ತಂತ್ರಗಾರಿಕೆ ಮೊರೆ ಹೋದ ಕೆಜೆಪಿ
ಶಿವಮೊಗ್ಗ: ರಾಜ್ಯದ ಬೇರೆ ಯಾವುದೇ ಜಿಲ್ಲೆಗಿಂತ ಶಿವಮೊಗ್ಗ ಜಿಲ್ಲೆ ಕರ್ನಾಟಕ ಜನತಾ ಪಕ್ಷಕ್ಕೆ ಪ್ರತಿಷ್ಠೆಯಾಗಿದೆ. ಏಕೆಂದರೆ -ಬೆನ್ನಿಗೆ ಚೂರಿ ಹಾಕಿದವರ- ವಿರುದ್ಧ ಸೇಡು ತೀರಿಸಿಕೊಳ್ಳಲು ಕೆಜೆಪಿ ಕ್ಯಾಪ್ಟನ್ ಬಿ.ೆಸ್. ಯಡಿಯೂರಪ್ಪ ತೊಡೆ ತಟ್ಟಿ ನಿಂತಿದ್ದಾರೆ. ಅವರ ಕ್ಷೇತ್ರ, ಅವರ ಸೇಡಿನ ಕ್ಷೇತ್ರ ಎರಡೂ ಇರುವುದು ಇದೇ ಜಿಲ್ಲೆಯಲ್ಲಿ. ಅದೇ ಶಿಕಾರಿಪುರ ಹಾಗೂ ಶಿವಮೊಗ್ಗ. ಹಾಗಾಗಿ ಯಡಿಯೂರಪ್ಪ ಅವರು ಇಲ್ಲಿ ತಮ್ಮ ಇಡೀ ರಾಜಕೀಯ ಅನುಭವಗಳನ್ನು ತಂತ್ರದ ಮೂಲಕ ಇಲ್ಲಿ ಧಾರೆ ಎರೆಯುತ್ತಿದ್ದಾರೆ.
ಕಳೆದ ಐದು ವರ್ಷದಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿಯ ಕ್ರೆಡಿಟ್ ಪಡೆದುಕೊಳ್ಳುವಲ್ಲಿ ಮೇಲ್ನೋಟಕ್ಕೆ ಬಿಜೆಪಿಗಿಂತ ಯಡಿಯೂರಪ್ಪ ಅವರೇ ಮುಂದಿದ್ದಾರೆ. ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳನ್ನು ತಾವೇ ಮಾಡಿದ್ದಾಗಿ ಮತದಾರರ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಅದೇ ಕೆಜೆಪಿಗೆ ಇರುವ ಪ್ಲಸ್ ಪಾಯಿಂಟ್.
ಮೈನಸ್ ಪಾಯಿಂಟ್: ಒಂದು ಮೈನಸ್ ಪಾಯಿಂಟ್ ಸಹ ಈ ಪಕ್ಷಕ್ಕಿದೆ. ಕರ್ನಾಟಕ ಜನತಾ ಪಕ್ಷವೀಗ ಕೇವಲ ಬಿಜೆಪಿಯಿಂದ ಸಿಡಿದು ಬಂದ ಪಕ್ಷವಾಗಿ ಉಳಿದಿಲ್ಲ. ಆಪರೇಷನ್ ಕಮಲ ಪಿತಾಮಹ ಯಡಿಯೂರಪ್ಪ ಹಾಗೂ ಅವರ ಬಳಗ ನಿರಂತರ ನಡೆಸಿದ ಆಪರೇಷನ್ನಿಂದಾಗಿ ಹಲವು ಪಕ್ಷಗಳ ಅತೃಪ್ತರ ತಾಣವಾಗಿದೆ. ಬಂದವರೆಲ್ಲರೂ ಅಧಿಕಾರದ ಆಕಾಂಕ್ಷಿಗಳೇ. ಹೀಗೆ ಒಟ್ಟುಗೂಡಿದ ಅತೃಪ್ತಿ ಪಕ್ಷಕ್ಕೆ ಹಲವು ಸಮಸ್ಯೆಗಳನ್ನೂ ಮಾಡಿದೆ.
ಪದಾಧಿಕಾರಿ ಸ್ಥಾನ, ಪಕ್ಷದ ಟಿಕೆಟ್ ಸಿಗಲಿಲ್ಲ ಎಂಬ ಕಾರಣದಿಂದ ಹಲವರು ವಾಪಸು ಸಿಡಿದು ಹೋಗಿದ್ದಾರೆ. ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಭದ್ರಾವತಿ ಕಾಂಗ್ರೆಸ್ ಮುಖಂಡ ಸತೀಶ್ ಗೌಡ, ಬಿಜೆಪಿಯ ಜಿ.ಪಂ. ಸದಸ್ಯ ಅಶೋಕ್ ಸೇರಿದಂತೆ ಹಲವರು ಈಗ ಕೆಜೆಪಿ ಜತೆಗಿಲ್ಲ.
