಧಿಕಾರಿಗಳು ಗಮನಹರಿಸುಲ್ಲ.
ಇದೀಗ ಅಜಯ್ ತಂದೆ ಮಲ್ಲಿಕಾರ್ಜುನ ಡಿಸಿ ಮೊರೆ ಹೋಗಿದ್ದಾರೆ. ನನ್ನ ಮಗ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಘಟನೆ ನಡೆದಿದ್ದರಿಂದ ನಗರಸಭೆ ಅಥವಾ ವಾಟರ್ಸಪ್ಲೈ ಕಂಟ್ರ್ಯಾಕ್ಟರ್ ಪರಿಹಾರ ನೀಡಬೇಕು. ಆತನ ಚಿಕಿತ್ಸೆಗೆ ಇನ್ನೂ 1 ಲಕ್ಷ ಬೇಕಾಗಿದೆ. ಘಟನೆಯ ಬಗ್ಗೆ ಕುಲಂಕೂಷವಾಗಿ ಪರಿಶೀಲಿಸಿ ಮಗನ ಚಿಕಿತ್ಸೆಗೆ ಸಹಾಯ ಮಾಡಬೇಕು, ವಾಟರ್ ಹೌಸ್ನಲ್ಲಿಯೇ ಕೆಲಸ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

