ಶಿವಮೊಗ್ಗ

ಕೆಜೆಪಿ ಬಿರುಗಾಳಿಗೆ ಕಮಲ ಕಂಪನ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.29
2008ರ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಬಿಜೆಪಿಯೇ ಹಾಹ್ ಫೇವರಿಟ್. ಈ ಬಾರಿ ಸಂಪೂರ್ಣ ಉಲ್ಟಾ. ಅವತ್ತು ಯಡಿಯೂರಪ್ಪ ಅಲೆಯಲ್ಲಿ ಕಮಲ ಮೇಲೆದ್ದು ನಿಂತಿತ್ತು. ಇವತ್ತು ಅವರದೇ ಪ್ರಭಾವದಿಂದ ಮುರುಟುತ್ತಿದೆ. ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಟ ನಡೆಸುತ್ತಿದೆ. ಆದರೂ ಪಟ್ಟು ಬಿಡದೆ ಮತ್ತೆ ಮತ್ತೆ ಪುಟಿದು ಮೇಲೇಳುವ ಪ್ರಯತ್ನ ನಡೆಸುತ್ತಲೇ ಇದೆ.
ಬೇರೆ ಪಕ್ಷಗಳ ಸ್ಟಾರ್ ಪ್ರಚಾರಕರು ಜಿಲ್ಲೆಗೆ ಬರುವ ಮುಂಚೆಯೇ ಬಿಜೆಪಿಯ ರಾಷ್ಟ್ರ ನಾಯಕರು ಬಂದು ಹೋಗಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್, ಸುಶ್ಮಾ ಸ್ವರಾಜ್, ಅರುಣ್ ಜೇಟ್ಲಿ ಜಿಲ್ಲೆಗೆ ಆಗಮಿಸಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಮತ್ತೆ ಎರಡನೇ ಸುತ್ತಿನ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.
ಸಾಮಾನ್ಯವಾಗಿ ಆಡಳಿತ ನಡೆಸಿದ ಪಕ್ಷಗಳ ಅಭ್ಯರ್ಥಿಗಳು ನಂತರದ ಚುನಾವಣೆಯಲ್ಲಿ ವಿರೋಧಿ ಅಲೆಯನ್ನು ಎದುರಿಸಬೇಕಾಗುತ್ತದೆ. ಅದು ಸುಲಭವಾಗುವುದು ವೈಯಕ್ತಿಕ ವರ್ಚಸ್ಸಿನೊಂದಿಗೆ. ಹಾಗಾಗಿ ಆಡಳಿತ ವಿರೋಧಿ ಅಲೆಯನ್ನು ಮೀರಲು ಬಿಜೆಪಿ ಅಭ್ಯರ್ಥಿಗಳು ಭಾರಿ ಶ್ರಮ ಪಡುತ್ತಿದ್ದಾರೆ.
ಬಿಜೆಪಿ ಸೋಲಿಸುವುದೇ ಗುರಿ: ಬಿಜೆಪಿಯಿಂದ ಸಿಡಿದು ಕೆಜೆಪಿ ಕಟ್ಟಿರುವ ಯಡಿಯೂರಪ್ಪ ಅವರ ಮೊದಲ ಗುರಿಯೇ ಬಿಜೆಪಿ ಸೋಲಿಸುವುದು. ಹಾಗಾಗಿ ಒಂದೆರಡು ಕ್ಷೇತ್ರಗಳಲ್ಲಿ ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಬಿಜೆಪಿ ಸಿಕ್ಕಾಪಟ್ಟೆ ಬೆವರು ಸುರಿಸಬೇಕಾಗಿದೆ. ಪಕ್ಷದ 32 ವರ್ಷಗಳ ಇತಿಹಾಸದಲ್ಲಿ ಬಿಜೆಪಿಯು ಇಷ್ಟು ಪ್ರಮಾಣದ ರಕ್ತಕಣ್ಣೀರನ್ನು ಯಾವತ್ತೂ ಹರಿಸಿರಲಿಲ್ಲ.
ಜಿಲ್ಲೆಯ ಏಳೂ ಕ್ಷೇತ್ರದಲ್ಲಿ ಬಿಜೆಪಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇವರಲ್ಲಿ ಪ್ರಭಲ ಪೈಪೋಟಿ ನೀಡುತ್ತಿರುವುದು ಶಿವಮೊಗ್ಗ ಕ್ಷೇತ್ರದ ಕೆ.ಎಸ್. ಈಶ್ವರಪ್ಪ, ತೀರ್ಥಹಳ್ಳಿ ಕ್ಷೇತ್ರದ ಆರಗ ಜ್ಞಾನೇಂದ್ರ ಮತ್ತಿತರರು ಮಾತ್ರ.