ರಾಘವೇಂದ್ರ ಮೌನ: ಇನ್ನೊಂದೆಡೆ ಜಿಲ್ಲೆಯ ಮಟ್ಟಿಗೆ ಯೂತ್ ಐಕಾನ್ ಆಗಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಬಿಜೆಪಿಯಿಂದ ಅಮಾನತು ಆಗಿದ್ದರೂ ಕೆಜೆಪಿ ಪರ ಬಹಿರಂಗ ಪ್ರಚಾರ ಮಾಡಲು ಅಸಹಾಯಕರಾಗಿರುವುದು ಈ ಪಕ್ಷದ ಪಾಲಿಗೆ ನಷ್ಟವೇ.
ಒಟ್ಟಾರೆ ಜಿಲ್ಲೆಯಲ್ಲಿ ಕೆಜೆಪಿಗೆ 1 ಕ್ಷೇತ್ರ ಸುಲಭದ ತುತ್ತಾಗಿದ್ದರೆ, ಇನ್ನೊಂದು ಕ್ಷೇತ್ರದಲ್ಲಿ ಅದೃಷ್ಟ ಆಟವಾಡುತ್ತಿದೆ. ಮೂರು ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿ ಎದುರಾಗಿದೆ. ಮತ್ತೊಂದು ಕ್ಷೇತ್ರ ಕೆಜೆಪಿ ಲೆಕ್ಕಕ್ಕೆ ಬರುತ್ತದೆಯೋ ಇಲ್ಲವೋ ಎಂಬುದು ಚುನಾವಣೆಯ ನಂತರವೇ ಗೊತ್ತಾಗಲಿದೆ.
ಗೆಲ್ಲುವತ್ತ ಗಮನ: ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಕರ್ನಾಟಕ ಜನತಾ ಪಕ್ಷವು ಜಿಲ್ಲೆಯ ಹಲವು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. 1999ರ ಚುನಾವಣೆ ಹೊರತುಪಡಿಸಿ 1983ರಿಂದ ಇದೂವರೆಗಿನ ಎಲ್ಲಾ ಚುನಾವಣೆಯನ್ನೂ ಶಿಕಾರಿಪುರದಿಂದ ಗೆದ್ದಿರುವ ಬಿ.ಎಸ್. ಯಡಿಯೂರಪ್ಪ ಈ ಪಕ್ಷದ ಹಾಟ್ ಫೇವರಿಟ್. ಇಲ್ಲಿ ಇವರ ಒಂದು ಕಾಲದ ಗೆಳೆಯ ಶಾಂತವೀರಪ್ಪ ಗೌಡ ಇವರಿಗೆ ಎದುರಾಳಿ. ಜೆಡಿಎಸ್ನ ಬಳಿಗಾರ್, ಬಿಜೆಪಿಯ ಎಸ್.ಎಚ್. ಮಂಜುನಾಥ್, ಬಿಎಸ್ಆರ್ ಕಾಂಗ್ರೆಸ್ನ ಫಕೀರಪ್ಪ ಕಣದಲ್ಲಿದ್ದಾರೆ.
2008ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಅತಿ ಹೆಚ್ಚು ಅಂತರದಿಂದ ಸೋಲಿಸಿರುವ ಯಡಿಯೂರಪ್ಪ ಈ ಬಾರಿಯೂ ಅದೇ ವಿಶ್ವಾಸದಲ್ಲಿದ್ದಾರೆ. ಆದರೆ ಶಾಂತವೀರಪ್ಪಗೌಡ ಅವರು ನಾಮಪತ್ರ ಸಲ್ಲಿಸುವಾಗ ಮೆರವಣಿಗೆಯಲ್ಲಿ ಸೇರಿದ್ದ ಜನಸ್ತೋಮ ಅವರ ವಿಶ್ವಾಸವನ್ನು ಅಲ್ಲಾಡಿಸಿದೆ.
ಹೊಸ ಮುಖ: ಇನ್ನು ಯಡಿಯೂರಪ್ಪ ಅವರು ಸೇಡು ತೀರಿಸಿಕೊಳ್ಳಲು ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರ ಎದುರು ಕಣಕ್ಕಿಳಿಸಿರುವುದು ರಾಜಕೀಯಕ್ಕೆ ಹೊಸ ಮುಖವಾಗಿರುವ ಎಸ್. ರುದ್ರೇಗೌಡ ಅವರನ್ನು. ಕೆಜೆಪಿಯು ಇಲ್ಲಿ ಶಿಕಾರಿಪುರಕ್ಕಿಂತ ಹೆಚ್ಚು ತಂತ್ರಗಾರಿಕೆಯನ್ನು ಇಲ್ಲಿ ನಡೆಸುತ್ತಿದ್ದಾರೆ. ಲಿಂಗಾಯಿತ ಮತಗಳ ಜತೆ ಮುಸ್ಲೀಂ ಮತಗಳತ್ತ ಇವರು ಕಣ್ಣಿಟ್ಟಿದ್ದಾರೆ. ತಂತ್ರಗಾರಿಕೆ ಯಾವ ಫಲ ನೀಡುವುದೆಂದು ಇನ್ನೂ ಕೆಜೆಪಿಗೇ ಗೊತ್ತಾದಂತಿಲ್ಲ.
ಸಾಗರದಲ್ಲಿ ತಿಣುಕಾಟ: ಇನ್ನು ಸಾಗರದಲ್ಲಿ ಕೆಜೆಪಿಯು ನಂಬಿಕೊಂಡಿರುವುದು ಬಿ.ಆರ್. ಜಯಂತ್ ಅವರನ್ನು. ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದರೂ ಜಯಂತ್ ಹೆಸರು ಕೆಡಿಸಿಕೊಂಡವರಲ್ಲ. ಆದರೆ ಅದೃಷ್ಟಶಾಲಿ ಅಲ್ಲ. ಈ ಬಾರಿ ಅದೃಷ್ಟ ಅವರ ಪಾಲಿಗೆ ಒಲಿಯಲು ಭಾರಿ ಕಸರತ್ತು ನಡೆಸಬೇಕಿದೆ.
ತೀರ್ಥಹಳ್ಳಿಯಲ್ಲಿ ಅಭ್ಯರ್ಥಿಯಾಗಿರುವ ಸಹಕಾರ ಕ್ಷೇತ್ರದ ಧುರೀಣ ಆರ್.ಎಂ. ಮಂಜುನಾಥ ಗೌಡ ಎಲ್ಲ ರೀತಿಯ ಪ್ರಯತ್ನವನ್ನೂ ನಡೆಸಿದ್ದಾರೆ. ಹಲವು ತಿಂಗಳಿಂದಲೇ ನಡೆಸಿದ್ದಾರೆ. ಆದರೆ ಇವರಿಗೆ ಇಲ್ಲಿ ಭಾರಿ ಪೈಪೋಟಿ ಇದೆ. ಬಿಜೆಪಿಯ ಆರಗ ಜ್ಞಾನೇಂದ್ರ, ಕಾಂಗ್ರೆಸ್ನ ಕಿಮ್ಮನೆ ರತ್ನಾಕರ್ ಅವರನ್ನು ಸುಲಭವಾಗಿ ಪರಿಗಣಿಸುವಂತಿಲ್ಲ.
ಹಾಲಪ್ಪ ನಿರೀಕ್ಷೆ: ಸೊರಬದಲ್ಲಿ ಹರತಾಳು ಹಾಲಪ್ಪ ಅವರು ಬಂಗಾರಪ್ಪ ಅವರ ಇಬ್ಬರು ಪುತ್ರರ ನಡುವಿನ ಹೋರಾಟ 2008ರ ಚುನಾವಣೆಯಂತೆ ಈ ಬಾರಿಯೂ ತಮಗೆ ಅನುಕೂಲವಾಗುವುದೇ ಎಂದು ಕಾಯುತ್ತಿದ್ದಾರೆ.
ಗ್ರಾಮಾಂತರ ಕ್ಷೇತ್ರದಲ್ಲಿ ಬಸವಣ್ಯಪ್ಪ ಹಲವು ಸಂಕಷ್ಟಗಳ ನಡುವೆ ಮುನ್ನುಗ್ಗುತ್ತಿದ್ದಾರೆ. ಭದ್ರಾವತಿಯಲ್ಲಿ ಮಾತ್ರ ಕೆಜೆಪಿ ಅಭ್ಯರ್ಥಿ ಇಲ್ಲ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ ಅವರನ್ನೇ ಬೆಂಬಲಿಸುತ್ತಿದೆ.
-ಹೊನ್ನಾಳಿ ಚಂದ್ರು/ ಶ್ರೀಕಾಂತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