ಭಾರಿ ಪೈಪೋಟಿ: ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣ. ಐದು ಚುನಾವಣೆಯಲ್ಲಿ ನಾಲ್ಕು ಬಾರಿ ಜಯ ಗಳಿಸಿರುವ ಈಶ್ವರಪ್ಪ ಅವರು ಯಾವುದೇ ಬೆಲೆ ಬೇಕಾದರೂ ತೆತ್ತು ಗೆಲ್ಲುವುದಕ್ಕೆ ಶ್ರಮಿಸುತ್ತಿದ್ದಾರೆ. ಇವರಿಗೆ ವಿರೋಧಿ ಅಭ್ಯರ್ಥಿಗಳು ಪ್ರಭಲ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಂ. ಶ್ರೀಕಾಂತ್ ದಿನೇದಿನೇ ಶಕ್ತಿ ವೃದ್ಧಿಸಿಕೊಳ್ಳುತ್ತಿದ್ದಾರೆ. ಕೆಜೆಪಿಯ ರುದ್ರೇಗೌಡರು ಹಾಗೂ ಕಾಂಗ್ರೆಸ್‌ನ ಕೆ.ಬಿ. ಪ್ರಸನ್ನಕುಮಾರ್ ಅವರು ಎಲ್ಲಾ ರೀತಿಯ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.
ಶಿವಮೊಗ್ಗ ಗಡಿ ದಾಟಿಲ್ಲ: ಕೆ.ಎಸ್. ಈಶ್ವರಪ್ಪ ಅವರಿಗೆ ಜಿಲ್ಲೆಯ ಬೇರೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಕ್ಕೆ ಬಿಡುವೇ ಇಲ್ಲವಾಗಿದೆ. ಒಮ್ಮೆ ರಾಜನಾಥ ಸಿಂಗ್ ಅವರ ಕಾರ್ಯಕ್ರಮಕ್ಕೆಂದು ಸಾಗರಕ್ಕೆ ಹಾಗೂ ಪ್ರಶಸ್ತಿ ಸ್ವೀಕರಿಸಲು ಒಂದು ದಿನ ದೆಹಲಿಗೆ ಹೋಗಿದ್ದು ಬಿಟ್ಟರೆ ಅವರು ಶಿವಮೊಗ್ಗ ಕ್ಷೇತ್ರದ ಗಡಿ ದಾಟಿಲ್ಲ. ಇದೇ ತೋರಿಸುತ್ತಿದೆ ಅವರು ಚುನಾವಣೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂಬುದನ್ನು.
ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಜಿ. ಕುಮಾರಸ್ವಾಮಿ ಮರುಆಯ್ಕೆ ಬಯಸಿದ್ದಾರೆ. ಇದನ್ನು ಖಚಿತಪಡಿಸಿಕೊಳ್ಳಲು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರೊಂದಿಗೆ ಕ್ಷೇತ್ರಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ. ಕೆಲವು ಕಡೆ ಒಳ್ಳೆಯ ಸ್ವಾಗತ ಸಿಕ್ಕಿದ್ದರೆ, ಉಳಿದ ಕಡೆ ಇನ್ನೂ ಒಳ್ಳೆಯ ಸ್ವಾಗತ ಸಿಕ್ಕಿದೆ.
ಇನ್ನು ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಬಿಜೆಪಿಗೆ ಇತ್ತೀಚೆಗೆ ವಲಸೆ ಬಂದಿರುವ ಕೊಪ್ಪಲು ಮಂಜಣ್ಣ ನಿಂತಿದ್ದಾರೆ. ಸೊರಬದಲ್ಲಿ ಚಿಕ್ಕಾವಲಿ ನಾಗರಾಜ ಗೌಡ, ಭದ್ರಾವತಿಯಲ್ಲಿ ಶಿವಾಜಿರಾವ್ ಸಿಂದ್ಯಾ, ಸಾಗರದಲ್ಲಿ ಶರಾವತಿ ಸಿ. ರಾವ್ ಕಣದಲ್ಲಿದ್ದು, ಬಿಜೆಪಿ ನಾಮಬಲವೊಂದನ್ನೇ ಗೆಲ್ಲುವುದಕ್ಕೆ ನಂಬಿಕೊಂಡಿದ್ದಾರೆ.
ತೀರ್ಥಹಳ್ಳಿಯ ಹ್ಯಾಟ್ರಿಕ್ ಹೀರೋ ಆರಗ ಜ್ಞಾನೇಂದ್ರ ಪ್ರಭಲ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಸುತ್ತಿದ್ದಾರೆ. ಒಂದೆಡೆ ಕಿಮ್ಮನೆ ರತ್ನಾಕರ್, ಇನ್ನೊಂದೆಡೆ ಮಂಜುನಾಥ ಗೌಡ ಅವರ ನಿದ್ದೆಗೆಡಿಸಿದ್ದಾರೆ. ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಲು ಅವರು ಈ ತುರುಸಿನ ಸ್ಪರ್ಧೆಯ ನಡುವೆ ಭಾರಿ ಪ್ರಯಾಸ ಪಡಬೇಕಾಗಿದೆ.
-ಹೊನ್ನಾಳಿ ಚಂದ್ರು/ಶ್ರೀಕಾಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.